ತಿರುಮಲ ದೇವಳಕ್ಕೆ ಭಕ್ತರಿಗೆ ಪ್ರವೇಶಾವಕಾಶ: ಜೂನ್ 5ರಿಂದ ಪ್ರಯೋಗಾರ್ಥ ದರ್ಶನಕ್ಕೆ ನಿರ್ಧಾರ

Update: 2020-06-02 18:19 GMT

ಅಮರಾವತಿ, ಜೂ.2: ತಿರುಮಲ ತಿರುಪತಿ ದೇವಸ್ಥಾನಕ್ಕೆ ಜೂನ್ 8ರ ಬಳಿಕ ಭಕ್ತರಿಗೆ ಪ್ರವೇಶಾವಕಾಶ ಒದಗಿಸಲು ಸರಕಾರ ನಿರ್ಧರಿಸಿರುವಂತೆಯೇ, ಇದಕ್ಕೆ ಪೂರ್ವಭಾವಿಯಾಗಿ ಸ್ಥಳೀಯರೊಂದಿಗೆ ಮತ್ತು ದೇವಸ್ಥಾನದ ಸಿಬಂದಿಗಳನ್ನು ಸೇರಿಸಿಕೊಂಡು ಪ್ರಯೋಗಾರ್ಥ ದರ್ಶನ ಪ್ರಕ್ರಿಯೆ ನಡೆಸುವುದಾಗಿ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ತಿಳಿಸಿದೆ.

ಇತರ ಭಕ್ತರಿಗೆ ಪ್ರವೇಶಾವಕಾಶ ನೀಡುವ ಮೊದಲು ದೇವಸ್ಥಾನದ ಸಿಬ್ಬಂದಿಗಳನ್ನು ಸೇರಿಸಿಕೊಂಡು ಪರೀಕ್ಷಾ ಪ್ರಯೋಗ ನಡೆಸಿ, ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲಾಗುವುದು. ಜೂನ್ 5ರಿಂದ ಪರೀಕ್ಷಾ ದರ್ಶನ ಆರಂಭಿಸುವ ನಿರೀಕ್ಷೆಯಿದೆ. ಬಳಿಕ ಮೊದಲು ಚಿತ್ತೂರು ಜಿಲ್ಲೆಯ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಬಳಿಕ ಉಳಿದ ಭಕ್ತರಿಗೆ ಅವಕಾಶವಿದೆ. ಈಗ ಭಕ್ತರು ದರ್ಶನಕ್ಕೆ ತೆರಳುವ ಸರತಿ ಸಾಲಿನಲ್ಲಿ ಬದಲಾವಣೆ ಮಾಡಲಾಗಿದೆ. ಅಲ್ಲದೆ ಸುರಕ್ಷಿತ ಅಂತರ ಕಾಯ್ದುಕೊಂಡು, ದಿನವೊಂದಕ್ಕೆ ದೇವರ ದರ್ಶನ ಪಡೆಯುವ ಭಕ್ತರ ಸಂಖ್ಯೆಯಲ್ಲೂ ಕಡಿತ ಮಾಡಲು ನಿರ್ಧರಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)ದ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಲ್ ಹೇಳಿದ್ದಾರೆ.

  ಭಕ್ತರಿಗೆ ಪ್ರವೇಶಾವಕಾಶ ನೀಡುವ ಮೊದಲು ಪ್ರಯೋಗಾರ್ಥ ದರ್ಶನ ನಡೆಸಲು ಅನುಮತಿ ಕೋರಿ ಟಿಟಿಡಿ ಮೇ 12ರಂದು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ದರ್ಶನ ಪಡೆಯಬಯಸುವ ಭಕ್ತರು ಸದಾಕಾಲ 6 ಅಡಿ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಬಹುದು ಎಂದು ಸರಕಾರ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News