ಮನಸುಗಳ ನಡುವಿನ ಸೇತುವೆಗಳ ಮುರಿದವರ ಹೆಸರು ಮೇಲ್ಸೇತುವೆಗೇಕೆ?

Update: 2020-05-29 05:22 GMT

ಕರ್ನಾಟಕದ ರಾಜಧಾನಿಯ ಅಭಿವೃದ್ಧಿಯ ಕನಸಿನೆಡೆಗೆ ಕಟ್ಟಿದ ಸೇತುವೆಯಾಗಿದೆ ಯಲಹಂಕ ಮೇಲ್ಸೇತುವೆ. ಈಗಾಗಲೇ ಅನಧಿಕೃತವಾಗಿ ಜನರಿಗಾಗಿ ತೆರೆದುಕೊಂಡಿರುವ ಈ ಮೇಲ್ಸೇತುವೆಯನ್ನು ಮುಂದಿಟ್ಟುಕೊಂಡು, ರಾಜ್ಯ ಸರಕಾರ ಅನಗತ್ಯ ವಿವಾದವೊಂದನ್ನು ಕೊರೋನ ಸಂದರ್ಭದಲ್ಲಿ ಜನರಿಗೆ ಉಡುಗೊರೆಯಾಗಿ ನೀಡಲು ಮುಂದಾಗಿದೆ. ಲಾಕ್‌ಡೌನ್‌ನ ಈ ಹೊತ್ತಿನಲ್ಲಿ, ಈ ಮೇಲ್ಸೇತುವೆಯನ್ನು ಕಟ್ಟಿ ನಿಲ್ಲಿಸಿದ ವಲಸೆ ಕಾರ್ಮಿಕರ ಕುರಿತಂತೆ ಚರ್ಚೆ ನಡೆದಿದ್ದರೂ ಅದಕ್ಕೊಂದು ಅರ್ಥವಿತ್ತು. ಈ ಸೇತುವೆಗಾಗಿ ಬೆವರು ಹರಿಸಿದ ಕಾರ್ಮಿಕರು ಲಾಕ್‌ಡೌನ್ ದೆಸೆಯಿಂದಾಗಿ ಊರು, ವಸತಿಗಳಿಲ್ಲದೆ ಬೀದಿ ಪಾಲಾಗಿದ್ದಾರೆ. ಈ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಳಸಿಕೊಳ್ಳುವ ಕಾರ್ಮಿಕರು, ಕಾಮಗಾರಿ ಮುಗಿದಾಕ್ಷಣ ಅವರ ಸ್ಥಿತಿ ಉಂಡು ಎಸೆದ ಬಾಳೆಯೆಲೆ. ಅಕ್ರಮ ವಲಸಿಗರು ಎಂಬಿತ್ಯಾದಿ ‘ಬಿರುದು’ಗಳನ್ನು ನೀಡಿ ಅವರ ಗುಡಿಸಲುಗಳನ್ನು ಏಕಾಏಕಿ ಕಿತ್ತೆಸೆಯಲಾಗುತ್ತದೆ. ಯಲಹಂಕದ ಮೇಲ್ಸೇತುವೆಗಾಗಿ ದುಡಿದ ಅನಾಮಿಕ ಕಾರ್ಮಿಕರ ಸ್ಥಿತಿಗತಿಯ ಕುರಿತಂತೆ ಮಾತನಾಡುವವರೇ ಇಲ್ಲ. ಹಾಗೆ ನೋಡಿದರೆ ಆ ಕಾರ್ಮಿಕರ ಹೆಸರೇ ಸರಕಾರಕ್ಕೆ ಗೊತ್ತಿಲ್ಲ. ಬದಲಿಗೆ ಅವರು ಕಟ್ಟಿದ ಆ ಸೇತುವೆಯನ್ನು ಬಳಸಿಕೊಂಡು ‘ಜನರ ಮನಸುಗಳ ನಡುವೆ ಬೆಸೆದ ಸೇತುವೆ’ಗಳನ್ನು ಸರಕಾರ ಮುರಿಯಲು ಹೊರಟಿದೆ.

ಯಕಶ್ಚಿತ್ ಒಂದು ಮೇಲ್ಸೇತುವೆಗೆ ಹೆಸರಿಡುವುದಕ್ಕೆ ಅರ್ಹ ಕನ್ನಡಿಗರೇ ಈ ನಾಡಿನಲ್ಲಿ ಇಲ್ಲವೇನೋ ಎಂಬಂತೆ, ಕರ್ನಾಟಕದ ಜೊತೆಗೆ ಯಾವ ರೀತಿಯಲ್ಲೂ ನಂಟಿಲ್ಲದ ವಿವಾದಿತ ‘ಸಾವರ್ಕರ್’ ಹೆಸರನ್ನು ಇಡುವುದಕ್ಕೆ ಹೊರಟಿರುವ ರಾಜ್ಯ ಸರಕಾರ ಆ ಮೂಲಕ ಕನ್ನಡಿಗರ ತೀವ್ರ ಆಕ್ರೋಶವನ್ನು ಕಟ್ಟಿಕೊಂಡಿದೆ. ಕೊರೋನ ಲಾಕ್‌ಡೌನ್ ಸಂದರ್ಭದಲ್ಲಿ , ಜನಸಾಮಾನ್ಯರ ಸಂಕಷ್ಟಗಳ ಕುರಿತ ಮಾಧ್ಯಮಗಳ ಚರ್ಚೆಗಳನ್ನು ದಿಕ್ಕು ತಪ್ಪಿಸುವ ಉದ್ದೇಶ ಈ ನಾಮಕರಣದ ಹಿಂದಿದೆ ಎನ್ನುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಈಗಾಗಲೇ ‘ಯಲಹಂಕ ಮೇಲ್ಸೇತುವೆ’ ಎಂದೇ ಜನಜನಿತವಾಗಿರುವ ಈ ಸೇತುವೆಗೆ ಒಬ್ಬ ನಾಯಕನ ಅಥವಾ ಇತಿಹಾಸ ಪುರುಷನ ಹೆಸರಿಡುವುದರಿಂದ ಸೇತುವೆಯ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ಇಂತಹ ನಾಮಕರಣಗಳ ಹಿಂದೆ ಎರಡು ಬಗೆಯ ಉದ್ದೇಶಗಳಿರುತ್ತವೆ. ಒಂದು, ಒಬ್ಬ ನಾಯಕನ ಹೆಸರನ್ನು ಕಾಮಗಾರಿಗಳಿಗೆ ನಾಮಕರಣ ಮಾಡುವ ಮೂಲಕ ಅವನ ಆದರ್ಶ, ವೌಲ್ಯಗಳನ್ನು ಜನರು ಸದಾ ನೆನಪಿಸಿಕೊಳ್ಳುವಂತೆ ಮಾಡುವುದು. ಎರಡನೆಯ ಬಗೆಯೊಂದಿದೆ. ಕೆಲವು ನಾಯಕರ ಹೆಸರುಗಳನ್ನು ಸೇತುವೆ, ರಸ್ತೆಗಳಿಗೆ ಇಡುವ ಮೂಲಕ ಅವರನ್ನು ಜನಪ್ರಿಯಗೊಳಿಸಲು ಪ್ರಯತ್ನಿಸುವುದು. ಇದೀಗ ಸರಕಾರ ಯಲಹಂಕ ಮೇಲ್ಸೇತುವೆಗೆ ಹೆಸರಿಡಲು ಹೊರಟಿರುವುದು ಎರಡನೆಯ ಉದ್ದೇಶದೊಂದಿಗೆ.

ಇತಿಹಾಸದ ಪುಟಗಳಲ್ಲಿ ‘ತಪ್ಪು ಕಾರಣ’ಗಳಿಗಾಗಿ ಕುಖ್ಯಾತಿಯನ್ನು ಪಡೆದಿರುವ ಸಾವರ್ಕರ್ ಅವರನ್ನು ‘ವೀರ’ ‘ಶೂರ’ ‘ಸ್ವಾತಂತ್ರ ಸೇನಾನಿ’ ಎಂಬಿತ್ಯಾದಿಯಾಗಿ ಬಿಂಬಿಸಿ, ಹೊಸ ತಲೆಮಾರಿಗೆ ದೇಶದ ಸ್ವಾತಂತ್ರ ಹೋರಾಟದ ಇತಿಹಾಸವನ್ನು ಹೊಸದಾಗಿ ಕಲಿಸುವ ಸಂಘಪರಿವಾರದ ಪ್ರಯತ್ನದ ಮುಂದುವರಿದ ಭಾಗವಿದು. ಸಾವರ್ಕರ್ ನಿಜಕ್ಕೂ ಮಹನೀಯರೇ ಆಗಿದ್ದರೆ ಅವರನ್ನು ಜನರೆಡೆಗೆ ತಲುಪಿಸಲು ಇಂತಹ ‘ಅಗ್ಗದ ಪ್ರಯತ್ನ’ಗಳ ಅಗತ್ಯವೇ ಇಲ್ಲ. ಭಗತ್ ಸಿಂಗ್, ಆಝಾದ್, ಗಾಂಧಿ, ನೆಹರೂ ಇತ್ಯಾದಿ ನಾಯಕರನ್ನು ಈ ದೇಶ ಸ್ಮರಿಸುತ್ತಿರುವುದು, ಯಾವುದೋ ಸೇತುವೆ, ರಸ್ತೆಗಳಿಗೆ ನಾಮಕರಣ ಮಾಡಿದ ಕಾರಣಕ್ಕಾಗಿಯಲ್ಲ. ಅವರು ಈ ದೇಶಕ್ಕೆ ನೀಡಿದ ಕೊಡುಗೆಗಳ ಮೂಲಕವೇ ಜನರಲ್ಲಿ ಅಜರಾಮರರಾಗಿದ್ದಾರೆ. ಸಾವರ್ಕರ್ ಈ ದೇಶದ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿರುವುದೂ ನಿಜ, ಹಾಗೆಯೇ ಅವರು ಬ್ರಿಟಿಷರಿಗೆ ಎರಡೆರಡು ಬಾರಿ ಕ್ಷಮಾ ಅರ್ಜಿ ಸಲ್ಲಿಸಿ ಸ್ವಾತಂತ್ರ ಹೋರಾಟದಿಂದ ದೂರ ಉಳಿದದ್ದೂ ಅಷ್ಟೇ ನಿಜ. ತನ್ನ ಉಳಿದ ಬದುಕನ್ನು ಅವರು ಬ್ರಿಟಿಷರಿಗೆ ವಿಧೇಯರಾಗಿ ಕಳೆದರು. ಆದರೆ ಇದಕ್ಕಾಗಿ ಅವರ ‘ಸ್ವಾತಂತ್ರ ಹೋರಾಟ’ದ ಕಾಲಘಟ್ಟವನ್ನು ನಾವು ಮರೆಯಬೇಕಾಗಿಲ್ಲ.

‘ಕಾಲಾಪಾನಿ’ಯ ಉಗ್ರ ಶಿಕ್ಷೆ ಸಾವರ್ಕರ್ ಅವರನ್ನು ಬ್ರಿಟಿಷರ ಬಳಿ ಕ್ಷಮೆಯಾಚಿಸುವಂತೆ ಮಾಡಿತು, ಸ್ವಾತಂತ್ರ ಹೋರಾಟದಿಂದ ದೂರ ಉಳಿಸುವಂತೆ ಮಾಡಿತು. ಆದರೆ ಬಳಿಕದ ದಿನಗಳನ್ನು ಸ್ವಾತಂತ್ರ ಹೋರಾಟಗಾರರ ವಿರುದ್ಧ ಪಿತೂರಿ ನಡೆಸಲು ಬಳಸಿಕೊಂಡರು ಎನ್ನುವ ಆರೋಪ ನಿರ್ಲಕ್ಷಿಸುವಂತಹದ್ದಲ್ಲ. ಬ್ರಿಟಿಷರ ವಿರುದ್ಧ ಹೋರಾಡಲು ಐಎನ್‌ಎಗೆ ಸೇರಲು ಸುಭಾಶ್ ಚಂದ್ರ ಬೋಸ್ ಅವರು ದೇಶಕ್ಕೆ ಕರೆ ನೀಡಿದಾಗ, ಸಾವರ್ಕರ್ ಸೇರದಂತೆ ಹೋರಾಟಗಾರರನ್ನು ತಡೆಯಲು ಯತ್ನಿಸಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಎಲ್ಲಕ್ಕಿಂತ ದೊಡ್ಡ ಕಳಂಕ ‘ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಭಾಗಿಯಾದ ಆರೋಪ’. ನಾಥೂರಾಂ ಗೋಡ್ಸೆ ಗಾಂಧೀಜಿಯನ್ನು ಕೊಂದಿರುವುದಾದರೂ, ಅದಕ್ಕಾಗಿ ಆತನನ್ನು ಮಾನಸಿಕವಾಗಿ ಸಿದ್ಧಗೊಳಿಸಿರುವುದು ಸಾವರ್ಕರ್ ಎನ್ನುವುದು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಸೇರಿಕೊಂಡಿದೆ. ಗಾಂಧಿ ಕೊಲೆಯಲ್ಲಿ ಸಾವರ್ಕರ್ ಅವರನ್ನು ಮುಖ್ಯ ಸಂಚುಗಾರರು ಎಂದು ಗುರುತಿಸಲಾಗಿದೆ. . ಸಾಕ್ಷಿಗಳ ಕೊರತೆಯಿಂದಾಗಿ ನ್ಯಾಯಾಲಯ ಅವರನ್ನು ಬಿಡುಗಡೆಗೊಳಿಸಿತು. ಇಂತಹ ಅಳಿಸಲಾಗದ ಕಳಂಕಗಳನ್ನು ಅಂಟಿಸಿಕೊಂಡಿದ್ದ ಸಾವರ್ಕರ್ ಅವರ ಹೆಸರನ್ನು ಕರ್ನಾಟಕದ ಯಾವುದೋ ಒಂದು ಸೇತುವೆಗೆ ಈ ಸಂದರ್ಭದಲ್ಲಿ ನಾಮಕರಣ ಮಾಡಬೇಕಾದ ಅನಿವಾರ್ಯವಾದರೂ ಸರಕಾರಕ್ಕೆ ಏನಿದೆ ಎಂದು ಕನ್ನಡ ಸಂಘಟನೆಗಳು ಪ್ರಶ್ನಿಸುತ್ತಿವೆ.

ಯಲಹಂಕ ಮೇಲ್ಸೇತುವೆಗೆ ನಾಮಕರಣ ಮಾಡಲೇಬೇಕು ಎನ್ನುವ ಅನಿವಾರ್ಯ್ಲ ಸರಕಾರಕ್ಕಿದೆಯಾದರೆ, ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರ ಹೆಸರನ್ನು ಇಡಬಹುದು. ಸ್ವಾತಂತ್ರಕ್ಕಾಗಿ ತನು, ಮನ, ಧನವನ್ನು ತ್ಯಾಗ ಮಾಡಿದ ನೂರಾರು ಹೆಸರುಗಳಿವೆ. ಅವರ ಹೆಸರನ್ನು ಈ ಮೇಲ್ಸೇತುವೆಗೆ ಇಟ್ಟರೆ, ಮರೆತು ಹೋದ ನಮ್ಮ ನಾಯಕರ ತ್ಯಾಗ, ಬಲಿದಾನಗಳನ್ನು ಹೊಸತಲೆಮಾರಿಗೆ ತಲುಪಿಸಿದ ಹೆಗ್ಗಳಿಕೆಯಾದರೂ ಸರಕಾರದ್ದಾಗಬಹುದು. ಹಿಂದಿ ಹೇರಿಕೆಯ ಜೊತೆ ಜೊತೆಗೆ, ಉತ್ತರ ಭಾರತದ ನಾಯಕರನ್ನು ಕನ್ನಡಿಗರ ಮೇಲೆ ಹಂತಹಂತವಾಗಿ ಹೇರುತ್ತಿರುವ ಈ ದಿನಗಳಲ್ಲಿ ಅನಗತ್ಯವಾಗಿ ಸಾವರ್ಕರ್ ಹೆಸರನ್ನು ಕನ್ನಡಕ್ಕೆ ಆಮದು ಮಾಡಲು ಹೊರಟಿರುವ ಸರಕಾರದ ನಿರ್ಧಾರ ಪ್ರಶ್ನಾರ್ಹವಾಗಿದೆ.

ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಸ್ವಾತಂತ್ರ ಸೇನಾನಿ ದೊರೆಸ್ವಾಮಿ, ಡಾ.ರಾಜ್‌ಕುಮಾರ್...ಹೀಗೆ ಸಾಲು ಸಾಲು ಸಾಧಕರ ಹೆಸರುಗಳು ನಮ್ಮ ಮುಂದಿರುವಾಗ, ಹಲವು ವಿವಾದಗಳನ್ನು ಮೈಮೇಲೆ ಹೊದ್ದುಕೊಂಡ ಸಾವರ್ಕರ್ ಹೆಸರನ್ನು ತಂದು ಮೇಲ್ಸೇತುವೆಗೆ ಅಂಟಿಸುವ ಅಗತ್ಯವಾದರೂ ಏನಿದೆ? ಬಿಜೆಪಿಯ ನಾಯಕರಿಗೆ ಸಾವರ್ಕರ್ ಕುರಿತಂತೆ ಹೆಮ್ಮೆಯಿದೆಯೆಂದಾದರೆ ಅದನ್ನು ಪ್ರದರ್ಶಿಸಲು ಪಕ್ಷದ ಕಚೇರಿ ಅಥವಾ ಪಕ್ಷಕ್ಕೆ ಸಂಬಂಧಿಸಿದ ಇನ್ನಿತರ ಕಟ್ಟಡಗಳಿವೆ. ನಿಜಕ್ಕೂ ಸಾವರ್ಕರ್ ಸಿದ್ಧಾಂತದ ಬಗ್ಗೆ ಬಿಜೆಪಿಗೆ ಒಲವಿದ್ದರೆ, ಗೋವಿನ ಕುರಿತಂತೆ ಸಾವರ್ಕರ್ ಯಾವ ನಿಲುವನ್ನು ತಳೆದಿದ್ದಾರೆಯೋ ಅದನ್ನು ಅನುಷ್ಠಾನಗೊಳಿಸಲಿ. ಗೋವನ್ನು ಮಾತೆ ಎಂದು ಕರೆಯುವುದನ್ನು ಸಾವರ್ಕರ್ ತೀವ್ರವಾಗಿ ವಿರೋಧಿಸಿದ್ದರು. ಬೆಂಗಳೂರಿನ ಜೊತೆಗೆ ಯಾವ ರೀತಿಯಲ್ಲೂ ಸಂಬಂಧವಿಲ್ಲದ ಸಾವರ್ಕರ್‌ರನ್ನು ನಾಡಿನ ಜನರ ಮೇಲೆ ಅಕಾರಣವಾಗಿ ಹೇರುವುದು, ಜನರ ಮನಸುಗಳನ್ನು ಬೆಸೆಯುವ ವೌಲ್ಯಗಳನ್ನು ಹೊಂದಿರುವ ಕನ್ನಡತನದ ಮೇಲೆ ನಡೆಸುವ ದಾಳಿಯಾಗಿದೆ. ಸರಕಾರ ತಕ್ಷಣ ತನ್ನ ನಿರ್ಧಾರದಿಂದ ಹಿಂದೆ ಸರಿದು, ಕನ್ನಡ ನೆಲ, ಭಾಷೆಗಾಗಿ ದುಡಿದು ಜನರನ್ನು ಬೆಸೆಯಲು ಸೇತುವೆಯಾಗಿ ಕೆಲಸ ಮಾಡಿದ ಹಿರಿಯ ಕನ್ನಡಿಗರ ಹೆಸರನ್ನು ಮೇಲ್ಸೇತುವೆಗೆ ನಾಮಕರಣ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News