ವಿನೇಶ್ ಫೋಗಾಟ್‌ರನ್ನು ಖೇಲ್ ರತ್ನಕ್ಕೆ ಶಿಫಾರಸು ಮಾಡಲಿರುವ ಡಬ್ಲ್ಯುಎಫ್‌ಐ

Update: 2020-06-01 06:26 GMT

 ಹೊಸದಿಲ್ಲಿ, ಮೇ 31: ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ್ ಅವರನ್ನು ಭಾರತದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲುಎಫ್‌ಐ) ಶಿಫಾರಸು ಮಾಡಲು ತಯಾರಿ ನಡೆಸಿದೆ. ಸತತ ಎರಡನೇ ಬಾರಿಗೆ 25 ವರ್ಷ ವಯಸ್ಸಿನ ಫೋಗಾಟ್‌ರನ್ನು ಪ್ರಶಸ್ತಿಗೆ ಶಿಫಾರಸು ಮಾಡಲಾಗುತ್ತಿದೆ.

ಡಬ್ಲುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್ ರಣ್ ಸಿಂಗ್ ಶಿಫಾರಸುಗಳನ್ನು ಅಂತಿಮಗೊಳಿಸಿ ಕ್ರೀಡಾ ಸಚಿವಾಲಯಕ್ಕೆ ಸೋಮವಾರ ಕಳುಹಿಸಲಿದ್ದಾರೆ. ‘‘ಖೇಲ್ ರತ್ನಕ್ಕೆ ಸಂಬಂಧಿಸಿದಂತೆ ವಿನೇಶ್ ನಮ್ಮ ಏಕೈಕ ಶಿಫಾರಸು ’’ ಎಂದು ಡಬ್ಲ್ಯುಎಫ್‌ಐ ಕಾರ್ಯದರ್ಶಿ ವಿನೋದ್ ತೋಮರ್ ರವಿವಾರ ತಿಳಿಸಿದರು.

 ವಿನೇಶ್ ಅವರನ್ನು ಕಳೆದ ವರ್ಷ ಪ್ರತಿಷ್ಠಿತ ಕ್ರೀಡಾ ಗೌರವಕ್ಕಾಗಿ ಭಜರಂಗ್ ಪುನಿಯಾ ಅವರೊಂದಿಗೆ ಶಿಫಾರಸು ಮಾಡಲಾಯಿತು. ಆದರೆ ಅವರಿಗೆ ಪ್ರಶಸ್ತಿ ದೊರೆಯಲಿಲ್ಲ.ವಿನೇಶ್ ಈ ಹಿಂದೆ 2016 ರಲ್ಲಿ ಅರ್ಜುನ ಪ್ರಶಸ್ತಿ ಗೆದ್ದಿದ್ದರು.

ವಿನೇಶ್ ಪ್ರಸ್ತುತ 53 ಕೆ.ಜಿ. ವಿಭಾಗದ ವಿಶ್ವ ರ್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು 2019ರ ಕುಸ್ತಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆಲ್ಲುವ ಮೂಲಕ ತಮ್ಮ ಮೊದಲ ಪ್ರಯತ್ನದಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ನಂತರ ಅವರು 2020ರಲ್ಲಿ ರೋಮ್ ರ್ಯಾಂಕಿಂಗ್ ಸರಣಿಯಲ್ಲಿ ಚಿನ್ನದೊಂದಿಗೆ ಪ್ರಾರಂಭಿಸಿದರು ಮತ್ತು ನಂತರ ಹೊಸದಿಲ್ಲಿಯಲ್ಲಿ ನಡೆದ 2020ರ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದರು. ಕಳೆದ ವರ್ಷ ಕ್ಸಿಯಾನ್‌ನಲ್ಲಿ ಅದೇ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದರು. ಇದು ಸತತ ಎರಡನೇ ಕಂಚು.

  ವಿನೇಶ್ ಅವರು 2016ರ ಒಲಿಂಪಿಕ್ಸ್ ಪದಕದ ಮೇಲೆ ಕಣ್ಣಿಟ್ಟಿದ್ದರು. ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ವೃತ್ತಿಜೀವನಕ್ಕೆ ಅಪಾಯಕಾರಿಯಾದ ಗಾಯವು ಅವರ ಪದಕ ಗೆಲ್ಲುವ ಕನಸು ಕಮರಿಹೋಗುವಂತಾಯಿತು. ವಿನೇಶ್ 2018ರ ಏಶ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದರು. ಮುಂದಿನ ವರ್ಷ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಹೊತ್ತಿದ್ದಾರೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮತ್ತು ಅರ್ಜುನ ಪ್ರಶಸ್ತಿ ಸೇರಿದಂತೆ 2020 ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಕ್ರೀಡಾ ಸಚಿವಾಲಯವು ಮೇ5ರಂದು ನಾಮನಿರ್ದೇಶನಗಳನ್ನು ಆಹ್ವಾನಿಸಿದೆ. ಕೊರೋನ ವೈರಸ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇ-ಮೇಲ್ ಮೂಲಕ ನಾಮಪತ್ರಗಳನ್ನು ಕಳುಹಿಸುವಂತೆ ಸಚಿವಾಲಯ ಕೇಳಿದೆ.

ಸಾಮಾನ್ಯವಾಗಿ ಎಪ್ರಿಲ್‌ನಲ್ಲಿ ಪ್ರಾರಂಭವಾಗುವ ಈ ಪ್ರಕ್ರಿಯೆಯು ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಗಿದೆ. ಕೋವಿಡ್ -19 ಕಾರಣದಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಆಗಿರುವುದರಿಂದ ಅರ್ಜಿದಾರರು ಸಹಿ ಮಾಡಿದ ನಾಮನಿರ್ದೇಶನಗಳ ಸ್ಕಾನ್‌ಮಾಡಿದ ಪ್ರತಿಗಳು ಕೊನೆಯ ದಿನಾಂಕದ ಮೊದಲು ಮೇಲೆ ತಿಳಿಸಿದ ಇ-ಮೇಲ್ ಐಡಿಗಳಲ್ಲಿ ಕಳುಹಿಸಬಹುದಾಗಿದೆ. ರಿಯೋ ಒಲಿಂಪಿಕ್ಸ್ ಕಂಚು ಜಯಿಸಿದ್ದ ಸಾಕ್ಷಿ ಮಲಿಕ್ ಅರ್ಜುನ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದಾರೆ. 2016ರಲ್ಲಿ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಮತ್ತು ಶೂಟರ್ ಜಿತು ರಾಯ್ ಖೇಲ್ ರತ್ನವನ್ನು ಹಂಚಿಕೊಂಡಿದ್ದರು.

 ಸಾಕ್ಷಿ ಮಲಿಕ್ ಇತ್ತೀಚೆಗೆ ಯುವ ಕುಸ್ತಿಪಟು ಸೋನಮ್ ಮಲಿಕ್ ವಿರುದ್ಧ ಎರಡು ಬಾರಿ ಸೋಲು ಅನುಭವಿಸಿದ್ದಾರೆ .

 2019ರ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ದೀಪಕ್ ಪೂನಿಯಾ (86 ಕೆ.ಜಿ) ಮತ್ತು ಪ್ರತಿಭಾವಂತ ರಾಹುಲ್ ಅವೇರ್ (61 ಕೆ.ಜಿ) ಅವರನ್ನು ಅರ್ಜುನ ಪ್ರಶಸ್ತಿಗಾಗಿ ಅರ್ಜಿಗಳನ್ನು ಕಳುಹಿಸಿದ ನಂತರ ಡಬ್ಲ್ಯುಎಫ್‌ಐ ಸಾಕ್ಷಿ ಹೆಸರನ್ನು ಕಳುಹಿಸುತ್ತದೆಯೇ ಎಂಬುದು ಕುತೂಹಲ ಕೆರಳಿಸಿದೆ.

 ರಿಯೋ ಕ್ರೀಡಾಕೂಟಕ್ಕೆ ಮುಂಚಿತವಾಗಿ ಸಾಕ್ಷಿ ಅವರ ಯಾವುದೇ ಸಾಧನೆ ಇರಲಿಲ್ಲ, ಆದ ಕಾರಣ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಕಳುಹಿಸಲಾಗಿಲ್ಲ. ಸಾಕ್ಷಿ ರಿಯೋದಲ್ಲಿ ಕಂಚು ಗೆದ್ದಿದ್ದರಿಂದ ಖೇಲ್ ರತ್ನವನ್ನು ಪಡೆದರು. ಈಗ ಅವರು ಅರ್ಜುನ ಪ್ರಶಸ್ತಿಯನ್ನೂ ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಬ್ಲ್ಯುಎಫ್‌ಐ ಕಾರ್ಯಕ್ಷಮತೆಗೆ ತಕ್ಕಂತೆ ಹೋದರೆ, ಅದು ಸಾಕ್ಷಿ ಹೆಸರನ್ನು ಕಳುಹಿಸುವುದಿಲ್ಲ ಏಕೆಂದರೆ ದೀಪಕ್ ಪೂನಿಯಾ ಮತ್ತು ರಾಹುಲ್ ಅವೇರ್ ಅವರಂತಹ ಉತ್ತಮ ಸಾಧಕರು ಪ್ರಶಸ್ತಿ ಪಡೆಯಲು ಉತ್ತಮ ಅವಕಾಶವನ್ನು ಹೊಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News