ಸುಪ್ರೀಂನಲ್ಲಿ ಸರಕಾರವನ್ನು ಸಮರ್ಥಿಸಲು ತಪ್ಪು ವಾಟ್ಸ್ ಆ್ಯಪ್ ಸಂದೇಶ ಉಲ್ಲೇಖಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ

Update: 2020-05-30 14:43 GMT
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ

ಮೇ 28ರಂದು ಸುಪ್ರೀಂಕೋರ್ಟ್, ದೇಶದ ವಿವಿಧೆಡೆ ಲಾಕ್‍ಡೌನ್‍ನಿಂದಾಗಿ ಸಿಕ್ಕಿಹಾಕಿಕೊಂಡ ವಲಸೆ ಕಾರ್ಮಿಕರ ಸ್ಥಿತಿಗತಿ ಬಗ್ಗೆ ಸ್ವಯಂಪ್ರೇರಿತ ದಾವೆಯ ವಿಚಾರಣೆ ನಡೆಸಿತು. ಈ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಈ ಸಮಸ್ಯೆಯನ್ನು ನಿಭಾಯಿಸಲು ಸರ್ಕಾರ ಕೈಗೊಂಡ ಕ್ರಮಗಳನ್ನು ಪ್ರಸ್ತುತಪಡಿಸಿದರು. ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡರೂ, ಹಲವು ಮಂದಿ ಋಣಾತ್ಮಕ ಅಂಶಗಳನ್ನು ಹರಡುತ್ತಿದ್ದಾರೆ ಎಂದು ವಾದಿಸಿದರು. ಈ “ಐಷಾರಾಮಿ ಬುದ್ಧಿಜೀವಿಗಳು” ದೇಶದ ಪ್ರಯತ್ನವನ್ನು ಗುರುತಿಸುತ್ತಿಲ್ಲ ಎಂದೂ ಹೇಳಿದರು.

ಸಾಲಿಸಿಟರ್ ಜನರಲ್ ಅವರು, ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕೆವಿನ್ ಕಾರ್ಟರ್ ಅವರು ಸುಡಾನ್‍ನ ಕ್ಷಾಮದ ವೇಳೆ ಕ್ಲಿಕ್ಕಿಸಿದ ಹದ್ದು ಮತ್ತು ಮಗುವಿನ ಫೋಟೊದ ಕಥೆಯನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು: “1983ರಲ್ಲಿ ಫೋಟೊಗ್ರಾಫರ್ ಒಬ್ಬರು ಸುಡಾನ್‍ಗೆ ಭೇಟಿ ನೀಡಿದರು. ಅಲ್ಲಿ ತೀರಾ ಸಂಕಷ್ಟದಲ್ಲಿ ಒಬ್ಬ ಬಾಲಕಿ ಇದ್ದಳು. ಹದ್ದು ಆ ಮಗು ಸಾಯುವುದನ್ನೇ ಕಾಯತ್ತಾ ಕುಳಿತಿತ್ತು. ಆತ ಆ ದೃಶ್ಯವನ್ನು ಕ್ಲಿಕ್ಕಿಸಿದರು. ಆ ಚಿತ್ರ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟವಾಯಿತು ಮತ್ತು ಛಾಯಾಗ್ರಾಹಕನಿಗೆ ಪುಲಿಟ್ಜರ್ ಪ್ರಶಸ್ತಿ ನೀಡಲಾಯಿತು. ಅವರು ನಾಲ್ಕು ತಿಂಗಳ ಬಳಿಕ ಆತ್ಮಹತ್ಯೆ ಮಾಡಿಕೊಂಡರು. ಪತ್ರಕರ್ತರೊಬ್ಬರು ಅವರನ್ನು ಕುರಿತು ಮಗುವಿಗೆ ಏನಾಯಿತು ಎಂದು ಕೇಳಿದರು. “ಗೊತ್ತಿಲ್ಲ ನಾನು ಮನೆಗೆ ಬರಬೇಕಿತ್ತು” ಎಂಬ ಉತ್ತರ ಅವರಿಂದ ಬಂತು. ಆಗ ವರದಿಗಾರ, ಎಷ್ಟು ಹದ್ದುಗಳಿದ್ದವು ಎಂದು ಮತ್ತೆ ಪ್ರಶ್ನಿಸಿದ. ಒಂದು ಎಂದು ಆತ ಉತ್ತರಿಸಿದ. ಆಗ ವರದಿಗಾರ, ಇಲ್ಲ. ಎರಡು ಹದ್ದುಗಳಿದ್ದವು. ಒಂದು ಕ್ಯಾಮೆರಾ ಹಿಡಿದಿತ್ತು..” ಎಂದು ಹೇಳಿದ ಎಂಬುವುದಾಗಿ ಉಲ್ಲೇಖಿಸಿದ್ದಾರೆ ಎಂದು Live Law ಟ್ವೀಟ್ ಮಾಡಿದೆ.

ಈ ವಿಚಾರಣೆಯ ವೇಳೆ ಹಾಜರಿದ್ದ ವಕೀಲರೊಬ್ಬರನ್ನು altnews.in ಕೇಳಿದಾಗ, ‘Live Law’ ದಲ್ಲಿ ವರದಿಯಾದ ಈ ಅಂಶ ನಿಖರವಾದದ್ದು ಎಂದು ದೃಢಪಡಿಸಿದರು.

ಸುಪ್ರೀಂಕೋರ್ಟ್‍ನಲ್ಲಿ ವಾಟ್ಸಪ್ ಫಾರ್ವರ್ಡ್ ಮೆಸೇಜ್ ಉಲ್ಲೇಖಿಸಿದ ಸಾಲಿಸಿಟರ್ ಜನರಲ್

ಸಾಲಿಸಿಟರ್ ಜನರಲ್ ಬಣ್ಣಿಸಿದ ಈ ಕಥೆ ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗ ವಾಟ್ಸಪ್ ಬಳಕೆದಾರರಲ್ಲಿ ಒಂದು ವಾರ ಕಾಲ ವ್ಯಾಪಕವಾಗಿ ಹರಿದಾಡುತ್ತಿತ್ತು. ಸರ್ಕಾರದ ವಿರುದ್ಧದ ಟೀಕೆಗಳ ಸದ್ದಡಗಿಸುವ ನಿಟ್ಟಿನಲ್ಲಿ, ಕೆವಿನ್ ಕಾರ್ಟರ್ ಅವರ ಕಥೆಗೆ ಪರ್ಯಾಯವಾಗಿ ಇದು ಬಳಕೆಯಾಗಿತ್ತು ಹಾಗೂ ವಲಸೆ ಕಾರ್ಮಿಕರ ಸಂಕಷ್ಟಗಳನ್ನು ಹದ್ದುಗಳಿಗೆ ಹೋಲಿಸಿತು. ತುಷಾರ್ ಮೆಹ್ತಾ ಅವರು ಈ ಕ್ಷಾಮದ ಕಾಲಘಟ್ಟವನ್ನು ತಪ್ಪಾಗಿ ಉಲ್ಲೇಖಿಸಿದರು; ಆದರೆ ಉಳಿದಂತೆ ಕಥೆಯನ್ನು ಬಹುತೇಕ ಯಥಾವತ್ತಾಗಿ ವಿವರಿಸಿದರು.

ವೈರಲ್ ಆದ ವಾಟ್ಸ್ ಅಪ್ ಸಂದೇಶವನ್ನು ದೇಶದ ಅತ್ಯುನ್ನತ ಕೋರ್ಟ್‍ನಲ್ಲಿ ಶಬ್ದಶಃ ವಿವರಿಸಿದ್ದು ನಿಜಕ್ಕೂ ಆಘಾತಕಾರಿ.

ವಾಸ್ತವವೇನು?: ಈ ಹಸಿದ ಬಾಲಕ ಮತ್ತು ಹದ್ದಿನ ಮತ್ತೊಂದು ರೂಪ ಭಿನ್ನ ಸಂದೇಶದೊಂದಿಗೆ ಹಲವು ವರ್ಷಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿತ್ತು. ಈ ಕಥೆಯ ಜತೆಗಿನ ಭಿನ್ನ ಸಂದೇಶವನ್ನು 2008ರಲ್ಲಿ ‘ಸ್ನೋಪ್ಸ್’ ಪತ್ತೆ ಮಾಡಿತ್ತು.

ಈ ಹಸಿದ ಬಾಲಕ ಮತ್ತು ಹದ್ದಿನ ಈ ಚಿತ್ರ ವಾಸ್ತವವಾಗಿ 1993ರ ಸುಡಾನ್ ಕ್ಷಾಮದ ಸಂದರ್ಭದಲ್ಲಿ ತೆಗೆದ ಆಕರ್ಷಕ ಚಿತ್ರವಾಗಿತ್ತು. ದಕ್ಷಿಣ ಆಫ್ರಿಕಾದ ಛಾಯಾಗ್ರಾಹಕ-ಪತ್ರಕರ್ತ ಕೆವಿನ್ ಕಾರ್ಟರ್ ಈ ಚಿತ್ರಕ್ಕೆ ಪುಲಿಟ್ಜರ್ ಪ್ರಶಸ್ತಿ ಪಡೆದ ಕೆಲವೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ಈ ಚಿತ್ರ ಮೊದಲ ಬಾರಿಗೆ ನ್ಯೂಯಾರ್ಕ್ ಟೈಮ್ಸ್‍ನ 1993ರ ಮಾರ್ಚ್ 26ರ ಸಂಚಿಕೆಯಲ್ಲಿ ಪ್ರಕಟವಾಯಿತು. ಆ ಬಾಲಕನ ಬಗ್ಗೆ ಅಸಂಖ್ಯಾತ ವಿಚಾರಣೆಗಳು ಬಂದ ಹಿನ್ನೆಲೆಯಲ್ಲಿ 1993ರ ಮಾರ್ಚ್ 30ರಂದು “ಹಲವು ಮಂದಿ ಓದುಗರು ಬಾಲಕಿಯ ಸ್ಥಿತಿ ಬಗ್ಗೆ ಪ್ರಶ್ನಿಸಿದ್ದಾರೆ. ಛಾಯಾಗ್ರಾಹಕ ಹೇಳಿದಂತೆ ಬಾಲಕಿ ಚೇತರಿಸಿಕೊಂಡು ಹದ್ದನ್ನು ಓಡಿಸಿದ್ದಾಳೆ. ಆಕೆ ಕೇಂದ್ರವನ್ನು ತಲುಪಿದ್ದಾಳೆಯೇ ಎನ್ನುವುದು ಖಚಿತವಾಗಿಲ್ಲ” ಎಂದು ಸ್ಪಷ್ಟನೆ ನೀಡಿದ್ದರು.

ಛಾಯಾಗ್ರಾಹಕ ಆ ಬಾಲಕಿಯ ಚಿತ್ರ ಸೆರೆಹಿಡಿದರೇ ವಿನಃ ಆಕೆಯ ನೆರವಿಗೆ ಬರಲಿಲ್ಲ ಎಂದು ತಿಳಿದ ಹಲವು ಮಂದಿ ಕಾರ್ಟರ್ ಅವರನ್ನು ಟೀಕಿಸಿದ್ದರು. ಟೈಮ್ ನಿಯತಕಾಲಿಕ ಅವರ ಜೀವನ ಮತ್ತು ಸಾವಿನ ಕುರಿತ ವ್ಯಕ್ತಿಚಿತ್ರದಲ್ಲಿ, “ಪುಲಿಟ್ಜರ್ ಪ್ರಶಸ್ತಿಯ ಖ್ಯಾತಿಯ ಜತೆಗೆ ಟೀಕೆಗಳನ್ನೂ ಎದುರಿಸಿದ್ದರು. ದಕ್ಷಿಣ ಆಫ್ರಿಕಾದ ಕೆಲ ಪತ್ರಕರ್ತರು ಈ ಪ್ರಶಸ್ತಿಯನ್ನು ಆಕಸ್ಮಿಕ ಎಂದು ಬಣ್ಣಿಸಿದ್ದರು ಹಾಗೂ ಪ್ರತಿರೂಪವನ್ನು ವ್ಯವಸ್ಥೆ ಮಾಡಿದ ಆರೋಪವೂ ಕೇಳಿಬಂದಿತ್ತು. ಈ ಲೇಖನದಲ್ಲಿ ಹದ್ದು ಎಂದು ಕರೆದ ಮತ್ತೊಬ್ಬ ಪತ್ರಕರ್ತ ಹಾಗೂ ಕಾರ್ಟರ್ ಅವರ ನಡುವಿನ ಸಂಭಾಷಣೆಯ ಉಲ್ಲೇಖ ಇರಲಿಲ್ಲ. ಈ ಹೇಳಿಕೆಗೆ ತೀರಾ ನಿಕಟ ಉಲ್ಲೇಖವೆಂದರೆ ಸೈಂಟ್ ಪಿಟ್ಸ್‍ಬರ್ಗ್ (ಫ್ಲೋರಿಡಾ) ಟೈಮ್ಸ್‍ನಲ್ಲಿ ಪ್ರಕಟವಾದ ಅಭಿಪ್ರಾಯ: “ಆ ಛಾಯಾಗ್ರಾಹಕ ಆಕೆಯ ನರಳಿಕೆಯ ಸರಿಯಾದ ಫ್ರೇಮ್ ಸೆರೆ ಹಿಡಿಯಲು ತಮ್ಮ ಲೆನ್ಸ್ ಹೊಂದಿಸಿದ್ದಾರೆ. ಬಹುಶಃ ಇನ್ನೊಂದು ಹದ್ದು ಕೂಡಾ ಆ ದೃಶ್ಯದಲ್ಲಿ ಇದ್ದಿರಬೇಕು”

ಈ ಆಕರ್ಷಕ ಚಿತ್ರ ಕುರಿತ ಇನ್ನೊಂದು ಲೇಖನದಲ್ಲಿ ಟೈಮ್ ನಿಯತಕಾಲಿಕ, “ಮಗುವಿನ ಚಿತ್ರವನ್ನು ಆತ ಸೆರೆಹಿಡಿಯುತ್ತಿದ್ದಂತೆ, ಹದ್ದು ಪಕ್ಕದಲ್ಲೇ ಬಂದು ಕುಳಿತಿದೆ. ಆ ಸಂತ್ರಸ್ತೆಯ ರೋಗದ ಕಾರಣದಿಂದ ಆಕೆಯನ್ನು ಸ್ಪರ್ಶಿಸದಂತೆ ಕಾರ್ಟರ್‍ಗೆ ಸಲಹೆ ಮಾಡಲಾಗಿತ್ತು. ಆದ್ದರಿಂದ ಸಹಾಯ ಮಾಡುವ ಬದಲು, ಆ ಹದ್ದು ತನ್ನ ರೆಕ್ಕೆ ತೆರೆಯುತ್ತದೆ ಎಂಬ ನಿರೀಕ್ಷೆಯಲ್ಲಿ 20 ನಿಮಿಷ ಕಾಲ ಕಾದಿದ್ದರು. ಆದರೆ ಅದು ತೆರೆಯಲಿಲ್ಲ.  ಕಾರ್ಟರ್ ಹದ್ದನ್ನು ಹೆದರಿಸಿ ಓಡಿಸಿ, ಮಗು ಕೇಂದ್ರಕ್ಕೆ ಹೋಗುವುದನ್ನು ನೋಡಿದರು. ಬಳಿಕ ಸಿಗರೇಟ್ ಹೊತ್ತಿಸಿ ದೇವರ ಜತೆ ಮಾತನಾಡಿದರು ಹಾಗೂ ಅತ್ತರು”

ಆದ್ದರಿಂದ ಬಹುಶಃ ಕಾರ್ಟರ್ ಮಗುವಿಗೆ ನೆರವಾಗುವ ಸಲುವಾಗಿ ಹದ್ದನ್ನು ಅಟ್ಟಿದ್ದರು. ರೋಗದ ಕಾರಣದಿಂದ ಈ ಕ್ಷಾಮಸಂತ್ರಸ್ತೆ ಬಾಲಕಿಯನ್ನು ಸ್ಪರ್ಶಿಸದಂತೆ ಅವರಿಗೆ ಸೂಚಿಸಿದ್ದರಿಂದ ಮಗುವನ್ನು ಎತ್ತಲಿಲ್ಲ.

ಅವರ ಸಾವಿಗೆ ಹದ್ದು ಮತ್ತು ಮಗುವಿನ ಫೋಟೊ ಕಾರಣ ಎಂಬ ಉಲ್ಲೇಖ ಯಾವ ಬರಹದಲ್ಲೂ ಸಿಗುವುದಿಲ್ಲ. ಅವರ ಕೆಲಸ ಒಟ್ಟಾರೆಯಾಗಿ ಭಾವನಾತ್ಮಕವಾಗಿದ್ದು, ಅಸ್ತಿತ್ವವಾದದ ಸ್ಪಷ್ಟತೆಯನ್ನು ಮತ್ತು ಹಿಂಸೆಯ ಅಸ್ತಿತ್ವವನ್ನು ಮತ್ತೆ ಮತ್ತೆ ಅನುಭವಕ್ಕೆ ತರುವಂಥದ್ದು. ಈ ಸಂಕಷ್ಟಗಳಿಂದ ಹೊರಬರಲು ಅವರು ಡ್ರಗ್ಸ್ ಬಳಸುತ್ತಿದ್ದರು. “ರೊಮ್ಯಾನ್ಸ್‍ನಿಂದ ರೊಮ್ಯಾನ್ಸ್‍ಗೆ ಜಿಗಿದರು, ವಿವಾಹೇತರ ಸಂಬಂಧದಿಂದ ಮಗಳನ್ನು ಪಡೆದರು” ಎಂದು ಟೈಮ್ ಲೇಖನದಲ್ಲಿ ಅವರ ಅಸ್ಥಿರ ಬದುಕಿನ ಬಗ್ಗೆ ಸುಳಿವು ಸಿಗುತ್ತದೆ. ಟೈಮ್‍ನಲ್ಲಿ ಪ್ರಕಟವಾದ ಕಾರ್ಟರ್ ಅವರ ಆತ್ಮಹತ್ಯೆ ಟಿಪ್ಪಣಿಯಲ್ಲಿ ಹಣಕಾಸು ಸಮಸ್ಯೆಯ ಬಗ್ಗೆಯೂ ಉಲ್ಲೇಖವಿತ್ತು. “ಫೋನ್ ಇಲ್ಲದೆ.. ಬಾಡಿಗೆ ನೀಡಲು ಹಣ ಇಲ್ಲದೇ, ಮಗುವಿನ ನೆರವಿಗೆ.. ಸಾಲಗಾರರಿಗೆ ನೀಡಲು ಹಣವಿಲ್ಲದೇ ಖಿನ್ನನಾಗಿದ್ದೇನೆ.. ಹಣ,, ಹಣ!!! ಗಾಯಾಳು ಮತ್ತು ಹಸಿದ ಮಕ್ಕಳ ಹತ್ಯೆ ಮತ್ತು ಶವಗಳು, ಕ್ರೋಧ ಮತ್ತು ನೋವು ಖುಷಿಯ ಹುಚ್ಚು ಜನರು ಸಾಮಾನ್ಯವಾಗಿ ಪೊಲೀಸರು, ಗಲ್ಲಿಗೇರಿಸುವವರು ಹೀಗೆ ವೈವಿಧ್ಯಮಯ ನೆನಪುಗಳಿಂದ ಜರ್ಜರಿತನಾಗಿದ್ದೇನೆ..ನಾನು ಅದೃಷ್ಟಶಾಲಿಯಾಗಿದ್ದರೆ ಕೆನ್‍ನನ್ನು ಸೇರಲು ಹೋಗುತ್ತಿದ್ದೇನೆ”.

ಕೆನ್, ಕಾರ್ಟರ್ ಅವರ ಆಪ್ತಗೆಳೆಯನಾಗಿದ್ದು, 1994ರಲ್ಲಿ ಅಂದರೆ ಕಾರ್ಟರ್ ಆತ್ಮಹತ್ಯೆ ಮಾಡಿಕೊಳ್ಳುವ ಸ್ವಲ್ಪ ಮೊದಲು ದಕ್ಷಿಣ ಆಫ್ರಿಕಾದ ಟೊಕೋಝಾದಲ್ಲಿ ನಡೆದ ಹಿಂಸಾಚಾರದ ವರದಿ ಮಾಡುವ ವೇಳೆ ಗುಂಡೇಟಿಗೆ ಬಲಿಯಾಗಿದ್ದರು. ಅವರ ಸಾವು ಕಾರ್ಟರ್ ಅವರನ್ನು ಕಂಗೆಡಿಸಿತ್ತು. ಗುಂಡೇಟು ಕೆನ್ ಬದಲಾಗಿ ನನಗೆ ತಗುಲಬೇಕಿತ್ತು ಎಂದು ಸ್ನೇಹಿತರ ಬಳಿ ಕಾರ್ಟರ್ ಹೇಳಿಕೊಂಡಿದ್ದರು. ಹಿಂಸೆ ಮತ್ತು ಸಂಕಷ್ಟವನ್ನು ವರದಿ ಮಾಡುವ ಅವರ ಕಾರ್ಯನಿಯೋಜನೆ ಅವರ ಮಾನಸಿಕ ಆರೋಗ್ಯವನ್ನು ಹದಗೆಡಿಸಿತ್ತು. “ಈ ವರದಿಗಾರಿಕೆಯಲ್ಲಿ ತೊಡಗಿಸಿಕೊಂಡ ಪ್ರತಿಯೊಬ್ಬ ಛಾಯಾಗ್ರಾಹಕರಿಗೂ ಇದು ಬಾಧಿಸಿದೆ. ನೀವು ಶಾಶ್ವತವಾಗಿ ಬದಲಾಗಿದ್ದೀರಿ. ತಾವು ಒಳ್ಳೆಯವರಾಗಬೇಕು ಎಂಬ ಭಾವನೆಯಿಂದ ಯಾರೂ ಇಂಥ ಕೆಲಸ ಮಾಡಲಾರರು. ಮುಂದುವರಿಯುವುದು ನಿಜಕ್ಕೂ ಕಷ್ಟಕರ” ಎಂದು ಸ್ನೇಹಿತರ ಬಗ್ಗೆ ಹೇಳಿಕೊಂಡಿದ್ದರು ಎಂದು ವರದಿಯಾಗಿತ್ತು. ಕೆಲಸ ನಿಜಕ್ಕೂ ಚೆನ್ನಾಗಿ ನಡೆಯುತ್ತಿರಲಿಲ್ಲ ಎನ್ನುವುದೂ ಅವರ ಸಾವಿಗೆ ಕಾರಣವಾಯಿತು. ಬಹಿರಂಗವಾಗಿಯೇ ಅವರು ಆತ್ಮಹತ್ಯೆ ಬಗ್ಗೆ ಹೇಳುತ್ತಿದ್ದರು ಎಂದು ಸ್ನೇಹಿತರು ವಿವರಿಸಿದ್ದಾರೆ.

1994ರ ಜುಲೈ 27ರಂದು ಅವರು ಆತ್ಮಹತ್ಯೆ ಮಾಡಿಕೊಂಡರು.

ಚಿತ್ರದಲ್ಲಿ ಬಾಲಕಿ ಎಂದು ತಪ್ಪಾಗಿ ಭಾವಿಸಿದ್ದ ಮಗು ನಿಜವಾಗಿ ಬಾಲಕ. ಆತ ಬರಗಾಲದಲ್ಲಿ ಉಳಿದುಕೊಂಡಿದ್ದ ಎನ್ನುವುದು ಆಮೇಲೆ ದೃಢಪಟ್ಟಿತು. ಆದರೆ 14 ವರ್ಷ ಬಳಿಕ ಆತ ಮಲೇರಿಯಾ ಜ್ವರದಿಂದ ಸಾವನ್ನಪ್ಪಿದ. ವಾಟ್ಸಪ್‍ನಲ್ಲಿ ಫಾರ್ವರ್ಡ್ ಮಾಡಲಾದ ಸಂದೇಶವನ್ನು ಆಧರಿಸಿ, ಸಾಲಿಸಿಟರ್ ಜನರರ್ ಅವರು ಮಗುವಿನ ಸಾವಿಗೆ ಕಾರ್ಟರ್ ಅವರನ್ನು ದೂಷಿಸಿದ್ದಾರೆ ಹಾಗೂ ಮತ್ತೊಬ್ಬ ಪತ್ರಕರ್ತರ ಜತೆಗಿನ ಮಾತುಕತೆಯಲ್ಲಿ ಅವರನ್ನು ಹದ್ದು ಎಂದು ಕರೆಯಲಾಗಿದೆ ಎಂದು ಹೇಳಿದ್ದರು. ಅಂಥ ಸಂವಾದದ ಬಗ್ಗೆ ಯಾವ ಉಲ್ಲೇಖವೂ ಇಲ್ಲ. ವಾಸ್ತವವಾಗಿ ಕಾರ್ಟರ್ ಛಾಯಾಚಿತ್ರ ಸೆರೆಹಿಡಿಯುವ ವೇಳೆ ಹದ್ದನ್ನು ಓಡಿಸಿದ್ದಾರೆ ಹಾಗೂ ಮಗು ಬದುಕಿದೆ. ಪೆಗುರಸ್‍ನಲ್ಲಿ ಪ್ರಕಟವಾದ ಒಂದು ಲೇಖನದಲ್ಲಿ, ಸುಡಾನ್ ಬರಗಾಲದ ಭಯಾನಕ ದೃಶ್ಯಗಳಿಂದ ಕೆವಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ತಪ್ಪು ಮಾಹಿತಿಯೂ ಹರಡಿತ್ತು.

Writer - ಸ್ಯಾಮ್ ಜಾವೇದ್, altnews.in

contributor

Editor - ಸ್ಯಾಮ್ ಜಾವೇದ್, altnews.in

contributor

Similar News