ಉತ್ತರಪ್ರದೇಶ: ರೈಲ್ವೆ ಶೌಚಾಲಯದಲ್ಲಿ ಕಾರ್ಮಿಕನ ಶವ ಪತ್ತೆ

Update: 2020-05-29 06:54 GMT

ಜಾನ್ಸಿ(ಉತ್ತರಪ್ರದೇಶ), ಮೇ 29: ಉತ್ತರಪ್ರದೇಶದ ಜಾನ್ಸಿ ರೈಲ್ವೆ ನಿಲ್ದಾಣದ ರೈಲಿನ ಶೌಚಾಲಯದಲ್ಲಿ 38ರ ವಯಸ್ಸಿನ ವಲಸಿಗ ಕಾರ್ಮಿಕನ ಮೃತದೇಹ ಗುರುವಾರ ಸಂಜೆ ಪತ್ತೆಯಾಗಿದೆ. ಮೃತದೇಹವು ಕೆಲವು ದಿನಗಳಿಂದ ಶೌಚಾಲಯದಲ್ಲಿತ್ತು ಎನ್ನಲಾಗಿದ್ದು, ರೈಲು ತನ್ನ ಪ್ರಯಾಣವನ್ನು ಮುಗಿಸಿದ ಬಳಿಕ ರೈಲ್ವೆ ಕಾರ್ಮಿಕರು ರೈಲನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಈ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನುಗುರುತಿಸಲಾಗಿದ್ದು, ಮೃತಪಟ್ಟವನನ್ನು ಉತ್ತರಪ್ರದೇಶದ ಬಸ್ತಿ ಜಿಲ್ಲೆಯ ಮೋಹನ್ ಲಾಲ್ ಶರ್ಮಾ ಎಂದು ಗುರುತಿಸಲಾಗಿದೆ. ಶರ್ಮಾ ಮುಂಬೈನಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಇತರ ಲಕ್ಷಾಂತರ ವಲಸಿಗ ಕಾರ್ಮಿಕರಂತೆಯೇ ಲಾಕ್‌ಡೌನ್ ಬಳಿಕ ಕೆಲಸ ಅಥವಾ ಹಣವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದ.

ಶರ್ಮಾ ಮೇ 23ಕ್ಕೆ ಜಾನ್ಸಿ ತಲುಪಲು ಶಕ್ತನಾಗಿದ್ದ. ಶರ್ಮಾ ಹಾಗೂ ಆತನೊಂದಿಗೆ ಇದ್ದವರನ್ನು ಜಿಲ್ಲಾಡಳಿತ ಬಸ್ತಿಯಿಂದ 70 ಕಿ.ಮೀ.ದೂರದ ಗೋರಖ್‌ಪುರ ರೈಲು ಏರುವಂತೆ ಕಳುಹಿಸಿಕೊಟ್ಟಿತ್ತು. ಗೋರಖ್‌ಪುರವೇ ರೈಲಿನ ಗಮ್ಯಸ್ಥಾನವಾಗಿತ್ತೇ ರೈಲು ಬಿಹಾರದ ಗಡಿ ದಾಟಿತ್ತೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇದೇ ರೈಲು ಜಾನ್ಸಿಗೆ ಬುಧವಾರ ವಾಪಸಾಗಿತ್ತು. ಗುರುವಾರ ರೈಲ್ವೆ ಕೆಲಸಗಾರರು ರೈಲನ್ನು ಸ್ವಚ್ಛಗೊಳಿಸುವಾಗ ಶರ್ಮಾನ ಮೃತದೇಹ ನೋಡಿ ಆಘಾತಕ್ಕೊಳಗಾಗಿದ್ದರು.

ಜಾನ್ಸಿ ಪೊಲೀಸರು ಗ್ರಾಮದ ಮುಖ್ಯಸ್ಥನನ್ನು ಕರೆಸಿ ಶವ ಗುರುತಿಸಿದ್ದರು. ಶರ್ಮಾ ತನ್ನೊಂದಿಗೆ 28,000 ರೂ, ಬಾರ್ ಸೋಪ್ ಹಾಗೂ ಪುಸ್ತಕಗಳನ್ನು ಇಟ್ಟುಕೊಂಡಿರುವುದು ನಮಗೆ ತಿಳಿಯಿತು. ಕೆಲಸವಿಲ್ಲದ ಕಾರಣ ಮನೆಗೆ ವಾಪಸಾಗಲು ಬಯಸಿದ್ದ ಎಂದು ಮೃತ ಶರ್ಮಾನ ಸಂಬಂಧಿಯೊಬ್ಬರು ಹೇಳಿದ್ದಾರೆ.

ಶರ್ಮಾ ಅವರ ಶವಪರೀಕ್ಷೆ ನಡೆಸಲಾಗಿದ್ದು, ಕೋವಿಡ್-19 ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News