ಸರ್ವೋಚ್ಚ ನ್ಯಾಯಾಲಯದ ವಲಸೆ ಕಾರ್ಮಿಕರ ಸಮಸ್ಯೆಯ ನಿರ್ವಹಣೆ ‘ಎಫ್’ ಗ್ರೇಡ್‌ಗೆ ಅರ್ಹ

Update: 2020-05-28 14:30 GMT

ದೇಶದ ವಿವಿಧ ಭಾಗಗಳಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರ ಸಮಸ್ಯೆಗಳು ಮತ್ತು ಸಂಕಷ್ಟಗಳನ್ನು ಮೇ 26ರಂದು ಸರ್ವೋಚ್ಚ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿರುವುದು ಸುದ್ದಿಯಾಗಿದೆ. ಹೀಗೆ ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಳ್ಳುವಾಗ ನ್ಯಾಯಾಲಯವು ಕಾಲ್ನಡಿಗೆಯಲ್ಲಿ, ಸೈಕಲ್‌ಗಳಲ್ಲಿ ಹಸಿದ ಹೊಟ್ಟೆಯಲ್ಲಿ ಸಾವಿರಾರು ಕಿ.ಮೀ.ದೂರದ ತಮ್ಮ ಸ್ವಗ್ರಾಮಗಳಿಗೆ ತೆರಳುತ್ತಿರುವ ವಲಸೆ ಕಾರ್ಮಿಕರ ಕುರಿತು ವೃತ್ತಪತ್ರಿಕೆಗಳು ಮತ್ತು ಮಾಧ್ಯಮ ವರದಿಗಳನ್ನು ಪ್ರಸ್ತಾಪಿಸಿದೆ.

ಸರ್ವೋಚ್ಚ ನ್ಯಾಯಾಲಯದ ಈ ನಿರ್ಧಾರದಿಂದ ತಡವಾಗಿಯಾದರೂ ಏನಾದರೂ ಒಳ್ಳೆಯದಾಗಬಹುದೇ?, ಇದು ತನ್ನ ಹಿಂದಿನ ತಪ್ಪುಗಳಿಗೆ ಪ್ರಾಯಶ್ಚಿತ್ತವಾಗಿ ಮುಖವುಳಿಸಿಕೊಳ್ಳುವ ಅದರ ಪ್ರಯತ್ನವೇ?

ಈ ಪ್ರಶ್ನೆಗಳನ್ನೆತ್ತಲು ಕಾರಣಗಳಿವೆ. ಎರಡು ತಿಂಗಳ ಹಿಂದೆಯೇ ವಲಸೆ ಕಾರ್ಮಿಕರ ಸಂಕಷ್ಟಗಳನ್ನು ವಿವರಿಸಿ,ಅವರಿಗೆ ನೆರವಾಗುವಂತೆ ಸರಕಾರಗಳಿಗೆ ಸೂಚಿಸುವಂತೆ ಕೋರಿ ಹಲವಾರು ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದವು. ಆಗ ಸರಕಾರವು ಹೇಳಿದ್ದಕ್ಕೆ ತಲೆ ಅಲುಗಾಡಿಸುತ್ತ ಬಂದಿದ್ದ ಸರ್ವೋಚ್ಚ ನ್ಯಾಯಾಲಯಕ್ಕೆ ಈಗ ಧಿಡೀರ್ ಆಗಿ ವಲಸೆ ಕಾರ್ಮಿಕರ ಬಗ್ಗೆ ಕಾಳಜಿಯುಂಟಾಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ನ್ಯಾಯವಾದಿ ಅಲಖ್ ಅಲೋಕ ಶ್ರೀವಾಸ್ತವ ಅವರು ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊದಲ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿಯಲ್ಲಿ ಸಲ್ಲಿಸಲಾಗಿತ್ತು. ಅರ್ಜಿಯು ತಮ್ಮ ಕುಟುಂಬಗಳೊಂದಿಗೆ ನೂರಾರು ಕಿ.ಮೀ.ದೂರದ ತಮ್ಮ ತವರಿಗೆ ನಡೆದುಕೊಂಡು ಸಾಗುತ್ತಿರುವ ಸಾವಿರಾರು ವಲಸೆ ಕಾರ್ಮಿಕರ ಬವಣೆಗಳನ್ನು ಪ್ರಮುಖವಾಗಿ ಬಿಂಬಿಸಿದೆ ಎಂದು ಸರ್ವೋಚ್ಚ ನ್ಯಾಯಾಲಯವು 2020, ಮಾ.31ರ ತನ್ನ ಆದೇಶದಲ್ಲಿ ದಾಖಲಿಸಿತ್ತು.

 ಸಾಲಿಸಿಟರ್ ಜನರಲ್ ಮನವಿಯ ಮೇರೆಗೆ ಸರ್ವೋಚ್ಚ ನ್ಯಾಯಾಲಯವು ಮಾ.31ರಂದು ಸ್ಥಿತಿಗತಿ ವರದಿಯನ್ನು ದಾಖಲಿಸಿಕೊಂಡಿತ್ತು. ಸರಕಾರವು ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ಹಾಗೂ ಸಮಾಜದ ತಳಮಟ್ಟದವರಿಗೆ ಆಹಾರ, ಶುದ್ಧ ಕುಡಿಯುವ ನೀರು, ಔಷಧಿಗಳಂತಹ ಮೂಲ ಸೌಲಭ್ಯಗಳನ್ನು ಒದಗಿಸಲು ಕೈಗೊಂಡಿರುವ ಕ್ರಮಗಳನ್ನು ಈ ವರದಿಯಲ್ಲಿ ವಿವರಿಸಿರುವುದನ್ನು ತಾನು ಗಮನಿಸಿದ್ದೇನೆ ಎಂದು ಅದು ಹೇಳಿತ್ತು.

ದಿಲ್ಲಿಯನ್ನು ತೊರೆಯುತ್ತಿದ್ದ ಸಾವಿರಾರು ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ವರದಿಯಲ್ಲಿ ದಾಖಲಿಸಲಾಗಿದ್ದ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಾರಂಭಿಕ ಪ್ರತಿಕ್ರಿಯೆಯು ಅವರನ್ನು ತಮ್ಮ ಗಡಿಗಳಿಂದ ಅವರ ಗ್ರಾಮಗಳಿಗೆ ರವಾನಿಸುವುದು ಆಗಿತ್ತು. ಆದರೆ ಕಿಕ್ಕಿರಿದು ತುಂಬಿದ ಬಸ್‌ಗಳಲ್ಲಿ ವಲಸೆ ಕಾರ್ಮಿಕರನ್ನು ಸಾಗಿಸುವುದರಿಂದ ಅವರಿಗೆ ಒಳ್ಳೆಯದಕ್ಕಿಂತ ಹಾನಿಯನ್ನೇ ಮಾಡುತ್ತದೆ ಮತ್ತು ಕೊರೋನ ವೈರಸ್ ಹರಡುವಿಕೆ ಇನ್ನಷ್ಟು ತೀವ್ರಗೊಳ್ಳುತ್ತದೆ ಎಂಬ ಕಾರಣದಿಂದ ಗೃಹ ಸಚಿವಾಲಯವು ವಲಸೆ ಕಾರ್ಮಿಕರ ಸಾಗಾಣಿಕೆಯನ್ನು ನಿಷೇಧಿಸಿ ಮಾ.29ರಂದು ಆದೇಶಿಸಿತ್ತು.

21,000ಕ್ಕೂ ಅಧಿಕ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, 6.5ಲ.ಕ್ಕೂ ಅಧಿಕ ವಲಸೆ ಕಾರ್ಮಿಕರಿಗೆ ಅವುಗಳಲ್ಲಿ ಆಶ್ರಯ ಒದಗಿಸಲಾಗಿದೆ ಮತ್ತು 22.8 ಲಕ್ಷಕ್ಕೂ ಅಧಿಕ ಜನರಿಗೆ ಆಹಾರ ಮತ್ತು ಇತರ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಸಾಲಿಸಿಟರ್ ಜನರಲ್ ಮಾ.31ರಂದು ನ್ಯಾಯಾಲಯಕ್ಕೆ ತಿಳಿಸಿದ್ದರು. 24 ಗಂಟೆಗಳಲ್ಲಿ ಎಲ್ಲ ಧರ್ಮಗಳಿಗೆ ಸೇರಿದ ನುರಿತ ಸಮಾಲೋಚಕರು ಮತ್ತು ಸಮುದಾಯ ನಾಯಕರು ದೇಶದಲ್ಲಿಯ ಎಲ್ಲ ಪರಿಹಾರ ಶಿಬಿರಗಳು/ಆಶ್ರಯ ತಾಣಗಳಿಗೆ ಭೇಟಿ ನೀಡಿ,ವಲಸೆ ಕಾರ್ಮಿಕರು ಅನುಭವಿಸುತ್ತಿರುವ ಮಾನಸಿಕ ಗೊಂದಲಗಳನ್ನು ನಿವಾರಿಸಲು ನೆರವಾಗಲಿದ್ದಾರೆ ಎಂಬ ಸಾಲಿಸಿಟರ್ ಜನರಲ್ ಹೇಳಿಕೆಯನ್ನೂ ನ್ಯಾಯಾಲಯವು ದಾಖಲಿಸಿಕೊಂಡಿತ್ತು.

ಮಾ.31ರಂದು ಹಾಗೂ ನಂತರ ಎ.3 ಮತ್ತು ಎ. 7ರಂದು ನಡೆದಿದ್ದ ವಿಚಾರಣೆಗಳಲ್ಲಿಯೂ ನ್ಯಾಯಾಲಯವು ಎಲ್ಲ ಕಡೆಗಳಲ್ಲಿಯೂ ವಲಸೆ ಕಾರ್ಮಿಕರು ಪಡುತ್ತಿರುವ ಸಂಕಷ್ಟಗಳ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಿದ್ದರೂ ಸರಕಾರದ ಹೇಳಿಕೆಯನ್ನು ಪ್ರಶ್ನಿಸುವ ಬಗ್ಗೆ ಅಥವಾ ಸರಕಾರವನ್ನು ಉತ್ತರದಾಯಿಯನ್ನಾಗಿಸುವ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ವೃತ್ತಪತ್ರಿಕೆಗಳು ಮತ್ತು ಮಾಧ್ಯಮ ವರದಿಗಳನ್ನು ಕಡೆಗಣಿಸಲಾಗಿತ್ತು. ಎ.27ರಂದು ನ್ಯಾಯಾಲಯವು ಅರ್ಜಿಯನ್ನು ವಿಲೇಗೊಳಿಸಿತ್ತು.

ಸಾಮಾಜಿಕ ಕಾರ್ಯಕರ್ತರಾದ ಹರ್ಷ ಮಂದರ್ ಮತ್ತು ಅಂಜಲಿ ಭಾಗವತ್ ಅವರು ಸಲ್ಲಿಸಿದ್ದ,ವಲಸೆ ಕಾರ್ಮಿಕರ ಸಂಕಷ್ಟಗಳಿಗೆ ಸಂಬಂಧಿಸಿದ ಎರಡನೇ ಅರ್ಜಿ ಸವೋಚ್ಚ ನ್ಯಾಯಾಲಯದಲ್ಲಿ ಎ.3ರಂದು ವಿಚಾರಣೆಗೆ ಬಂದಿತ್ತು. ಒಂದು ವಾರದೊಳಗೆ ಎಲ್ಲ ವಲಸೆ ಕಾರ್ಮಿಕರಿಗೆ ವೇತನ/ಕನಿಷ್ಠ ಕೂಲಿಗಳನ್ನು ಪಾವತಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಿರ್ದೇಶ ನಿಡುವಂತೆ ಕೋರಿದ್ದ ಅರ್ಜಿಯು,ಸರಕಾರದ ಕ್ರಮಗಳ ಹೊರತಾಗಿಯೂ ಸಾವಿರಾರು ವಲಸೆ ಕಾರ್ಮಿಕರು ಈಗಲೂ ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ ಎಂದು ವಾದಿಸಿತ್ತು.

ಎ.7ರಂದು ಸರಕಾರದ ಪರವಾಗಿ ನ್ಯಾಯಾಲಯಕ್ಕೆ ವರದಿಯೊಂದನ್ನು ಸಲ್ಲಿಸಲಾಗಿತ್ತು. ಮಾ.31ರ ವರದಿಯಲ್ಲಿ ಕಾಣಿಸಲಾಗಿದ್ದ ಪರಿಹಾರ ಶಿಬಿರಗಳು,ಆಶ್ರಯ ಮತ್ತು ಆಹಾರ ಒದಗಿಸಲ್ಪಟ್ಟಿರುವ ವಲಸೆ ಕಾರ್ಮಿಕರ ಅಂಕಿಅಂಶಗಳಿಗೆ ಹೋಲಿಸಿದರೆ ಈ ವರದಿಯಲ್ಲಿನ ಅಂಕಿಅಂಶಗಳು ಅಚ್ಚರಿಯೆನ್ನಿಸುವ ರೀತಿಯಲ್ಲಿ ಏರಿಸಲ್ಪಟ್ಟಿದ್ದವು. ಒಂದೇ ವಾರದಲ್ಲಿ ಅಂಕಿಅಂಶಗಳಲ್ಲಿ ಇಷ್ಟೊಂದು ಭಾರೀ ಏರಿಕೆಯಾಗಿದ್ದಾಗ ನ್ಯಾಯಾಲಯಕ್ಕೆ ದೇಶವು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಹೇಗೆ ಅರಿವಿರಲಿಲ್ಲ ಮತ್ತು ಆ ಬಗ್ಗೆ ಅದೇಕೆ ಏನನ್ನೂ ಮಾಡಿರಲಿಲ್ಲ?

ಕಳೆದ ಎರಡು ತಿಂಗಳಲ್ಲಿ ವಲಸೆ ಕಾರ್ಮಿಕರ ಕಣ್ಣೀರನ್ನೊರೆಸುವ ಅದೆಷ್ಟೋ ಅವಕಾಶಗಳು ತನ್ನೆದುರಿಗೆ ಬಂದಿದ್ದರೂ ಕಣ್ಮುಚ್ಚಿ ಕುಳಿತಿದ್ದ ಸರ್ವೋಚ್ಚ ನ್ಯಾಯಾಲಯವು ಈಗ ದಿಢೀರಾಗಿ ಎಚ್ಚೆತ್ತುಕೊಂಡು ಸ್ವಯಂಪ್ರೇರಿತ ಪ್ರಕರಣವನ್ನು ಕೈಗೆತ್ತಿಕೊಂಡಿರುವುದಕ್ಕೆ ಏನು ಹೇಳಬೇಕು?

ಒಂದಂತೂ ಸ್ಪಷ್ಟ. ವಲಸೆ ಕಾರ್ಮಿಕರು ಈ ಕರಾಳ ದಿನಗಳನ್ನು ಕೊನೆಯವರೆಗೂ ನೆನಪಿಟ್ಟುಕೊಳ್ಳಲಿದ್ದಾರೆ. ಅವರ ದಯನೀಯ ಹೋರಾಟಗಳ ಚಿತ್ರಗಳು ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿರಲಿವೆ. ಆದರೆ ಇವೆಲ್ಲ ಚಿತ್ರಗಳು,ವರದಿಗಳನ್ನು ಸರ್ವೋಚ್ಚ ನ್ಯಾಯಾಲಯವು ಆಗ ನೋಡಿರಲೇ ಇಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಸಾಂವಿಧಾನಿಕ ಹಕ್ಕುಗಳು ಮತ್ತು ಪರಿಹಾರಗಳು ಕಡೆಗಣಿಸಲ್ಪಟ್ಟಿವೆ ಮತ್ತು ನಮ್ಮ ಸಂವಿಧಾನದ ಪೀಠಿಕೆಯ ಅಡಿಗಲ್ಲಾಗಿರುವ ಸಾಮಾಜಿಕ-ಆರ್ಥಿಕ ನ್ಯಾಯವನ್ನು ಅವಮಾನಿಸಲಾಗಿದೆ. ಇಂದಿನ ದಿನಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ಕಾರ್ಯವೈಖರಿಯ ಬಗ್ಗೆ ಈಗಾಗಲೇ ಹಲವಾರು ಕಾನೂನು ತಜ್ಞರೇ ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ದುರಂತ ಅಥವಾ ಪ್ರಹಸನವಲ್ಲವೇ?

ವಾಸ್ತವ ಅಂಶಗಳೇ ಎಲ್ಲವನ್ನೂ ಹೇಳುತ್ತಿವೆ. ನ್ಯಾಯಾಲಯವು ತನ್ನನ್ನು ತಿದ್ದಿಕೊಂಡು ಭಾರತದ ಜನತೆಗಾಗಿ ನ್ಯಾಯಾಲಯವೇ ಹೊರತು ಭಾರತೀಯ ಜನರ ನ್ಯಾಯಾಲಯವಲ್ಲ ಎಂಬ ತನ್ನ ಬ್ರಾಂಡ್‌ನ್ನು ಮತ್ತೆ ಪಡೆಯಲು ಪ್ರಯತ್ನಿಸುವುದೇ? ಈಗ ಸ್ವಯಂಪ್ರೇರಿತವಾಗಿ ವಲಸೆ ಕಾರ್ಮಿಕರ ಸಂಕಷ್ಟಗಳ ನಿವಾರಣೆಗೆ ಮುಂದಾಗಿರುವಂತೆ ತಳಮಟ್ಟದಲ್ಲಿಯೂ ಸ್ಥಿತಿಯು ಬದಲಿಸಲಿದೆಯೇ? ಸರ್ವೋಚ್ಚ ನ್ಯಾಯಾಲಯವು ಬದಲಾಗುತ್ತದೆಯೇ?

Thewire.in ವಿಶೇಷ ವರದಿ ಆಧಾರಿತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News