ಚಿತ್ರ ವಿಮರ್ಶಕರ ವಿರುದ್ಧ ಟೀಕೆ; ಚರ್ಚೆಗೆ ಗ್ರಾಸವಾದ ʼದುರಂಧರʼ
PC: x.com/deepekachu
ಹೊಸದಿಲ್ಲಿ: ಇತ್ತೀಚೆಗೆ ಬಿಡುಗಡೆಯಾದ ಆದಿತ್ಯ ಧರ್ ಅವರ ಸಿನಿಮಾ 'ದುರಂಧರ' ಚಿತ್ರ ವಿಮರ್ಶಕರ ವಿರುದ್ಧದ ಟೀಕೆಯಿಂದಾಗಿ ಸುದ್ದಿಯಲ್ಲಿದೆ. ರಣವೀರ್ ಸಿಂಗ್ ಪಾಕಿಸ್ತಾನದಲ್ಲಿ ನಿಯೋಜಿಸಿರುವ ಭಾರತೀಯ ಗೂಢಚಾರಿಯಾಗಿ ಕಾಣಿಸಿಕೊಂಡಿರುವ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏತನ್ಮಧ್ಯೆ ಚಿತ್ರದಲ್ಲಿ ಬಿಂಬಿತವಾಗಿರುವ ತೀವ್ರ ಹಿಂಸೆ ಕೂಡಾ ಇದೀಗ ಪ್ರಧಾನ ಅಂಶವಾಗಿದ್ದು, ರಾಜಕೀಯ ಒಲವಿನ ಕಾರಣದಿಂದ ಗುರಿಯಾಗಿದೆ.
ಖ್ಯಾತ ಚಿತ್ರ ವಿಮರ್ಶಕರಾದ ಸುಚಿತ್ರಾ ತ್ಯಾಗಿ ಹಾಗೂ ಅನುಪಮಾ ಚೋಪ್ರಾರಂಥವರ ವಿರುದ್ಧ ಆನ್ಲೈನ್ ನಲ್ಲಿ ದ್ವೇಷ ಪ್ರತಿಕ್ರಿಯೆಗಳು ವ್ಯಕ್ತವಾಗತ್ತಿವೆ. ಇದರಿಂದಾಗಿ ಚೋಪ್ರಾ ಅವರ ವಿಮರ್ಶೆಯನ್ನು 'ದ ಹಾಲಿವುಡ್ ರಿಪೋರ್ಟರ್ ಇಂಡಿಯಾ' ಯೂಟ್ಯೂಬ್ ಚಾನಲ್ ನಿಂದ ಕಿತ್ತುಹಾಕಲಾಗಿದೆ. ಇದೀಗ ಭಾರತೀಯ ಚಿತ್ರ ವಿಮರ್ಶಕರ ಗಿಲ್ಡ್ (ಎಫ್‌ಸಿಜಿ) ವಿಮರ್ಶಕ ವಿರುದ್ಧದ ದಾಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ದುರಂಧರ್ ಚಿತ್ರ ವಿಮರ್ಶಕರ ವಿರುದ್ಧದ ಗುರಿನಿರ್ದೇಶಿತ ದಾಳಿ, ಕಿರುಕುಳ ಮತ್ತು ದ್ವೇಷವನ್ನು ತೀವ್ರವಾಗಿ ಖಂಡಿಸಿದೆ. ಅಭಿಪ್ರಾಯ ಬೇಧ ಕ್ರಮೇಣ ಸಂಯೋಜಿತ ನಿಂದನೆ, ವೈಯಕ್ತಿಕ ಟೀಕೆಯಾಗಿ ಮಾರ್ಪಟ್ಟಿದೆ. ಜತೆಗೆ ವಿಮರ್ಶಕರ ವೃತ್ತಿಪರ ಬದ್ಧತೆಯನ್ನು ಹಾಳುಮಾಡುವ ಪ್ರಯತ್ನ ನಡೆದಿದೆ ಎಂದು ಎಕ್ಸ್ ಮತ್ತು ಇನ್ಸ್ಟಾಗ್ರಾಂಗಳಲ್ಲಿ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ಟೀಕಿಸಲಾಗಿದೆ.
ಎಫ್‌ಸಿಜಿ2018ರ ಏಪ್ರಿಲ್ ನಲ್ಲಿ ಆರಂಭವಾಗಿದ್ದು, ಪ್ರಸ್ತತ 13 ನಗರಗಳಲ್ಲಿ 57 ಸದಸ್ಯರನ್ನು ಹೊಂದಿದೆ. ಮುದ್ರಣ ಮಾಧ್ಯಮ, ಡಿಜಿಟಲ್ ಪ್ಲಾಟ್‌ಫಾರಂ ಹಾಗೂ ರೇಡಿಯೊದಲ್ಲಿ ಚಿತ್ರ ವಿಮರ್ಶೆ ಮಾಡುವ ಮಂದಿ ಇದರ ಸದಸ್ಯರಾಗಿದ್ದಾರೆ.