ಭಾರತದ ವಿರೋಧದ ನಡುವೆಯೂ ಹೊಸ ಭೂಪಟಕ್ಕಾಗಿ ಸಂಸತ್ನಲ್ಲಿ ವಿಧೇಯಕ ಮಂಡಿಸಿದ ನೇಪಾಳ

Update: 2020-05-31 17:46 GMT
ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ

ಮುಂಬೈ,ಮೇ 31: ಭಾರತದ ಪ್ರಬಲ ವಿರೋಧದ ನಡುವೆಯೂ ನೇಪಾಳದ ಹೊಸ ಭೂಪಟವನ್ನು ಅಂಗೀಕರಿಸುವ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ನೇಪಾಳ ಸರಕಾರವು ರವಿವಾರ ಸಂಸತ್‌ನಲ್ಲಿ ಮಂಡಿಸಿದೆ.

ಹೊಸ ಭೂಪಟದಲ್ಲಿ ಭಾರತದ ಪ್ರದೇಶಗಳಾದ ಲಿಂಪಿಯಾಧುರಾ, ಕಾಲಾಪಾನಿ ಹಾಗೂ ಲಿಪುಲೇಖ್‌ಗನ್ನು ನೇಪಾಳದ ಭಾಗಗಳೆಂದು ತೋರಿಸಲಾಗಿದೆ. ಈ ಪ್ರದೇಶಗಳನ್ನು ನೇಪಾಳವು ತನ್ನದೆಂದು ವಾದಿಸುತ್ತಿದೆ.

ಪ್ರಧಾನಿ ಕೆ.ಪಿ.ಶರ್ಮಾ ಒಲಿ ನೇತೃತ್ವದ ನೇಪಾಳ ಸರಕಾರವು ಮೇ 28ರಂದು ನೂತನ ಭೂಪಟವನ್ನು ಸದನದಲ್ಲಿ ಮಂಡಿಸಲು ನಿರ್ಧರಿಸಿತ್ತು. ಆದರೆ ಪ್ರಮುಖ ವಿರೋಧಪಕ್ಷವಾದ ನೇಪಾಳಿ ಕಾಂಗ್ರೆಸ್, ಈ ಬಗ್ಗೆ ಪಕ್ಷದೊಳಗೆ ಆಂತರಿಕವಾಗಿ ಚರ್ಚಿಸಬೇಕಾದ ಅಗತ್ಯವಿರುವುದರಿಂದ ಹೆಚ್ಚು ಕಾಲಾಕಾಶವನ್ನು ಕೋರಿತ್ತು. ಸಂವಿಧಾನ ತಿದ್ದುಪಡಿಗೆ ಮೂರನೆ ಎರಡರಷ್ಟು ಬಹುಮತದ ಅಗತ್ಯ ವಿರುವುದರಿಂದ ಒಲಿ ಸರಕಾರವು ಅದನ್ನು ತಾತ್ಕಾಲಿಕವಾಗಿ ಮುಂದೂಡಿತ್ತು.

   ನೇಪಾಳದ ಪ್ರಮುಖ ಪ್ರತಿಪಕ್ಷವಾದ ನೇಪಾಳಿ ಕಾಂಗ್ರೆಸ್ ಪಕ್ಷದ ಕೇಂದ್ರೀಯ ಸಮಿತಿಯು, ಶನಿವಾರ ನಡೆಸಿದ ಸಭೆಯಲ್ಲಿ ವಿಧೇಯಕದ ಪರವಾಗಿ ಮತ ಚಲಾಯಿಸುವಂತೆ ತನ್ನ ಸಂಸದರಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಓಲಿ ಸರಕಾರ ನೂತನ ಭೂಪಟ ಅಂಗೀಕರಿಸುವ ಸಂವಿಧಾನ ತಿದ್ದುಪಡಿ ವಿಧೇಯಕ ಮಂಡನೆಗೆ ಮುಂದಾಗಿದೆ.ಇಂದು ನೇಪಾಳದ ಸಂಸತ್ ಆಗಿರುವ ಜನಪ್ರತಿನಿಧಿ ಸಭಾದಲ್ಲಿ ಕಾನೂನು ಸಚಿವ ಶಿವ ಮಾಯಾ ತುಂಬಾಂಫೆ ವಿಧೇಯಕವನ್ನು ಮಂಡಿಸಿದರು.

ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್‌ನ ನಿರ್ಣಾಯಕ ಬೆಂಬಲ ದೊರೆತಿರುವುದರಿಂದಾಗಿ, ಒಲಿ ಸರಕಾರಕ್ಕೆ ಈ ವಿಧೇಯಕವು ಸದನದಲ್ಲಿ ಅಂಗೀಕಾರಗೊಳ್ಳಲು ಸಾಧ್ಯವಾಗಲಿದೆ. ಮಾಧೇಶಿ ಪಂಗಡದ ಪಕ್ಷಗಳು ಈ ವಿಧೇಯಕವನ್ನು ಬೆಂಬಲಿಸದಿರುವ ಸಾಧ್ಯತೆಯಿದೆ.

 ಉತ್ತರಖಂಡ ರಾಜ್ಯದ ಭಾಗವಾಗಿರುವ ಲಿಂಪಿಯಧುರಾ, ಲಿಪುಲೇಖ್ ಹಾಗೂ ಕಾಲಾಪಾನಿ ಪ್ರದೇಶಗಳನ್ನು ನೇಪಾಳವು ಅದರ ಹೊಸ ಭೂಪಟದಲ್ಲಿ ಸೇರ್ಪಡೆಗೊಳಿಸಿರುವುದನ್ನು ಭಾರತವು ಬಲವಾಗಿ ತಿರಸ್ಕರಿಸಿದೆ..

 ‘‘ಈ ಏಕಪಕ್ಷೀಯ ಕ್ರಮವು, ಐತಿಹಾಸಿಕ ಸತ್ಯಗಳನ್ನು ಹಾಗೂ ಪುರಾವೆಗಳನ್ನು ಆಧರಿಸಿಲ್ಲ. ಇಂತಹ ಕೃತಕ ರೀತಿಯ ಪ್ರಾಂತೀಯ ವಿಸ್ತರಣೆಯ ದಾವೆಗಳನ್ನು ಭಾರತವು ಒಪ್ಪಿಕೊಳ್ಳಲಾರದು’’ಎಂದು ಭಾರತದ ವಿದೇಶಾಂಗ ಸಚಿವಾಲಯವು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News