ಬ್ರೇಕಿನ ನಂತರ ಬಣ್ಣ ಹೊಸದಾಗಿದೆ !

Update: 2020-05-27 16:59 GMT

ಎರಡು ತಿಂಗಳ ಗೃಹಬಂಧನದ ನಂತರ ಬದುಕು ಮತ್ತೆ ಗರಿಗೆದರುತ್ತಿದೆ. ಬಸ್ಸುಗಳು ರಸ್ತೆಗಿಳಿದಿವೆ, ವಿಮಾನಗಳು ಆಕಾಶಕ್ಕೇರಿವೆ. ಆದರೂ ಬದುಕು ಸಂಪೂರ್ಣ ಯಥಾಸ್ಥಿತಿಗೆ ಮರಳಿದೆ ಅನ್ನಿಸ್ತಿಲ್ಲ. ಯಾಕೆಂದರೆ ನಮ್ಮ ಬದುಕಿನ ಯಥಾಸ್ಥಿತಿ ಅನ್ನೊದು ಟಿವಿ ಧಾರಾವಾಹಿಗಳ ಕಥಾ ಸ್ಥಿತಿಯ ಜೊತೆಗೂ ಬೆಸೆದುಕೊಂಡಿದೆ. ದೈನಂದಿನ ಬದುಕನ್ನ ಮುಂದುವರಿಸುವ ಸೀರಿಯಲ್ಲುಗಳು ಶುರುವಾಗದ ಹೊರತು ಜನರ ಮನಸಿನ ಲಾಕ್ ಡೌನ್ ಮುಗಿಯುವುದಿಲ್ಲ.

ವಿಮಾನಗಳು ಆಕಾಶಕ್ಕೇರುವುದರಷ್ಟೇ, 'ರಾಶಿ'ಯ ಆಟೋ ರಸ್ತೆಗಿಳಿಯುವುದೂ ನೋಡುಗರಿಗೆ ಮುಖ್ಯ, ಮಕ್ಕಳ ಶಾಲೆಗಳು ಸದ್ಯಕ್ಕೆ ಶುರುವಾ ಗುವ ಲಕ್ಷಣಗಳಿಲ್ಲದಿದ್ದರೂ 'ಕನ್ನಡತಿ'ಯ ಕ್ಲಾಸುಗಳು ಶುರುವಾದರೆ ಅಷ್ಟರ ಮಟ್ಟಿಗೆ ಸಮಾಧಾನ. ಜಗತ್ತೆಲ್ಲಾ ಬಾಯಿಗೆ ಬಟ್ಟೆ ಕಟ್ಟಿಕೊಂಡಿದ್ದರೂ. 'ಮೀರಾ' ಒಬ್ಬಳು ಪಟಪಟ ಮಾತಾಡುತ್ತಿದ್ದರೆ ಎಲ್ಲವೂ ಸರಿ ಇದೆ ಅನ್ನುವ ಖುಷಿ. ಕೋಟಿಗಟ್ಟಲೆ ವೀಕ್ಷಕರ ಪಾಲಿಗೆ ಯಥಾಸ್ಥಿತಿ ಅಂದರೆ ಅದು!

ಇದೀಗ ಆ ಶುಭ ಸಮಯವೂ ಬಂದಿದೆ. ಜೂನ್ ಒಂದನೇ ತಾರೀಖಿನಿಂದ ಧಾರಾವಾಹಿಗಳು ಮತ್ತೆ ಪ್ರಸಾರವಾಗಲಿವೆ. ಬದಲಾದ ಪರಿಸ್ಥಿತಿ ಯಲ್ಲಿ ಈಗಾಗಲೇ ಚಿತ್ರೀಕರಣವೂ ಶುರುವಾಗಿದೆ. ಕ್ಯಾಮರಾ, ಟ್ರಾಲಿ, ಲೈಟುಗಳ ಜೊತೆಯಲ್ಲಿ  ಮಾಸ್ಕು, ಸ್ಯಾನಿಟೈಸರ್, ಸೋಪುಗಳನ್ನು ಸಹ ಹರಡಿಕೊಂಡು ಸದ್ದಿಲ್ಲದೆ 'ಆಕ್ಷನ್' ಶುರುವಾಗಿದೆ. ಅಷ್ಟಕ್ಕೂ, ಧಾರಾವಾಹಿ ಅಂದ್ರೇನೇ ಡೈಲಿ 'ಸೋಪ್' ಅಲ್ವಾ?!

ಆದರೆ ಇದು ಬರೀ ಬ್ರೇಕ್ ನ ನಂತರ ಮುಂದುವರಿದ ಕಾರ್ಯಕ್ರಮವಲ್ಲ. ಇದೊಂಥರಾ ಹೊಸ ಆರಂಭ. ರೀಸ್ಟಾರ್ಟ್! ಕಲರ್ಸ್ ಕನ್ನಡ ವಾಹಿನಿ ಯಂತೂ  ಪರಿಸ್ಥಿತಿಯನ್ನು ಸವಾಲಾಗಿ ತೆಗೆದುಕೊಂಡು ಹೊಸ ಬಣ್ಣದಲ್ಲಿ ನಿಮ್ಮೆದುರು ಬರಲು ಸಿದ್ಧವಾಗಿದೆ. “ನಿರಂತರವಾಗಿ ಓಡುತ್ತಲೇ ಇರುವವರು, ಮಳೆ ಸುರಿದಾಗ ವಿಧಿಯಿಲ್ಲದೆ ಮರದಡಿ ನಿಲ್ಲುತ್ತೇವಲ್ಲ, ಹಾಗೆ ಈ ಲಾಕ್‌ಡೌನಿನ ವಿರಾಮವೂ ಎಲ್ಲರಿಗೂ ತುಸು ನಿಂತು ಯೋಚಿಸಿ ಹೊಸ ಹುರುಪಿನಲ್ಲಿ ಮುಂದೆ ಸಾಗುವ ಅವಕಾಶವೊಂದನ್ನು ನೀಡಿದೆ. ಹಾಗಾಗಿ ಇದು ಬರೀ ಮುಂದುವರಿಕೆಯಲ್ಲ, ಹೊಸ ಪಯಣ” ಎನ್ನುತ್ತಾರೆ ವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರಿನ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್. ಹಾಗಾಗಿ ಜೂನ್ ಒಂದರಿಂದ ನೀವು ನೋಡಲಿರುವ ಕಲರ್ಸ್ ಕನ್ನಡ ಹೊಸ ಬಣ್ಣ ಹೊಸ ರೂಪದಲ್ಲಿ ಇರಲಿದೆ ಎನ್ನುತ್ತಾರೆ ಅವರು.

'ಬಣ್ಣ ಹೊಸದಾಗಿದೆ; ಬಂಧ ಬಿಗಿಯಾಗಿದೆ!' ಎನ್ನುವುದು ಕಲರ್ಸ್ ಕನ್ನಡ ಚಾನೆಲ್ಲಿನ ಹೊಸ ಘೋಷವಾಕ್ಯ. ಈ ಹೊಸ ಆರಂಭದ ಸಂಭ್ರಮವನ್ನು ವೀಕ್ಷಕರಿಗೆ ತಿಳಿಸಲು ಚಾನೆಲ್ ಈಗಾಗಲೇ ಹಲವು ಚೆಂದದ ಜಾಹಿರಾತುಗಳನ್ನು ರೂಪಿಸಿದೆ. ನಟನಟಿಯರೆಲ್ಲಾ ಬಣ್ಣ ಬಣ್ಣದ ಮಾಸ್ಕುಗಳನ್ನು ಧರಿಸಿ ನಗುಮುಖದಿಂದ ಓಡಾಡುತ್ತಿರುವ ಈ ಜಾಹಿರಾತುಗಳು ವೀಕ್ಷಕರ ಗಮನ ಸೆಳೆದಿವೆ.

ಕೊರೋನಾ ನಂತರದಲ್ಲಿ ಜಗತ್ತಿನ ಪ್ರತಿ ಸಂಗತಿಯೂ ಹೊಸ ನಿಯಮಗಳ ಅನುಸಾರವೇ ನಡೆಯಬೇಕು; ಚಿತ್ರೀಕರಣವೂ ಅದಕ್ಕೆ ಹೊರತಲ್ಲ. ಪದೇಪದೇ ಕೈ ತೊಳೆಯಬೇಕು, ಶೂಟಿಂಗ್ ಬ್ರೇಕಿನಲ್ಲೂ ಇತರರನ್ನ ಕೈಕುಲುಕದೆ ಮಾತಾಡಿಸಬೇಕು, ಮೇಕಪ್ಪಿನಿಂದ ಚಾ ಕಪ್ಪಿನವರೆಗೂ ನಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕು, ಎಸಿ ಹಾಕೋ ಹಾಗಿಲ್ಲ, ಚಿತ್ರೀಕರಣದ ಜಾಗದಲ್ಲಿ ಹೆಚ್ಚು ಜನ ಇರೋ ಹಾಗಿಲ್ಲ... ಲೈಟ್ಸ್- ಕ್ಯಾಮರಾ- ರಿಮೂವ್ ದ ಮಾಸ್ಕ್- ಆಕ್ಷನ್! ಹೀಗೆ ಶೂಟಿಂಗಿನ ವ್ಯಾಕರಣವನ್ನೇ ಬದಲಾಯಿಸುವ ಈ ಮಾಸ್ಕಿನ ಗುದ್ದಾಟ ಸದ್ಯಕ್ಕೆ ಮುಗಿಯುವಂಥದ್ದಲ್ಲ.

ತಕ್ಷಣಕ್ಕೆ ಇಂಥ ಕಟ್ಟಳೆಗಳು ಅಡ್ಡಿಯೆಂದು ಅನಿಸಬಹುದು. ಆದರೆ ಅಸಂಖ್ಯಾತ ಕಟ್ಟಳೆಗಳ ನಡುವೆಯೇ ಅದ್ಭುತ ಸಿನಿಮಾಗಳನ್ನು ಮಾಡಬಹುದು ಅಂತ ಇರಾನಿ ಸಿನಿಮಾಗಳು ನಮಗೆ ತೋರಿಸಿಕೊಟ್ಟಿಲ್ಲವೆ? ಒಂಡೇ, ಟಿ- ಟ್ವೆಂಟಿ ಪಂದ್ಯಗಳ ಸೀಮಿತತೆಯೇ ಕ್ರಿಕೆಟಿಗೆ ರಂಗೇರಿ ಸಲಿಲ್ಲವೆ? ಹಾಗೆಯೇ ಈ ಬಿಡುವು ಮತ್ತು ಹೊಸ ಪರಿಸ್ಥಿತಿಗಳು ಮನರಂಜನೆಗೂ ಹೊಸ ಬಣ್ಣ ತಂದುಕೊಡುತ್ತದೆ ಎನ್ನುತ್ತಾರೆ ಪರಮ್.

ಕೊರೋನಾ ನಂತರದ ಶೂಟಿಂಗ್ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹೊಸ ಅನುಭವ ನೀಡುತ್ತಿದೆ. 'ಕಷ್ಟ ಸುಖ ಅನ್ನೋಕಿಂತ ಇದೊಂದು ಚಾಲೆಂಜ್' ಎನ್ನುತ್ತಾರೆ ‘ಮಿಥುನರಾಶಿ’ ಧಾರಾವಾಹಿಯ ನಿರ್ಮಾಪಕ ನರಹರಿ. “ಹಳೆಯ ತಂತ್ರಜ್ಞರೆಲ್ಲಾ ಊರಿಗೆ ಹೋಗಿ ಕೂತಿದ್ದಾರೆ, ಹೊಸ ಬರೊಡನೆ ಹೊಂದಿಕೊಳ್ಳಲು ಸಮಯ ಹಿಡಿಯುತ್ತಿದೆ” ಅನ್ನುವುದು ಅವರ ಕಷ್ಟ.

ನಿರ್ದೇಶಕ ರಾಮ್‌ಜಿಯವರಿಗಂತೂ ಡಬಲ್ ಟ್ರಬಲ್. ಯಾಕಂದ್ರೆ ಅವರು ‘ಗೀತಾ’ ಹಾಗೂ ‘ಮಂಗಳಗೌರಿ ಮದುವೆ'  ಎರಡೂ ಧಾರಾವಾಹಿ ಗಳ ನಿರ್ದೇಶಕ ಹಾಗೂ ನಿರ್ಮಾಪಕ. “ಕೊರೋನಾ ಜತೆ ಸಂಸಾರ ಮಾಡೋದು ತುಂಬಾ ಕಷ್ಟ, ಎಲ್ಲಾ ಸೆಟ್ಟಲ್ಲೂ ನರ್ಸ್‌ಗಳನ್ನು ಇರಿಸಿದ್ದೇವೆ. ಮಾಸ್ಕು ಉಸಿರುಗಟ್ಟಿಸುತ್ತೆ, ಗ್ಲೌಸು ಬೆವರು ಹರಿಸುತ್ತೆ, ಬೆವರಿನಿಂದಾಗಿ ಮೇಕಪ್ಪು ನಿಲ್ತಾ ಇಲ್ಲ. ಏನು ಮಾಡೋದು?” ಅಂತಾರೆ ಅವರು.

ನಟ ನಟಿಯರ ಅನುಭವಗಳು ಇನ್ನೊಂದು ಥರ. “ಎರಡು ತಿಂಗಳಿಂದ ಮೀರಾಳನ್ನ ತುಂಬಾ ಮಿಸ್ ಮಾಡ್ಕೊತಾ ಇದ್ದೆ, ಈಗ ಶೂಟಿಂಗ್ ಶುರುವಾಗಿರೋದರಿಂದ ಥ್ರಿಲ್ ಆಗಿದೀನಿ” ಅಂತಾರೆ 'ನಮ್ಮನೆ ಯುವರಾಣಿ'ಯ ಮೀರಾ ಪಾತ್ರಧಾರಿ ಅಂಕಿತಾ.

“ಎರಡು ತಿಂಗಳಾದ ಮೇಲೆ ಮತ್ತೆ ಕೆಲಸ ಮಾಡ್ತಿರೋದು ನೆಮ್ಮದಿ ಅನಿಸ್ತಿದೆ. ಎಷ್ಟೊಂದು ಜನಕ್ಕೆ ಮತ್ತೆ ದುಡಿಮೆಯ ದಾರಿ ತೆರೆದಿದೆ. ಸುರಕ್ಷಿತವಾಗಿ ಚಿತ್ರೀಕರಣ ಮಾಡೋದು ನಮ್ಮ ಮುಖ್ಯ ಗುರಿ” ಅಂದದ್ದು 'ಕನ್ನಡತಿ' ಸೀರಿಯಲ್ಲಿನ ಹರ್ಷ ಪಾತ್ರ ನಿರ್ವಹಿಸುತ್ತಿರುವ ಕಿರಣ್ ರಾಜ್.

“ಶೂಟಿಂಗ್ ಮಾಡೋದು ಕಷ್ಟನೇ ಅದ್ರೂ ಸುಮ್ಮನೆ ಮನೇಲ್ ಕೂತ್ಕೊಳೋದು ಅದಕ್ಕಿಂತ ಕಷ್ಟ” ಅಂದವರು 'ಇವಳು ಸುಜಾತಾ' ಸೀರಿಯಲ್ಲಿನ ನಿರ್ಮಾಪಕರಾಗಿರುವ ನಟ ಸೃಜನ್ ಲೋಕೇಶ್. ಧಾರಾವಾಹಿ ಶೂಟಿಂಗ್ ಶುರುಮಾಡಿರುವ ಸೃಜನ್,  ಆದಷ್ಟು ಬೇಗ ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೂ ಸರಕಾರದ ಅನುಮತಿ ನೀಡಿದಲ್ಲಿ 'ಮಜಾಟಾಕೀಸ'ನ್ನೂ ಶುರು ಮಾಡಬಹುದು ಎಂಬ ಉತ್ಸಾಹದಲ್ಲಿದ್ದಾರೆ.

ಮತ್ತೆ ಮತ್ತೆ ಕೊರೋನಾ ಸ್ಕೋರನ್ನೇ ನೋಡಿ ದುಗುಡಗೊಳ್ಳುತ್ತಿರುವ ನೋಡುಗರು, ಪುನಃ ದೈನಿಕ ಧಾರಾವಾಹಿ ಲೋಕದಲ್ಲಿ ಮುಳುಗುವ ಕಾಲ ಬಂದಿದೆ. ದೈಹಿಕ ಅಂತರವನ್ನು ಪಾಲಿಸುತ್ತಲೇ ಮನಸುಗಳನ್ನು ಹತ್ತಿರ ತರುವ ಮನರಂಜನೆಯ ಪರ್ವ ಮತ್ತೆ ತೆರೆದುಕೊಳ್ಳುತ್ತಿದೆ. ಮಳೆಯನ್ನು ತರ್ತಾ ಇದ್ದ ಜೂನ್ ತಿಂಗಳು ಈ ಸಲ ರಂಜನೆಯ 'ಧಾರೆ'ಯನ್ನೂ ಹೊತ್ತು ತರಲಿದೆ.

ಬ್ರೇಕಿನ ನಂತರ ಬಣ್ಣ ಹೊಸದಾಗಿದೆ, ಬಂಧನದ ನಂತರ ಬಂಧ ಬಿಗಿಯಾಗಿದೆ. ಈ ಹೊತ್ತಿಗೆ ಈ ಕಲ್ಪನೆ ಅರ್ಥಪೂರ್ಣ ಅನ್ನಿಸುತ್ತಿದೆ ಅಲ್ಲವೆ ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News