ಮಧುಮೇಹ ಕುರಿತು ಈ ಸಾಮಾನ್ಯ ತಪ್ಪುಗ್ರಹಿಕೆಗಳ ಬಗ್ಗೆ ಎಚ್ಚರಿಕೆಯಿರಲಿ

Update: 2020-05-31 05:47 GMT

ಮಧುಮೇಹ ಕುರಿತು ಹಲವಾರು ಮಿಥ್ಯೆಗಳು ಅಥವಾ ತಪ್ಪುಗ್ರಹಿಕೆಗಳು ಜನರಲ್ಲಿ ಮನೆ ಮಾಡಿವೆ. ಮಧುಮೇಹ ಕುರಿತಂತೆ ಸಣ್ಣದೊಂದು ತಪ್ಪುಗ್ರಹಿಕೆಯೂ ಅತೀವ ಅಪಾಯಕಾರಿಯಾಗಬಲ್ಲದು. ಮಧುಮೇಹ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸದಿದ್ದರೆ ಅವರ ಸ್ಥಿತಿ ಹೆಚ್ಚು ಗಂಭೀರವಾಗಬಹುದು. ಮಧುಮೇಹದಲ್ಲಿ ಟೈಪ್-1 ಮತ್ತು ಟೈಪ್-2 ಹೀಗೆ ಎರಡು ವಿಧಗಳಿವೆ. ಅಪಾಯಕಾರಿಯಾಗಬಲ್ಲ ಮಧುಮೇಹ ಕುರಿತು ಐದು ತಪ್ಪುಕಲ್ಪನೆಗಳು ಇಲ್ಲಿವೆ.

* ವ್ಯಾಯಾಮ

ವ್ಯಾಯಾಮ ಮಾಡಿದರೆ ತಮ್ಮ ರಕ್ತದಲ್ಲಿಯ ಸಕ್ಕರೆ ಮಟ್ಟ ಕುಸಿಯುತ್ತದೆ ಎಂಬ ಕಾರಣದಿಂದ ತಾವು ವ್ಯಾಯಾಮ ಮಾಡುವಂತಿಲ್ಲ ಮಧುಮೇಹಿಗಳು ಭಾವಿಸಿರುತ್ತಾರೆ. ಮಧುಮೇಹ ರೋಗಿಗಳು ವ್ಯಾಯಾಮ,ಇನ್ಸುಲಿನ್ ಮತ್ತು ಆಹಾರ ಕ್ರಮ ಈ ಮೂರನ್ನೂ ಸಮತೋಲನಗೊಳಿಸಲು ಪ್ರಯತ್ನಿಸಬೇಕು ಎಂದು ತಜ್ಞರು ಬೆಟ್ಟು ಮಾಡುತ್ತಾರೆ. ಮಧುಮೇಹ ನಿಯಂತ್ರಣದಲ್ಲಿ ವ್ಯಾಯಾಮವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ದೇಹತೂಕವನ್ನು ಕಾಯ್ದುಕೊಳ್ಳಲೂ ನೆರವಾಗುತ್ತದೆ. ಹೀಗಾಗಿ ಮಧುಮೇಹಿಗಳು ನಿಯಮಿತವಾಗಿ ವ್ಯಾಯಾಮವನ್ನು ಮಾಡಬೇಕು.

 * ಇನ್ಸುಲಿನ್ ಕುರಿತು ಗೊಂದಲ

ಹೆಚ್ಚಿನ ಜನರು ಇನ್ಸುಲಿನ್ ತೆಗೆದುಕೊಳ್ಳುವುದನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ತಮ್ಮ ಹಿರಿಯರು ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದರೂ ಇನ್ಸುಲಿನ್ ಜೀವಕ್ಕೆ ಕೆಟ್ಟದ್ದು ಎಂಬ ನಂಬಿಕೆ ಅವರಲ್ಲಿರುತ್ತದೆ. ಆದರೆ ಅದು ಹಾಗಲ್ಲ. ಇನ್ಸುಲಿನ್ ಜೀವರಕ್ಷಕವಾಗಿದೆ,ಆದರೆ ಜನರು ಅದನ್ನು ಸೂಕ್ತವಾಗಿ ನಿರ್ವಹಿಸುವುದಿಲ್ಲ. ಮಧುಮೇಹ ರೋಗಿಯು ಇನ್ಸುಲಿನ್ ತೆಗೆದುಕೊಳ್ಳುವಾಗ ತನ್ನ ರಕ್ತದಲ್ಲಿಯ ಸಕ್ಕರೆ ಮಟ್ಟ ಕುಸಿಯದಂತೆ ಎಚ್ಚರಿಕೆ ವಹಿಸಬೇಕು. ಸಕ್ಕರೆ ಮಟ್ಟ ಅತಿಯಾಗಿ ಕುಸಿದರೆ ಅದು ಮಾರಣಾಂತಿಕವಾಗಬಲ್ಲದು.

* ಇನ್ಸುಲಿನ್ ಮತ್ತು ಟೈಪ್-2 ಮಧುಮೇಹ

ತಮಗೆ ಮಧುಮೇಹ ರೋಗವಿದೆ,ಅಂದರೆ ತಮ್ಮ ಶರೀರದಲ್ಲಿ ಸಾಕಷ್ಟು ಇನ್ಸುಲಿನ್ ಇಲ್ಲ ಎಂದು ಕೆಲವರು ನಂಬಿಕೊಂಡಿರುತ್ತಾರೆ. ಟೈಪ್- ಮಧುಮೇಹ ಪ್ರಕರಣದಲ್ಲಿ ಇದು ಸರಿ,ಏಕೆಂದರೆ ಅವರ ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ. ಟೈಪ್-2 ಮಧುಮೇಹ ರೋಗಿಗಳ ಶರೀರದಲ್ಲಿ ಸಾಕಷ್ಟು ಇನ್ಸುಲಿನ್ ಇರುತ್ತದೆ,ಆದರೆ ಈ ಇನ್ಸುಲಿನ್ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಎನ್ನುವುದು ಅವರಲ್ಲಿಯ ಸಮಸ್ಯೆಯಾಗಿರುತ್ತದೆ. ಇಂತಹವರಲ್ಲಿ ಶರೀರವು ಆಹಾರದಲ್ಲಿಯ ಗ್ಲುಕೋಸ್‌ನ್ನು ಹೀರಿಕೊಳ್ಳಲು ಇನ್ಸುಲಿನ್ ನೆರವಾಗುವುದಿಲ್ಲ. ಕಾಲಕ್ರಮೇಣ ಅವರ ಮೇದೋಜ್ಜೀರಕ ಗ್ರಂಥಿಯೂ ಇನ್ಸುಲಿನ್ ಉತ್ಪಾದನೆಯನ್ನು ನಿಲ್ಲಿಸುತ್ತದೆ ಮತ್ತು ಅವರು ಚುಚ್ಚುಮದ್ದಿನ ಮೂಲಕ ಇನ್ಸುಲಿನ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ.

  *ಸಿಹಿ ಮತ್ತು ಮಧುಮೇಹ : ಸಕ್ಕರೆ ಅಥವಾ ಸಿಹಿಯನ್ನು ಅತಿಯಾಗಿ ಸೇವಿಸುವುದು ಮಧುಮೇಹಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆ ಹೆಚ್ಚಿನವರಲ್ಲಿದೆ. ಆದರೆ ವ್ಯಕ್ತಿಯು ಬಾರ್ಡರ್‌ಲೈನ್ ಡಯಾಬಿಟಿಸ್ ಅಥವಾ ಪ್ರಿಡಯಾಬಿಟಿಸ್ ಅಥವಾ ಮಧುಮೇಹ ಪೂರ್ವ ಸ್ಥಿತಿಯಲ್ಲಿದ್ದಾಗ ಮಾತ್ರ ಹೀಗಾಗಬಹುದು. ಸಕ್ಕರೆಯ ಖಾದ್ಯಗಳನ್ನು ಅತಿಯಾಗಿ ಸೇವಿಸುವುದು ಮಧುಮೇಹಕ್ಕೆ ನೇರ ಕಾರಣವಲ್ಲ,ಆದರೆ ಇದರಿಂದ ಶರೀರದ ತೂಕ ಹೆಚ್ಚುವ ಅಪಾಯವಿದೆ ಮತ್ತು ಹೆಚ್ಚಿನ ದೇಹತೂಕವು ಮಧುಮೇಹವನ್ನುಂಟು ಮಾಡುತ್ತದೆ. ಮಧುಮೇಹಿಗಳಿಗೆ ಸಕ್ಕರೆ ಅಪಾಯಕಾರಿ ನಿಜ,ಆದರೆ ಶರೀರವನ್ನು ಪ್ರವೇಶಿಸಿದ ತಕ್ಷಣ ಗ್ಲುಕೋಸ್ ಅನ್ನು ಬಿಡುಗಡೆ ಮಾಡುವ ಎಲ್ಲ ಆಹಾರಗಳು,ಪಾನೀಯಗಳೂ ಅಪಾಯಕಾರಿಯಾಗಿವೆ. ಪ್ಲೇನ್ ಪಾಸ್ತಾ,ಬಿಳಿಯ ಬ್ರೆಡ್,ನೂಡಲ್ ಮತ್ತು ಅನ್ನ ಇವುಗಳಲ್ಲಿ ಸೇರಿವೆ.

* ಸಕ್ಕರೆಯ ಮಟ್ಟ

ಜನರು ಆಗಾಗ್ಗೆ ತಮ್ಮ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಊಹಿಸುತ್ತಿರುತ್ತಾರೆ. ತಲೆ ಸುತ್ತಿದಂತಾದಾಗ ಅಥವಾ ಶರೀರದಲ್ಲಿ ನಿಶ್ಶಕ್ತಿಯ ಅನುಭವವಾದಾಗಲೆಲ್ಲ ತಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾಗುತ್ತಿದೆ ಎಂದು ಅವರು ಭಾವಿಸುತ್ತಾರೆ. ಆದರೆ ಅದು ಹಾಗಲ್ಲ,ಹೆಚ್ಚಿನ ಸಂದರ್ಭಗಳಲ್ಲಿ ಜ್ವರ ಬಂದಾಗಲೂ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಲವರು ತಮ್ಮ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿದೆ ಮತ್ತು ಇದೇ ಕಾರಣದಿಂದ ತಾವು ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುತ್ತೇವೆ ಎಂದು ಭಾವಿಸುತ್ತಾರೆ.ಆದರೆ ಮೂತ್ರಕೋಶದ ಸೋಂಕಿನಿಂದಲೂ ಹಾಗಾಗುತ್ತದೆ. ಮಧುಮೇಹ ಸುದೀರ್ಘ ಕಾಲವಿದ್ದಷ್ಟೂ ಅದನ್ನು ಗುರುತಿಸುವುದು ಕಷ್ಟವಾಗುತ್ತದೆ. ಹೀಗಾಗಿ ಕೇವಲ ಊಹಿಸುತ್ತಲೇ ಇರುವ ಬದಲು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಪರೀಕ್ಷೆ ಮಾಡಿಸುವುದು ಅತ್ಯುತ್ತಮ ಮಾರ್ಗವಾಗಿದೆ. ಮಧುಮೇಹ ರೋಗಿಗಳು ತಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು ಅನಿವಾರ್ಯ. ವ್ಯಕ್ತಿಯು ರಕ್ತದಲ್ಲಿ ಸಕ್ಕರೆ ಮಟ್ಟವು ಸ್ಥಿರವಾಗಿ ಹೆಚ್ಚುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ. ರಕ್ತದಲ್ಲಿಯ ಸಕ್ಕರೆ ಮಟ್ಟದಲ್ಲಿ ಗಣನೀಯ ಏರಿಳಿತಗಳನ್ನು ಎಂದಿಗೂ ಕಡೆಗಣಿಸಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News