ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಸೇನಾಬಲ ಹೆಚ್ಚಿಸುತ್ತಿರುವ ಚೀನಾ: ಮೈಕ್ ಪಾಂಪಿಯೊ

Update: 2020-06-02 18:22 GMT

ವಾಷಿಂಗ್ಟನ್, ಜೂ. 2: ಚೀನಾವು ಭಾರತದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ತನ್ನ ಪಡೆಗಳ ಉಪಸ್ಥಿತಿಯನ್ನು ಹೆಚ್ಚಿಸಿದೆ . ಸರ್ವಾಧಿಕಾರಿ ಆಡಳಿತಗಳು ಇಂತಹ ಕ್ರಮಗಳನ್ನು ಕೈಗೊಳ್ಳುತ್ತವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.

ಸೋಮವಾರವೂ ಚೀನಾವು ತನ್ನ ಹೆಚ್ಚುವರಿ ಪಡೆಗಳನ್ನು ಭಾರತದ ಉತ್ತರ ಗಡಿಭಾಗದಲ್ಲಿರುವ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಿರುವುದು ಕಂಡು ಬಂದಿದೆ. ವುಹಾನ್‌ನಲ್ಲಿ ಹುಟ್ಟಿದ ಕೊರೋನ ವೈರಸ್ ಸೋಂಕಿನ ಬಗ್ಗೆ ಜಾಗತಿಕ ಪ್ರತಿಕ್ರಿಯೆಯನ್ನು ಮರೆಮಾಚುವುದನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ(ಸಿಪಿಸಿ)ವು ಮುಂದುವರಿಸಿದೆ. ಜೊತೆಗೆ, ಹಾಂಕಾಂಗ್ ಜನತೆಯ ಸ್ವಾತಂತ್ರ್ಯದ ಕೂಗನ್ನು ದಮನಿಸುವ ಪ್ರಕ್ರಿಯೆಯನ್ನು ಮುಂದುವರಿಸಿದೆ.

ಇವೆರಡು ಚೀನಾದ ಕಮುನಿಸ್ಟ್ ಪಕ್ಷದ ಆಡಳಿತದ ವರ್ತನೆಯ ಎರಡು ತುಣುಕು ಮಾತ್ರವಾಗಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ನಡೆಸುತ್ತಿರುವ ಚಟುವಟಿಕೆ, ಬೌದ್ಧಿಕ ಆಸ್ತಿಯನ್ನು ಕದಿಯಲು ನಡೆಸುತ್ತಿರುವ ನಿರಂತರ ಪ್ರಯತ್ನಗಳು ಸರ್ವಾಧಿಕಾರಿ ಆಡಳಿತ ನಡೆಸುವ ಚಟುವಟಿಕೆಯ ಸ್ವರೂಪವಾಗಿದೆ . ಇಂತಹ ಚಟುವಟಿಕೆಗಳು ಚೀನಾದ ಜನತೆಯ ಮೇಲೆ ಅಥವಾ ಹಾಂಕಾಂಗ್‌ನ ಜನತೆಯ ಮೇಲೆ ಮಾತ್ರವಲ್ಲ, ವಿಶ್ವದಾದ್ಯಂತದ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಪಾಂಪಿಯೊ ಹೇಳಿದ್ದಾರೆ.

ಇಂತಹ ಪ್ರಕ್ರಿಯೆಗಳನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಮತ್ತು ಹೊಣೆಗಾರಿಕೆಯನ್ನು ಅಮೆರಿಕ ಹೊಂದಿದೆ ಮತ್ತು ಇಂದು ಚೀನಾದಿಂದ ಹೊರಹೊಮ್ಮುವ ಬೆದರಿಕೆಗಳನ್ನು ನಿಖರವಾಗಿ ಗುರುತಿಸುವ ವಿದೇಶಿ ನೀತಿಯ ಮೂಲಕ ಅಮೆರಿಕದ ಜನರ ಸುರಕ್ಷತೆಯನ್ನು ಖಾತರಿಪಡಿಸಿದೆ ಎಂದವರು ಹೇಳಿದರು. ಭಾರತದ ಗಡಿಯಲ್ಲಿ ಅಥವಾ ಹಾಂಕಾಂಗ್‌ನಲ್ಲಿ, ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಚೀನಾ ನಡೆಸುತ್ತಿರುವ ಉಪಕ್ರಮಗಳು ಇತ್ತೀಚಿನ ವರ್ಷಗಳಲ್ಲಿ ಚೀನಾದ ವರ್ತನೆಯ ಒಂದು ಭಾಗವಾಗಿದೆ. ಕಳೆದ ಹಲವು ವರ್ಷಗಳಿಂದ ತನ್ನ ಸೇನಾ ಸಾಮರ್ಥ್ಯವನ್ನು ಗಣನೀಯ ಪ್ರಮಾಣದಲ್ಲಿ ವೃದ್ಧಿಸಿಕೊಂಡು ಬಳಿಕ ಆಕ್ರಮಣಕಾರಿ ವರ್ತನೆ ಪ್ರದರ್ಶಿಸುತ್ತಿದೆ. ಚೀನಾವು ತನ್ನ ಬೆಲ್ಟ್ ಆ್ಯಂಡ್ ರೋಡ್ ಉಪಕ್ರಮದ ಮೂಲಕ ವಿಶ್ವದ ಸುತ್ತಲೂ ಬಂದರುಗಳನ್ನು ನಿರ್ಮಿಸಿ, ಆ ಪ್ರದೇಶಕ್ಕೆ ತನ್ನ ನೌಕಾಪಡೆಯನ್ನು ಸುಲಭದಲ್ಲಿ ರವಾನಿಸುವ ಪ್ರಯತ್ನ ನಡೆಸುತ್ತಿದೆ. ಸೇನಾಪಡೆಯ ಸಾಮರ್ಥ್ಯವನ್ನು ನಿರಂತರ ವೃದ್ಧಿಸುವ ಕಾರ್ಯದಲ್ಲಿ ಚೀನಾ ತೊಡಗಿದೆ. ಕಳೆದ 20 ವರ್ಷದಲ್ಲಿ ಅಮೆರಿಕ ಈ ರೀತಿಯ ಉಪಕ್ರಮಗಳಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರಲಿಲ್ಲ ಎಂದವರು ಹೇಳಿದ್ದಾರೆ.

ಅಮೆರಿಕದ ವಿರುದ್ಧ ಪ್ರತೀಕಾರದ ಕ್ರಮವಾಗಿ ಚೀನಾವು ಅಮೆರಿಕದ ಸಂಸ್ಥೆಗಳನ್ನು ಹೊರದಬ್ಬಿ ಇತರ ರಾಷ್ಟ್ರಗಳಿಗೆ ಅವಕಾಶ ನೀಡಿದರೆ ಅದರಿಂದ ಅಮೆರಿಕದ ಆರ್ಥಿಕತೆಯ ಮೇಲೆ ಆಗುವ ಪರಿಣಾಮದ ಬಗ್ಗೆ ಕೆಲವರು ಅನಿಸಿಕೆ ವ್ಯಕ್ತಪಡಿಸಬಹುದು. ಆದರೆ ಚೀನಾದ ರೀತಿಯಲ್ಲಿ ವರ್ತಿಸುವ ಪ್ರತಿಯೊಂದು ದೇಶದ ವಿರುದ್ಧವೂ ನಾವು ಕೈಗೊಳ್ಳುವ ಕ್ರಮಗಳ ಬಗ್ಗೆಯೂ ಜನರು ಗಮನ ಹರಿಸಬೇಕು ಎಂದು ಪಾಂಪಿಯೊ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News