ಸಕ್ರಿಯ ಕೊರೋನ ಪ್ರಕರಣ: ಭಾರತಕ್ಕೆ 5ನೇ ಸ್ಥಾನ

Update: 2020-06-02 16:26 GMT

ಹೊಸದಿಲ್ಲಿ, ಭಾರತದಲ್ಲಿ ಕೊರೋನ ವೈರಸ್ ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದ್ದು, ಸೋಮವಾರ ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 1,90.535ಕ್ಕೇರಿದೆ. ಇದರೊಂದಿಗೆ ಭಾರತವು ಅತ್ಯಧಿಕ ಸಂಖ್ಯೆಯ ಕೋವಿಡ್-19 ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 7ನೇ ಸ್ಥಾನವನ್ನು ಪಡೆದುಕೊಂಡಿದ್ದು, ಜರ್ಮನಿ ಹಾಗೂ ಫ್ರಾನ್ಸ್ ದೇಶಗಳನ್ನು ಕೂಡಾ ಹಿಂದಿಕ್ಕಿದೆ.

ಆದರೆ ಸಕ್ರಿಯ ಕೋವಿಡ್-19 ಪ್ರಕರಣಗಳ ಪಟ್ಟಿಯಲ್ಲಿ ಅದು 5 ನೇ ಸ್ಥಾನದಲ್ಲಿದ್ದು, ಅಮೆರಿಕ, ಬ್ರೆಝಿಲ್, ಬ್ರಿಟನ್ ಹಾಗೂ ರಶ್ಯ ದೇಶಗಳಿಗಿಂತ ಮಾತ್ರ ಹಿಂದಿದೆ.

ಭಾರತದಲ್ಲಿ ಕೊರೋನ ವೈರಸ್ ಸೋಂಕಿನ ಒಟ್ಟು 1,90,530 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 93, 322 ಸಕ್ರಿಯ ಪ್ರಕರಣಗಳಾಗಿವೆ. ಈ ಪೈಕಿ 91,818 ಮಂದಿ ಚೇತರಿಸಿಕೊಂಡಿದ್ದರೆ, ಓರ್ವ ವಿದೇಶಕ್ಕೆ ತೆರಳಿರುವುದಾಗಿ ಸಚಿವಾಲಯ ತಿಳಿಸಿದೆ. ಒಟ್ಟು ಸೋಂಕಿತರ ಪೈಕಿ ಶೇ.48.19 ಮಂದಿ ಚೇತರಿಸಿಕೊಂಡಿದ್ದಾರೆಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದಲ್ಲಿ 5394 ಕೋರನಾ ಸಾವಿನ ಪ್ರಕರಣಗಳ ಪೈಕಿ 2286 ಸಾವುಗಳು ಮಹಾರಾಷ್ಟ್ರದಲ್ಲಿ ಸಂಭವಿಸಿವೆ. 2286 ಮಂದಿ ಮೃತಪಟ್ಟಿರುವ ಗುಜರಾತ್ ಎರಡನೆ ಸ್ಥಾನದಲ್ಲಿದೆ. ದಿಲ್ಲಿಯಲ್ಲಿ 473 ಹಾಗೂ ಮಧ್ಯಪ್ರದೇಶದಲ್ಲಿ 350 ಸಾವಿನ ಪ್ರಕರಣಗಳು ವರದಿಯಾಗಿವೆ.

ಜಗತ್ತಿನಾದ್ಯಂತ ಈವರೆಗೆ 6171182 ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಒಟ್ಟು 372116 ಮಂದಿ ಸಾವನ್ನಪ್ಪಿರುವುದಾಗಿ ಜಾನ್ಸ್ ಹಾಪ್‌ಕಿನ್ಸ್ ವಿವಿ ತಿಳಿಸಿದೆ.

ಅಮೆರಿಕದಲ್ಲಿ 17,90, 191 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದರೆ, 514849 ಪ್ರಕರಣಗಳಿರುವ ಬ್ರೆಝಿಲ್ ದ್ವಿತೀಯ ಸ್ಥಾನದಲ್ಲಿದೆ. ರಶ್ಯ (4,05,843) ಹಾಗೂ ಮತ್ತು ಬ್ರಿಟನ್ (2,76,156) ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News