ಜೈಲುಗಳಿರುವುದು ಕೈದಿಗಳನ್ನು ಶಿಕ್ಷಿಸಲು; ವಿಚಾರಣಾಧೀನರನ್ನು ಬಂಧಿಸಿ ಇಡಲು ಅಲ್ಲ: ದಿಲ್ಲಿ ಹೈಕೋರ್ಟ್

Update: 2020-06-02 04:16 GMT

ಹೊಸದಿಲ್ಲಿ, ಜೂ.2: ಕಾರಾಗೃಹಗಳು ಇರುವುದು ಅಪರಾಧಿಗಳನ್ನು ಶಿಕ್ಷಿಸುವ ಸಲುವಾಗಿಯೇ ವಿನಃ ವಿಚಾರಣಾಧೀನ ಕೈದಿಗಳನ್ನು ಬಂಧಿಸಿ ಇಡುವ ಸಲುವಾಗಿ ಅಲ್ಲ ಎಂದು ದಿಲ್ಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ದಿಲ್ಲಿ ಗಲಭೆ ವೇಳೆ ಅಂಗಡಿಯೊಂದಕ್ಕೆ ಬೆಂಕಿ ಇಟ್ಟ ಆರೋಪದಲ್ಲಿ ಬಂಧಿತನಾದ ವ್ಯಕ್ತಿಯ ಜಾಮೀನು ಅರ್ಜಿಯನ್ನು ಇತ್ಯರ್ಥಪಡಿಸುವ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿ, ಆರೋಪಿಗೆ ಜಾಮೀನು ನೀಡಿದೆ.

ಅನೂಪ್ ಜೈರಾಮ್ ಬಂಬ್ಹಾನಿ ಅವರಿದ್ದ ಏಕಸದಸ್ಯ ಪೀಠ, ನ್ಯಾಯಾಲಯದ ಕರ್ತವ್ಯ ಕಾನೂನಿಗೆ ಅನುಗುಣವಾಗಿ ನ್ಯಾಯ ಒದಗಿಸುವುದು; ಸಮಾಜಕ್ಕೆ ಸಂದೇಶ ನೀಡುವುದಲ್ಲ ಎಂದು ಸ್ಪಷ್ಟಪಡಿಸಿದೆ.

ವಿಚಾರಣಾಧೀನ ಕೈದಿಗಳನ್ನು ಜೈಲಿನಲ್ಲಿ ವಿನಾಕಾರಣ ಇಡಬೇಕು ಎನ್ನುವುದು ಸರ್ಕಾರದ ಆಗ್ರಹ. ಈ ಕಾರಣದಿಂದ ಜೈಲುಗಳಲ್ಲಿ ದಟ್ಟಣೆ ಹೆಚ್ಚುತ್ತಿದೆ. ಇದರಿಂದಾಗಿ ವಿಚಾರಣೆಗೆ ಮುನ್ನವೇ ನಮಗೆ ಶಿಕ್ಷೆ ನೀಡಲಾಗುತ್ತಿದೆ ಎಂಬ ಭಾವನೆ ಇವರಲ್ಲಿ ಮೂಡುತ್ತದೆ. ಈ ಮೂಲಕ ಇಡೀ ವ್ಯವಸ್ಥೆ ನ್ಯಾಯ ಸಮ್ಮತವಲ್ಲದ ರೀತಿಯಲ್ಲಿ ಇವರನ್ನು ನಡೆಸಿಕೊಳ್ಳುತ್ತದೆ ಎಂದು ನ್ಯಾಯಮೂರ್ತಿ ಬಂಬ್ಹಾನಿ ಅಭಿಪ್ರಾಯಪಟ್ಟಿದ್ದಾರೆ.

ಅಭಿಯೋಜಕರು ಅಂತಿಮವಾಗಿ ಆರೋಪಿಯ ಅಪರಾಧ ಸಾಬೀತುಪಡಿಸಲು ಸಾಧ್ಯವಾಗದಿದ್ದಲ್ಲಿ, ಜೈಲಿನಲ್ಲಿ ಕಳೆದ ವರ್ಷಗಳನ್ನು ಅವರಿಗೆ ಮರಳಿ ಕೊಡಲು ಸಾಧ್ಯವಿಲ್ಲ. ಅಪರಾಧ ಸಾಬೀತಾದಲ್ಲಿ ಆರೋಪಿ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ವಿಶ್ಲೇಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News