ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರ ‘ಹದ್ದುಗಳು’ ಹೇಳಿಕೆಗೆ ಅಖಿಲ ಭಾರತ ಪತ್ರಿಕಾ ಛಾಯಾಗ್ರಾಹಕ ಸಂಘದ ಆಕ್ಷೇಪ

Update: 2020-06-02 12:05 GMT

ಹೊಸದಿಲ್ಲಿ: ವಲಸಿಗ ಕಾರ್ಮಿಕರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಪತ್ರಿಕಾ ಛಾಯಾಗ್ರಾಹಕರನ್ನು ‘ಹದ್ದುಗಳು’ ಹಾಗೂ ‘ವಿನಾಶದ ಪ್ರವಾದಿಗಳು’ ಎಂದು ಜರಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಮಾತುಗಳಿಗೆ ಅಖಿಲ ಭಾರತ ಕಾರ್ಯನಿರತ ಪತ್ರಿಕಾ ಛಾಯಾಗ್ರಾಹಕರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ತಮ್ಮ ಮನೆಗಳತ್ತ ಸಾಗಿರುವ ವಲಸಿಗ ಕಾರ್ಮಿಕರ ಪರಿಸ್ಥಿತಿಯ ಚಿತ್ರಗಳನ್ನು ಪ್ರಕಟಿಸಿ ಪತ್ರಿಕಾ ಛಾಯಾಗ್ರಾಹಕರು  ಸಮಾಜದಲ್ಲಿ ಋಣಾತ್ಮಕತೆಯನ್ನು ಹರಡುತ್ತಿದಾರೆ ಎಂದು ಹೇಳಿ ಅವರನ್ನು ವಸ್ತುಶಃ ಹದ್ದುಗಳು ಹಾಗೂ ವಿನಾಶದ ಪ್ರವಾದಿಗಳು ಎಂದು ತುಷಾರ್ ಮೆಹ್ತಾ ಜರಿದಿದ್ದರು.

ದೇಶ ವಿಭಜನೆಯ ನಂತರ ಎದುರಾಗಿರುವ ಅತ್ಯಂತ ಭೀಕರ ಬಿಕ್ಕಟ್ಟಿನಿಂದಾಗಿ ಬವಣೆ ಎದುರಿಸುತ್ತಿರುವವರ ಚಿತ್ರಣವನ್ನು  ದೇಶದ ಮುಂದಿಡಲು ಛಾಯಾಗ್ರಾಹಕರು ಸಾಕಷ್ಟು ರಿಸ್ಕ್ ತೆಗೆದುಕೊಂಡಿದ್ದಾರೆ ಎಂದು ಸಂಘದ ಅಧ್ಯಕ್ಷ ಎಸ್ ಎನ್ ಸಿಹ ಹಾಗೂ ಪ್ರಧಾನ ಕಾರ್ಯದರ್ಶಿ ಸೋನ್‍ದೀಪ್ ಶಂಕರ್ ಹೇಳಿದ್ದಾರೆ.

ಛಾಯಾಗ್ರಾಹಕರು ಕೇವಲ ತಮ್ಮ ಕರ್ತವ್ಯವನ್ನಷ್ಟೇ ನಿಭಾಯಿಸಿದ್ದಾರೆ ಎಂದು ಹೇಳಿದ ಅವರು, “ಸಾಲಿಸಿಟರ್ ಜನರಲ್ ಅವರು ಸರಕಾರವನ್ನು ಸಮರ್ಥಿಸುವ ಭರದಲ್ಲಿ ಸುಡಾನ್ ಬಾಲಕಿಯ ಚಿತ್ರ ತೆಗೆದ ಕೆವಿನ್ ಕಾರ್ಟರ್ ಬಗ್ಗೆ ತಪ್ಪಾಗಿ ಅರ್ಥೈಸಿದ್ದಾರೆ. ಚಿತ್ರ ಸೆರೆ ಹಿಡಿದ ನಂತರ ಅವರು ಹದ್ದನ್ನು ಓಡಿಸಿದ್ದರು'' ಎಂದು ಸಂಘ ಹೇಳಿದೆ.

ಬಾಲಕಿಗೆ ಸಹಾಯ ಮಾಡಲು ಸಾಧ್ಯವಾಗಿಲ್ಲ ಎಂಬ ತಪ್ಪಿತಸ್ಥ ಭಾವನೆಯಿಂದ ಕೆಲ ತಿಂಗಳುಗಳ ನಂತರ ಕಾರ್ಟರ್ ಅವರು ಆತ್ಮಹತ್ಯೆ  ಮಾಡಿಕೊಂಡರು  ಎಂಬ ಸುಳ್ಳು ಸುದ್ದಿಯನ್ನು ಬಳಸಿ ಸಾಲಿಸಿಟರ್ ಜನರಲ್ ನ್ಯಾಯಾಲಯವನ್ನು ತಪ್ಪು ದಾರಿಗೆಳೆದಿದ್ದಾರೆ ಎಂದೂ ಸಂಘ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News