×
Ad

‘Haal’ ಮಲಯಾಳಂ ಚಿತ್ರದಲ್ಲಿ ನಾಲ್ಕು ಕಡಿತಗಳನ್ನು ರದ್ದುಗೊಳಿಸಿದ್ದ ಆದೇಶದ ವಿರುದ್ಧ ಮೇಲ್ಮನವಿಗಳು ಕೇರಳ ಹೈಕೋರ್ಟ್‌ನಲ್ಲಿ ವಜಾ

Update: 2025-12-13 17:28 IST

‘Haal’ ಮಲಯಾಳಂ ಚಿತ್ರ (imdb.com)  , ಕೇರಳ ಹೈಕೋರ್ಟ್‌(PTI)

ಕೊಚ್ಚಿ: ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಸಿ) ‘ಹಾಲ್’ ಮಲಯಾಳಂ ಚಿತ್ರದ ಕೆಲವು ಭಾಗಗಳಿಗೆ ಕತ್ತರಿ ಪ್ರಯೋಗ ಮಾಡುವಂತೆ ಹೊರಡಿಸಿದ್ದ ಆದೇಶವನ್ನು ಭಾಗಶಃ ರದ್ದುಗೊಳಿಸಿದ್ದ ಏಕ ನ್ಯಾಯಾಧೀಶ ಪೀಠದ ನ.14ರ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ಕೇರಳ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಶುಕ್ರವಾರ ವಜಾಗೊಳಿಸಿದೆ. ಸಿಬಿಎಫ್‌ಸಿ ಆರು ಕತ್ತರಿ ಪ್ರಯೋಗಗಳಿಗೆ ಆದೇಶಿತ್ತಾದರೂ ಏಕ ನ್ಯಾಯಾಧೀಶ ಪೀಠವು ಕೇವಲ ಎರಡಕ್ಕೆ ಅನುಮತಿ ನೀಡಿತ್ತು.

ಸಿಬಿಎಫ್‌ಸಿ ಮತ್ತು ತಮರಶ್ಶೇರಿ ಡಯಾಸಿಸ್‌ನ ಕ್ಯಾಥೊಲಿಕ್ ಕಾಂಗ್ರೆಸ್ ಎಂಬ ಸಂಘಟನೆಗಳು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನು ಪೀಠವು ಕೈಗೆತ್ತಿಕೊಂಡಿತ್ತು. ಅಂತರಧರ್ಮೀಯ ವಿವಾಹಗಳನ್ನು ಬೆಂಬಲಿಸಿದ್ದಾರೆ ಎಂದು ಆರೋಪಿಸಿ ತಲಮಶ್ಶೇರಿ ಬಿಷಪ್‌ರನ್ನು ಚಿತ್ರವು ಅವಮಾನಿಸಿದೆ ಎಂದು ಕ್ಯಾಥೊಲಿಕ್ ಕಾಂಗ್ರೆಸ್ ಪ್ರತಿಪಾದಿಸಿತ್ತು.

ಮುಸ್ಲಿಮ್ ಯುವಕ ಮತ್ತು ಕ್ರೈಸ್ತ ಯುವತಿ ನಡುವಿನ ಅಂತರಧರ್ಮೀಯ ಪ್ರೇಮ ಕಥೆಯನ್ನು ಬಿಂಬಿಸಿರುವ ಹಾಲ್ ಚಿತ್ರ ನಿಗದಿಯಂತೆ ಸೆ.12ರಂದು ಬಿಡುಗಡೆಗೊಳ್ಳಬೇಕಿತ್ತು. ಆದರೆ ಚಿತ್ರವು ಮುಕ್ತ ಸಾರ್ವಜನಿಕ ಪ್ರದರ್ಶನಕ್ಕೆ ಸೂಕ್ತವಲ್ಲ ಎಂದು ಸಿಬಿಎಫ್‌ಸಿ ನಿರ್ಮಾಣ ಸಂಸ್ಥೆ ಜೆವಿಜೆ ಪ್ರೊಡಕ್ಷನ್ಸ್‌ಗೆ ತಿಳಿಸಿದ ಬಳಿಕ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು.

ಬೀಫ್ ಬಿರಿಯಾನಿ ಸೇವನೆಯ ದೃಶ್ಯ ಸೇರಿದಂತೆ ಆರು ಸೂಚಿತ ಕತ್ತರಿ ಪ್ರಯೋಗಗಳು ಮತ್ತು ಮಾರ್ಪಾಡು ಮಾಡಿದ ಬಳಿಕ ಚಿತ್ರಕ್ಕೆ ‘ಎ’ (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರವನ್ನು ನೀಡಬಹುದು ಎಂದು ಸಿಬಿಎಫ್‌ಸಿ ಹೇಳಿತ್ತು. ಈ ನಿರ್ದೇಶನಗಳ ವಿರುದ್ಧ ಚಿತ್ರದ ನಿರ್ಮಾಪಕರು ಕೇರಳ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಸಿಬಿಎಫ್‌ಸಿ ಚಿತ್ರಕ್ಕೆ ಆದೇಶಿಸಿರುವ ನಾಲ್ಕು ಕತ್ತರಿ ಪ್ರಯೋಗಗಳು ಅನಗತ್ಯವಾಗಿವೆ ಎಂದು ಏಕ ನ್ಯಾಯಾಧೀಶರು ತನ್ನ ನ.14ರ ತೀರ್ಪಿನಲ್ಲಿ ಆದೇಶಿಸಿದ್ದರು.

ಸಿಬಿಎಫ್‌ಸಿ ಸೂಚಿಸಿದ್ದ ಎರಡು ಕಡಿತಗಳನ್ನು ಸ್ವತಃ ತಾವೇ ಮಾಡಿರುವುದಾಗಿ ಚಿತ್ರ ನಿರ್ಮಾಪಕರು ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಪೈಕಿ ಒಂದು ಬೀಫ್ ಬಿರಿಯಾನಿಯನ್ನು ಸೇವಿಸುತ್ತಿರುವ ದೃಶ್ಯಕ್ಕೆ ಸಂಬಂಧಿಸಿದ್ದರೆ,ಇನ್ನೊಂದು ನ್ಯಾಯಾಲಯದ ಕಲಾಪಗಳನ್ನು ಚಿತ್ರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News