ಲಸಿಕೆ ಬಂದರೂ ಇಲ್ಲೇ ಉಳಿಯಲಿದೆ ಕೊರೋನ ವೈರಸ್: ಪರಿಣತರ ಎಚ್ಚರಿಕೆ

Update: 2020-05-28 17:07 GMT

ವಾಶಿಂಗ್ಟನ್, ಮೇ 28: ಕೊರೋನ ವೈರಸ್ ಈ ಜಗತ್ತಿನಲ್ಲೇ ತಳವೂರುವ ಎಲ್ಲ ಲಕ್ಷಣಗಳು ಇವೆ ಎಂಬ ಭೀತಿಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಈ ಸಾಂಕ್ರಾಮಿಕಕ್ಕೆ ಲಸಿಕೆ ಬಂದರೂ ಅದು ಮುಂದಿನ ದಶಕಗಳ ಕಾಲ ಇಲ್ಲೇ ಉಳಿಯುತ್ತದೆ ಹಾಗೂ ಜಗತ್ತಿನ ಜನರಿಗೆ ಹರಡುತ್ತಾ ಹೋಗುತ್ತದೆ ಎಂದು ಅವರು ಎಚ್ಚರಿಸುತ್ತಾರೆ.

ಇಂಥ ಕಾಯಿಲೆಗಳು ಎಂಡೆಮಿಕ್ ಆಗಿದ್ದು, ತಮ್ಮನ್ನು ತೊಲಗಿಸುವ ಪ್ರಯತ್ನಗಳನ್ನು ವಿರೋಧಿಸುತ್ತವೆ. ಒಂದು ರೀತಿಯಲ್ಲಿ ಹೊಸ ಸಾಂಕ್ರಾಮಿಕವೂ ದಡಾರ, ಎಚ್‌ಐವಿ ಮತ್ತು ಸಿಡುಬಿನಂತೆ ಎಂದು ಸಾಂಕ್ರಾಮಿಕ ರೋಗಗಳ ತಜ್ಞರು ಹೇಳುತ್ತಾರೆ ಎಂದು ವಾಶಿಂಗ್ಟನ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.

ಭವಿಷ್ಯದಲ್ಲಿ ಎಲ್ಲವೂ ಅತಂತ್ರವಾಗಿದೆ, ಆದರೆ ನೋವೆಲ್-ಕೊರೋನ ವೈರಸ್ ಮಾತ್ರ ವಿಜೃಂಭಿಸುತ್ತಿದೆ ಎಂಬಂತೆ ಅನಿಸುತ್ತಿದೆ. ಆದರೆ, ಪರಿಸ್ಥಿತಿ ಯಾವಾಗಲೂ ಹೀಗೆಯೇ ಕಠಿಣವಾಗಿರುತ್ತದೆ ಎಂದು ಇದರ ಅರ್ಥವಲ್ಲ ಎಂದು ಪರಿಣತರು ಹೇಳುತ್ತಾರೆ.

ಈಗಾಗಲೆ ನಮ್ಮ ನಡುವೆ ಶೀತ ಉಂಟು ಮಾಡುವ ನಾಲ್ಕು ಎಂಡೆಮಿಕ್ ಕೊರೋನ ವೈರಸ್‌ಗಳಿವೆ. ಹಾಗೂ ಹೊಸದಾಗಿ ಬಂದಿರುವುದು ಐದನೇ ಕೊರೋನ ವೈರಸ್ ಆಗಲಿದೆ ಎಂದು ಅವರು ಭಾವಿಸುತ್ತಾರೆ.

 ಹೊಸ ವೈರಸ್‌ಗೆ ಮಾನವ ದೇಹದ ರೋಗ ನಿರೋಧಕತೆ ಹರಡಿದಂತೆ ಹಾಗೂ ವರ್ಷಗಳು ಸರಿದಂತೆ ನಮ್ಮ ದೇಹಗಳು ಈ ನೂತನ ಕೊರೋನ ವೈರಸ್‌ಗೆ ಹೊಂದಿಕೊಂಡು ಸಾಗಿದಂತೆ ಅದರ ಪರಿಣಾಮಗಳ ತೀವ್ರತೆ ಇಳಿಮುಖವಾಗುತ್ತಾ ಸಾಗುತ್ತದೆ ಎಂದು ಶಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಸಾಂಕ್ರಾಮಿಕ ರೋಗಗಳ ತಜ್ಞೆ ಹಾಗೂ ವಿಕಾಸವಾಗಿ ಜೀವಶಾಸ್ತ್ರಜ್ಞೆ ಆಗಿರುವ ಸಾರಾ ಕೋಬೆ ಹೇಳುತ್ತಾರೆ.

ಅಲ್ಲಿಯವರೆಗೆ, ಈ ಹೊಸ ಕೊರೋನ ವೈರಸ್ ಇಲ್ಲೇ ಉಳಿಯಲಿದೆ. ಇಲ್ಲಿರುವ ಪ್ರಶ್ನೆಯೆಂದರೆ, ನಾವು ಅದರೊಂದಿಗೆ ಸುರಕ್ಷಿತವಾಗಿ ಬದುಕುವುದು ಹೇಗೆ ಎನ್ನುವುದು ಎಂದು ಅವರು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News