ಪಾಲಿಡಿಪ್ಸಿಯಾ ಅಥವಾ ಅತಿಯಾದ ಬಾಯಾರಿಕೆಗೆ ಐದು ಸಾಮಾನ್ಯ ಕಾರಣಗಳು

Update: 2020-05-31 13:48 GMT

ಹೊರಗೆ ಬಿಸಿಲಿನಲ್ಲಿ ತಿರುಗಾಡಿದಾಗ ಅಥವಾ ವ್ಯಾಯಾಮ ಮಾಡಿದ ಬಳಿಕ ಬಾಯಾರಿಕೆಯಾಗುವುದು ಸಹಜ. ಆದರೆ ಕೆಲವು ಪ್ರಕರಣಗಳಲ್ಲಿ ಒಂದೆರಡು ಗ್ಲಾಸ್ ನೀರು ಕುಡಿದರೂ ಬಾಯಾರಿಕೆಯು ತಣಿಯುವುದಿಲ್ಲ ಮತ್ತು ಇದನ್ನು ಕಡೆಗಣಿಸುವಂತಿಲ್ಲ,ಏಕೆಂದರೆ ಅತಿಯಾದ ದಾಹ ಅಥವಾ ನಿರಂತರ ನೀರಿನ ಸೇವನೆಯು ಶರೀರದಲ್ಲಿಯ ಆರೋಗ್ಯ ಸಮಸ್ಯೆಯ ಸಂಕೇತವಾಗಿರಬಹುದು.

 ಪಾಲಿಡಿಪ್ಸಿಯಾ ಅಥವಾ ಅತಿಯಾದ ಬಾಯಾರಿಕೆಗೆ ಕಾರಣಗಳಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುವ ಅಥವಾ ಮಸಾಲೆಯುಕ್ತ ಆಹಾರಗಳ ಸೇವನೆ,ವ್ಯಾಯಾಮ,ವಾಂತಿ, ಅತಿಸಾರ,ಉಷ್ಣ ಹವಾಮಾನ,ಅನಾರೋಗ್ಯ,ಮೂತ್ರವರ್ಧಕಗಳಂತಹ ಕೆಲವು ಔಷಧಿಗಳು ಇತ್ಯಾದಿಗಳು ಸೇರುತ್ತವೆ. ಆದರೆ ಆಗಾಗ್ಗೆ ಬಾಯಾರಿಕೆಯಾಗುವುದು ಅಥವಾ ಅತಿಯಾದ ದಾಹ ಈ ಕೆಳಗಿನ ಕೆಲವು ಗಂಭೀರ ಅನಾರೋಗ್ಯಗಳನ್ನು ಸೂಚಿಸಬಹುದು.

 *ನಿರ್ಜಲೀಕರಣ: ಇದು ಶರೀರದಲ್ಲಿ ಸಾಕಷ್ಟು ನೀರಿನ ಕೊರತೆಯಿದೆ ಎನ್ನುವುದನ್ನು ಸೂಚಿಸುವ ಸ್ಥಿತಿಯಾಗಿದೆ. ಪರಿಣಾಮವಾಗಿ ಸಹಜ ದೈನಂದಿನ ಪ್ರಕ್ರಿಯೆಗಳಿಗೆ ವ್ಯತ್ಯಯವುಂಟಾಗುತ್ತದೆ. ತೀವ್ರ ನಿರ್ಜಲೀಕರಣವು ಮೂತ್ರಪಿಂಡಗಳು,ಹೃದಯ ಮತ್ತು ಮಿದುಳಿನಂತಹ ಪ್ರಮುಖ ಅಂಗಾಂಗಗಳ ಕಾರ್ಯ ನಿರ್ವಹಣೆಗೆ ಬಾಧೆಯನ್ನುಂಟು ಮಾಡಬಲ್ಲದು. ನಿರ್ಜಲೀಕರಣವನ್ನು ಕಡೆಗಣಿಸಿದರೆ ಅದು,ವಿಶೇಷವಾಗಿ ಮಕ್ಕಳಲ್ಲಿ, ಸಾವಿಗೂ ಕಾರಣವಾಗಬಹುದು.

ಬಿಸಿಲಿಗೆ ಒಡ್ಡಿಕೊಳ್ಳುವಿಕೆ,ಕಠಿಣ ವ್ಯಾಯಾಮ,ಅತಿಯಾದ ವಾಂತಿ,ಅತಿಯಾಗಿ ಬೆವರುವಿಕೆ ಮತ್ತು ಪದೇ ಪದೇ ಮೂತ್ರವಿಸರ್ಜನೆಯಂತಹ ವಿವಿಧ ಕಾರಣಗಳಿಂದಾಗಿ ಶರೀರದಲ್ಲಿ ನಿರ್ಜಲೀಕರಣವುಂಟಾಗುತ್ತದೆ. ಪಾಲಿಡಿಪ್ಸಿಯಾದ ಜೊತೆಗೆ ಗಾಢವರ್ಣದ ಮೂತ್ರ,ಬಾಯಿ ಒಣಗುವಿಕೆ,ಒಣ ತ್ವಚೆ,ತಲೆನೋವು ಮತ್ತು ತಲೆ ಹಗುರವಾದಂತೆ ಅನಿಸುವುದು ಇತ್ಯಾದಿಗಳೂ ನಿರ್ಜಲೀಕರಣದ ಸಾಮಾನ್ಯ ಲಕ್ಷಣಗಳಾಗಿವೆ.

 * ಮಧುಮೇಹ: ಪಾಲಿಡಿಪ್ಸಿಯಾ ಅಥವಾ ಅತಿಯಾದ ಬಾಯಾರಿಕೆಯು ಮಧುಮೇಹದ ಸಾಮಾನ್ಯ ಲಕ್ಷಣಗಳಲ್ಲೊಂದಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಇದು ಮೊದಲು ಗಮನಕ್ಕೆ ಬರುವ,ಆದರೆ ಅತ್ಯಂತ ಹೆಚ್ಚು ಕಡೆಗಣಿಸಲ್ಪಡುವ ಮಧುಮೇಹದ ಲಕ್ಷಣವಾಗಿದೆ. ಮಧುಮೇಹದಿಂದ ಬಳಲುತ್ತಿರುವವರಲ್ಲಿ ಶರೀರಕ್ಕೆ ಬೇಕಾಗುವಷ್ಟು ಇನ್ಸುಲಿನ್ ಹಾರ್ಮೋನ್ ಅನ್ನು ಉತ್ಪಾದಿಸುವಲ್ಲಿ ಮೇದೋಜ್ಜೀರಕ ಗ್ರಂಥಿಯು ವಿಫಲಗೊಂಡಿರುತ್ತದೆ ಅಥವಾ ಅದು ಉತ್ಪಾದಿಸುವ ಇನ್ಸುಲಿನ್ ಅನ್ನು ಬಳಸಿಕೊಳ್ಳುವಲ್ಲಿ ಶರೀರವು ವಿಫಲವಾಗಿರುತ್ತದೆ. ಇದರ ಪರಿಣಾಮವಾಗಿ ಶರೀರದಲ್ಲಿ ಗ್ಲುಕೋಸ್ ಹೆಚ್ಚಾಗುತ್ತದೆ ಮತ್ತು ಇದು ರಕ್ತದಲ್ಲಿ ಮತ್ತು ಮೂತ್ರದಲ್ಲಿ ಗ್ಲುಕೋಸ್‌ನ ಅಧಿಕ ಮಟ್ಟಕ್ಕೆ ಕಾರಣವಾಗುತ್ತದೆ.

 ಮೂತ್ರದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಿದಾಗ ಶರೀರವು ಗ್ಲುಕೋಸ್‌ನ ಸಾಂದ್ರತೆಯನ್ನು ಕಾಯ್ದುಕೊಳ್ಳಲು ಹೆಚ್ಚಿನ ನೀರನ್ನು ಬೇಡುತ್ತದೆ. ಶರೀರವು ಹೆಚ್ಚು ನೀರನ್ನು ಹೀರಿಕೊಂಡಷ್ಟೂ ವ್ಯಕ್ತಿಗೆ ಪದೇ ಪದೇ ಮೂತ್ರವಿಸರ್ಜನೆಗೆ ತೆರಳುವಂತಾಗುತ್ತದೆ. ಪದೇ ಪದೇ ಮೂತ್ರವಿಸರ್ಜನೆಯಿಂದಾಗಿ ಶರೀರದಲ್ಲಿ ನೀರು ನಷ್ಟವಾಗುತ್ತದೆ ಮತ್ತು ಅದನ್ನು ಮರುಪೂರಣ ಮಾಡಿಕೊಳ್ಳಲು ಅತಿಯಾದ ಬಾಯಾರಿಕೆಯುಂಟಾಗುತ್ತದೆ. ಮಧುಮೇಹವು ಅತಿಯಾದ ಬಾಯಾರಿಕೆ ಮತ್ತು ಪದೇ ಪದೇ ಮೂತ್ರವಿಸರ್ಜನೆಗೆ ಮಾತ್ರವಲ್ಲ,ಅತಿಯಾದ ಆಯಾಸ,ಅತಿಯಾದ ಹಸಿವು, ಮಸುಕಾದ ದೃಷ್ಟಿ ಮತ್ತು ಗಾಯಗಳ ನಿಧಾನ ಮಾಯುವಿಕೆಗೂ ಕಾರಣವಾಗುತ್ತದೆ.

* ಡಯಾಬಿಟಿಸ್ ಇನ್ಸಿಪಿಡಸ್ ಅಥವಾ ಅತಿಮೂತ್ರ

ಹಲವೊಮ್ಮೆ ತನ್ನ ಹೆಸರಿನಿಂದಾಗಿ ಡಯಾಬಿಟಿಸ್ ಇನ್ಸಿಪಿಡಿಸ್ (ಅತಿಮೂತ್ರ) ಮಧುಮೇಹ ರೋಗವೆಂದು ತಪ್ಪಾಗಿ ಗ್ರಹಿಸಲ್ಪಡುತ್ತದೆ. ಆದರೆ ಇವೆರಡೂ ಸ್ಥಿತಿಗಳು ವಿಭಿನ್ನವಾಗಿವೆ. ಡಯಾಬಿಟಿಸ್ ಇನ್ಸಿಪಿಡಸ್ ಅಪರೂಪದ ಸ್ಥಿತಿಯಾಗಿದ್ದು,ಅತಿಯಾದ ಬಾಯಾರಿಕೆ ಮತ್ತು ಪದೇ ಪದೇ ಮೂತ್ರವಿಸರ್ಜನೆ (ತಿಳಿಯಾದ ಮತ್ತು ವಾಸನೆರಹಿತ) ಇವು ಇದರ ಲಕ್ಷಣಗಳಾಗಿವೆ. ಪಾಲಿಡಿಪ್ಸಿಯಾ ಡಯಾಬಿಟಿಸ್ ಇನ್ಸಿಪಿಡಸ್ ಮತ್ತು ನಿರ್ಜಲೀಕರಣದ ಪ್ರಮುಖ ಲಕ್ಷಣಗಳಲ್ಲೊಂದಾಗಿದೆ.

ಡಯಾಬಿಟಿಸ್ ಇನ್ಸಿಪಿಡಸ್ ಮೂತ್ರಪಿಂಡಗಳಿಂದ ದ್ರವ ನಿಯಂತ್ರಣಕ್ಕೆ ವ್ಯತ್ಯಯವುಂಟಾಗುವ ಸ್ಥಿತಿಯಾಗಿದೆ. ನಮ್ಮ ಮಿದುಳಿನ ಭಾಗವಾಗಿರುವ ಹೈಪೊಥಲಮಸ್ ಅಥವಾ ಮಸ್ತಿಷ್ಕ ನಿಮ್ನಾಂಗವು ಆ್ಯಂಟಿಡೈಯುರೆಟಿಕ್ ಹಾರ್ಮೋನ್ (ಎಡಿಎಚ್) ಅನ್ನು ಉತ್ಪಾದಿಸುತ್ತದೆ ಮತ್ತು ಈ ಹಾರ್ಮೋನ್ ಶರೀರದಲ್ಲಿ ದ್ರವ ಸಮತೋಲನವನ್ನು ನಿಯಂತ್ರಿಸಲು ನೆರವಾಗುತ್ತದೆ. ಆದರೆ ಡಯಾಬಿಟಿಸ್ ಇನ್ಸಿಪಿಡಸ್‌ನಿಂದ ಬಳಲುತ್ತಿರುವವರಲ್ಲಿ ಶರೀರವು ಅಗತ್ಯವಿದ್ದಷ್ಟು ಹಾರ್ಮೋನ್ ಉತ್ಪಾದಿಸುವಲ್ಲಿ ವಿಫಲವಾಗುವುದರಿಂದ ದ್ರವ ಸಮತೋಲನ ನಿಯಂತ್ರಣ ಪ್ರಕ್ರಿಯೆಗೆ ವ್ಯತ್ಯಯವುಂಟಾ ಗುತ್ತದೆ. ಇದರಿಂದಾಗಿ ಮೂತ್ರಪಿಂಡಗಳು ಹೆಚ್ಚುವರಿ ನೀರನ್ನು ಸೆಳೆದುಕೊಳ್ಳುತ್ತವೆ ಮತ್ತು ಈ ನೀರು ಮೂತ್ರದ ಮೂಲಕ ಹೊರಕ್ಕೆ ತಳ್ಳಲ್ಪಡುತ್ತದೆ. ಹೀಗಾದಾಗ ವ್ಯಕ್ತಿಗೆ ಅತಿಯಾಗಿ ಬಾಯಾರಿಕೆಯಾಗುತ್ತದೆ.

 * ಬಾಯಿ ಒಣಗುವಿಕೆ: ಪಾಲಿಡಿಪ್ಸಿಯಾ ಬಾಯಿ ಒಣಗುವಿಕೆಯ ಸಾಮಾನ್ಯ ಲಕ್ಷಣಗಳಲ್ಲೊಂದಾಗಿದೆ. ಜೊಲ್ಲುಗ್ರಂಥಿಗಳು ಸರಿಯಾಗಿ ಕಾರ್ಯ ನಿರ್ವಹಿಸುವಲ್ಲಿ ವಿಫಲಗೊಂಡಾಗ ನಮ್ಮ ಬಾಯಿ ಒಣಗಬಹುದು. ತಂಬಾಕು ಸೇವನೆ,ಹೆದರಿಕೆ,ಆತಂಕ ಮತ್ತು ಬಾಯಿಯ ಮೂಲಕ ಉಸಿರಾಟ (ವಿಶೇಷವಾಗಿ ನಿದ್ರಿಸಿದ್ದಾಗ) ಇವು ಬಾಯಿ ಒಣಗಲು ಕಾರಣಗಳಾಗಿವೆ. ಕೆಲವು ಔಷಧಿಗಳ ಸೇವನೆ,ತಲೆ ಅಥವಾ ಕುತ್ತಿಗೆ ಪ್ರದೇಶದಲ್ಲಿಯ ನರಗಳಿಗೆ ಹಾನಿ ಮತ್ತು ಕ್ಯಾನ್ಸರ್ ಚಿಕಿತ್ಸೆ ಇವೂ ಬಾಯಿ ಒಣಗುವಂತೆ ಮಾಡುವ ಇತರ ಕಾರಣಗಳಲ್ಲಿ ಸೇರಿವೆ.

ಪಾಲಿಡಿಪ್ಸಿಯಾದ ಜೊತೆಗೆ ಕೆಟ್ಟ ಉಸಿರು,ರುಚಿಯಲ್ಲಿ ಬದಲಾವಣೆಗಳು,ವಸಡಿನ ತೊಂದರೆ,ದಪ್ಪ ಜೊಲ್ಲು ಮತ್ತು ಅಗಿಯುವುದರಲ್ಲಿ ತೊಂದರೆ ಇವೂ ಬಾಯಿ ಒಣಗುವಿಕೆಯನ್ನು ಸೂಚಿಸುವ ಸಾಮಾನ್ಯ ಲಕ್ಷಣಗಳಾಗಿವೆ. ಈ ಸ್ಥಿತಿಗೆ ಮೂಲ ಕಾರಣಕ್ಕೆ ಚಿಕಿತ್ಸೆ ಅಗತ್ಯವಾಗಿರುವುದರಿಂದ ಆಗಾಗ್ಗೆ ನೀರು ಕುಡಿಯುತ್ತಿರುವುದರಿಂದಷ್ಟೇ ಸಮಸ್ಯೆ ಪರಿಹಾರವಾಗದಿರಬಹುದು. ಹೀಗಾಗಿ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.

* ಅನಿಮಿಯಾ: ತೀವ್ರ ಅನಿಮಿಯಾ ಅಥವಾ ರಕ್ತಹೀನತೆಯು ಅತಿಯಾದ ಬಾಯಾರಿಕೆಗೆ ಕಾರಣವಾಗಬಹುದು. ಅನಿಮಿಯಾ ದೋಷಪೂರ್ಣ ಕೆಂಪು ರಕ್ತಕಣಗಳ ಉತ್ಪಾದನೆಯಿಂದಾಗಿ ಆರೋಗ್ಯಕರ ಕೆಂಪು ರಕ್ತಕಣಗಳ ಮಟ್ಟ ಕುಸಿಯುವ ಸ್ಥಿತಿಯಾಗಿದೆ. ಇದು ಶರೀರದ ವಿವಿಧ ಅಂಗಾಂಗಗಳಿಗೆ ಆಮ್ಲಜನಕದ ಪೂರೈಕೆಯಲ್ಲಿ ಕೊರತೆಗೆ ಕಾರಣವಾಗುತ್ತದೆ. ಇದು ಶರೀರದಲ್ಲಿಯ ದ್ರವಗಳ ನಷ್ಟಕ್ಕೂ ಕಾರಣವಾಗುತ್ತದೆ ಮತ್ತು ಅನಿಮಿಯಾದ ಗಂಭೀರ ಪ್ರಕರಣಗಳಲ್ಲಿ ಅತಿಯಾದ ಬಾಯಾರಿಕೆ ಉಂಟಾಗುವುದಕ್ಕೆ ಇದು ಕಾರಣವಾಗಿದೆ.

ಶರೀರದಲ್ಲಿ ನಷ್ಟವಾಗಿರುವ ನೀರಿನ ಮರುಪೂರಣ ಮಾಡುವುದಷ್ಟೇ ಪಾಲಿಡಿಪ್ಸಿಯಾಕ್ಕೆ ಯಾವಾಗಲೂ ಚಿಕಿತ್ಸೆಯಾಗದಿರಬಹುದು. ಅದು ಗಂಭೀರ ಅನಾರೋಗ್ಯದ ಲಕ್ಷಣವೂ ಆಗಿರಬಹುದು ಮತ್ತು ಈ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗುತ್ತದೆ. ಹೀಗಾಗಿ ಅತಿಯಾದ ಬಾಯಾರಿಕೆಯ ಸಮಸ್ಯೆ ಕಾಡುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News