ಶಾಲೆಗಳ ಪುನಾರಂಭ: ಸರಕಾರದ ನಿರ್ಧಾರ ಎಷ್ಟು ಸರಿ?

Update: 2020-06-04 11:11 GMT

ಎಸೆಸೆಲ್ಸಿ ಪರೀಕ್ಷೆಯ ದಿನಾಂಕವನ್ನು ಈಗಾಗಲೇ ಘೋಷಿಸಿರುವ ಸರಕಾರ, ಬೆನ್ನಿಗೇ ಇನ್ನೊಂದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಜುಲೈ 1ರಿಂದ ರಾಜ್ಯದಲ್ಲಿ ಶಾಲೆಗಳನ್ನು ಹಂತಹಂತವಾಗಿ ಪುನಾರಂಭಕ್ಕೆ ಕರಡು ವೇಳಾಪಟ್ಟಿಯನ್ನು ಸಿದ್ಧಗೊಳಿಸಿದೆ ಎಂದು ಸರಕಾರಿ ಮೂಲಗಳು ತಿಳಿಸುತ್ತಿವೆ. ಸರಕಾರದ ಈ ನಿರ್ಧಾರದ ಕುರಿತಂತೆ ವ್ಯಾಪಕವಾಗಿ ಪರ- ವಿರೋಧಗಳು ಕೇಳಿ ಬರುತ್ತಿವೆ. ವೈದ್ಯಕೀಯ ಕ್ಷೇತ್ರವೂ ಸೇರಿದಂತೆ ವಿವಿಧ ವಲಯಗಳ ತಜ್ಞರು ಈ ಬಗ್ಗೆ ಇನ್ನೂ ಸ್ಪಷ್ಟ ನಿಲುವಿಗೆ ಬಂದಿಲ್ಲ. ಮಾಲ್‌ಗಳು, ಹೊಟೇಲ್‌ಗಳನ್ನು ತೆರೆಯುವುದಕ್ಕೆ, ಬಸ್ ಸಂಚಾರಕ್ಕೆ ಹತ್ತು ಹಲವು ನಿಬಂಧನೆಗಳ ಜೊತೆಗೆ ಸರಕಾರ ಅನುಮತಿ ನೀಡಿದೆ. ಆದರೆ ನಿಬಂಧನೆಗಳನ್ನು ಆರಂಭದಲ್ಲಿ ಗಂಭೀರವಾಗಿ ತೆಗೆದುಕೊಂಡರೂ ನಿಧಾನಕ್ಕೆ ಹೆಸರಿಗಷ್ಟೇ ಉಳಿದು, ಎಂದಿನಂತೆ ಜನರು ವ್ಯವಹರಿಸಬಹುದು. ಸಂಬಂಧಪಟ್ಟ ಮಾಲಕರೂ ವ್ಯಾಪಾರದಲ್ಲಿ ಮೈಮರೆತು ಸರಕಾರದ ಎಚ್ಚರಿಕೆಗಳನ್ನು ಕಡೆಗಣಿಸಬಹುದು. ಇಂತಹ ಸಂದರ್ಭದಲ್ಲಿ ಜನರೇ ಸ್ವಯಂ ಎಚ್ಚರಿಕೆಯಿಂದ ಸಾರ್ವಜನಿಕ ಪ್ರದೇಶದಲ್ಲಿ ವ್ಯವಹರಿಸಿ ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ. ಆದರೆ ಈ ಸ್ವಯಂ ನಿರ್ಬಂಧವನ್ನು ಶಾಲಾ ಮಕ್ಕಳಿಗೂ ಅನ್ವಯಿಸುವುದು ಅಸಾಧ್ಯ.

 ಕೊರೋನ ಕುರಿತಂತೆ ಸಾರ್ವಜನಿಕವಾಗಿ ಆತಂಕ ಮತ್ತು ಭೀತಿಯನ್ನು ಬಿತ್ತಿರುವುದೇ ಸರಕಾರ. ಕೊರೋನ ಸೋಂಕಿತರ ಸಂಖ್ಯೆ ಬೆರಳೆಣಿಕೆಯಲ್ಲಿದ್ದಾಗ ಎರಡು ತಿಂಗಳ ಕಾಲ ಸಂಪೂರ್ಣ ಲಾಕ್‌ಡೌನ್ ಘೋಷಿಸಿ ಜನ ಸಾಮಾನ್ಯರ ಬದುಕನ್ನು ನರಕವನ್ನಾಗಿಸಲಾಯಿತು. ಇಂದು ಕೊರೋನ ಸೋಂಕಿತರ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ ಮತ್ತು ಸರಕಾರ ‘ಅನಿವಾರ್ಯ’ ಕಾರಣದಿಂದ ಲಾಕ್‌ಡೌನ್‌ನ್ನು ಸಡಿಲಿಸಿದೆ. ಜುಲೈ ತಿಂಗಳಲ್ಲಿ ಲಾಕ್‌ಡೌನ್ ಸಂಪೂರ್ಣ ಸಡಿಲಿಕೆಯಾಗಬಹುದಾದ ಸಾಧ್ಯತೆಗಳಿವೆ. ಲಾಕ್‌ಡೌನ್ ಹಿಂದೆಗೆದಾಕ್ಷಣ ಎಲ್ಲವೂ ಸರಿಯಾಯಿತು ಎಂದಲ್ಲ. ಬದಲಿಗೆ ಸಮಾಜದ ಹೊಣೆಗಾರಿಕೆ ಹೆಚ್ಚಾಯಿತು ಎಂದರ್ಥ. ಉಳಿದೆಲ್ಲ ರೋಗಗಳ ಕುರಿತು ಮುನ್ನೆಚ್ಚರಿಕೆ ವಹಿಸಿದಂತೆಯೇ ಕೊರೋನಕ್ಕೆ ಸಂಬಂಧಿಸಿಯೂ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂದು ಮುಂಜಾಗ್ರತೆಯ ನಿಬಂಧನೆಗಳ ಜೊತೆಗೆ ಶಾಲೆಗಳನ್ನು ತೆರೆಯಲು ಸರಕಾರವೇನೋ ಅನುಮತಿ ನೀಡಿದೆ. ಆದರೆ ಈ ಮುಂಜಾಗ್ರತೆ, ಶಾಲೆಗಳಲ್ಲಿ ವಾಸ್ತವ ರೂಪಕ್ಕೆ ಬರಲು ಸಾಧ್ಯವೇ? ಎನ್ನುವುದು ಚರ್ಚೆಯ ವಿಷಯವಾಗಿದೆ. ಸರಕಾರದ ನಿರ್ಧಾರದ ಕುರಿತಂತೆ ಬಹುತೇಕ ಪೋಷಕರು ಆತಂಕದಲ್ಲಿದ್ದಾರೆ. ಒಮ್ಮೆ ಶಾಲೆಗಳು ತೆರೆಯಿತೆಂದರೆ, ತಮ್ಮ ಮಕ್ಕಳ ಮೇಲೆ ಕಾಳಜಿಯಿರುವವರು ‘ಶಾಲೆಗೆ ಕಳುಹಿಸುವುದಿಲ್ಲ’ ಎಂಬ ತೀರ್ಮಾನಕ್ಕೆ ಬರುವುದೂ ಕಷ್ಟ. ಇದು ಸ್ಪರ್ಧೆಯ ಕಾಲವಾಗಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಲು ಯಾವ ಪೋಷಕರೂ ಸಿದ್ಧರಿರುವುದಿಲ್ಲ. ಇದೇ ಸಂದರ್ಭದಲ್ಲಿ ಶಾಲೆಗಳಲ್ಲಿ ಕೊರೋನ ಕುರಿತಂತೆ ಪೂರ್ಣ ಮುಂಜಾಗ್ರತೆಯನ್ನು ವಹಿಸುತ್ತಾರೆ ಎಂದೂ ನಂಬುವಂತಿಲ್ಲ. ಅದು ಸಾಧ್ಯವೂ ಇಲ್ಲ.

ಬಸ್‌ಗಳಲ್ಲಿ ಇಂತಿಷ್ಟೇ ಜನರನ್ನು ತುಂಬಬೇಕು ಎನ್ನುವ ನಿಯಮಗಳನ್ನು ಹೇರಲಾಗಿದೆ. ಹಾಗೆಯೇ ಶಾಲೆಗಳಲ್ಲಿ ಇಂತಿಷ್ಟೇ ವಿದ್ಯಾರ್ಥಿಗಳನ್ನು ಸೇರಿಸಬೇಕು ಎಂದು ಸರಕಾರ ನಿಯಮವನ್ನೇನಾದರೂ ಮಾಡಿದೆಯೇ? ಬಹುತೇಕ ಶಾಲೆಗಳಲ್ಲಿ ಮಕ್ಕಳನ್ನು ಕುಳ್ಳಿರಿಸಲು ಬೆಂಚ್‌ಗಳನ್ನು ಬಳಸುತ್ತಾರೆ. ಒಂದು ಬೆಂಚ್‌ನಲ್ಲಿ ಕನಿಷ್ಠ ಐದು ಮಕ್ಕಳಾದರೂ ಆಸೀನರಾಗುತ್ತಾರೆ. ಕೊರೋನ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳಬೇಕಾದರೆ ಒಂದು ಬೆಂಚ್‌ನಲ್ಲಿ ಕನಿಷ್ಠ ಮೂರು ಮಕ್ಕಳನ್ನಷ್ಟೇ ಕೂರಿಸಬೇಕು. ಇದಕ್ಕೆ ಶಾಲೆಗಳು ಸಿದ್ಧ ಇವೆ ಎಂದು ಅನ್ನಿಸುವುದಿಲ್ಲ. ಒಂದು ವೇಳೆ ಸಿದ್ಧವಾಯಿತು ಎಂದೇ ಇಟ್ಟುಕೊಳ್ಳೋಣ. ಆಗ, ಶಾಲೆಗಳಲ್ಲಿ ಪ್ರವೇಶ ಸಿಗದ ಮಕ್ಕಳ ಗತಿಯೇನು? ಎಂಬ ಪ್ರಶ್ನೆ ಏಳುತ್ತದೆ. ಖಾಸಗಿ ಶಾಲೆಗಳು ತಮ್ಮ ಶುಲ್ಕವನ್ನು ಹೆಚ್ಚಿಸುತ್ತವೆ ಮಾತ್ರವಲ್ಲ, ಡೊನೇಶನ್‌ಗಳನ್ನು ನೀಡಿದ ಮಕ್ಕಳನ್ನಷ್ಟೇ ಶಾಲೆಗಳಿಗೆ ದಾಖಲಿಸಬಹುದು. ವ್ಯಾಪಕ ಭ್ರಷ್ಟಾಚಾರಕ್ಕೆ ಇದು ಕಾರಣವಾಗಬಹುದು. ಆದುದರಿಂದ, ಒಂದು ಶಾಲೆ ಇಂತಿಷ್ಟೇ ಮಕ್ಕಳನ್ನು ತೆಗೆದುಕೊಳ್ಳಬೇಕು ಎಂದು ಆದೇಶಿಸುವಂತಿಲ್ಲ. ಇದೇ ಸಂದರ್ಭದಲ್ಲಿ, ವಿದ್ಯಾರ್ಥಿಗಳನ್ನು ಸಾಗಿಸುವ ಶಾಲಾ ವಾಹನಗಳ ಸ್ಥಿತಿ ಸರಕಾರಕ್ಕೆ ತಿಳಿಯದೇ ಇರುವುದೇನೂ ಅಲ್ಲ. ಅದಾವ ಕಾನೂನು ತಂದರು, ವಾಹನ ತುಂಬಾ ಮಕ್ಕಳನ್ನು ತುರುಕಿ ಶಾಲೆಗೆ ಹೊತ್ತೊಯ್ಯಲಾಗುತ್ತಿದೆ. ಕೊರೋನ ಹಿನ್ನೆಲೆಯಲ್ಲಿ ಒಂದು ಆಸನದಲ್ಲಿ ಒಬ್ಬ ವಿದ್ಯಾರ್ಥಿಯನ್ನು ಸಾಗಿಸುವುದಕ್ಕೆ ಶಾಲೆಗಳು ಸಿದ್ಧ ಇವೆಯೇ? ಅಥವಾ ಇದು ಸಾಧ್ಯವಾಗುವ ಮಾತೇ? ಈಗಾಗಲೇ ಶಾಲಾ ವಾಹನಗಳ ವೆಚ್ಚ ಪೋಷಕರಿಗೆ ಭಾರೀ ಹೊರೆಯಾಗುತ್ತಿದೆ. ಅಂತರ ಕಾಪಾಡುವ ನೆಪದಲ್ಲಿ ವಾಹನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಶಾಲೆಗಳು ಇಳಿಸಿದರೆ, ಪೋಷಕರು ದುಪ್ಪಟ್ಟು ಹಣವನ್ನು ಶಾಲಾ ಆಡಳಿತ ಮಂಡಳಿಗೆ ನೀಡಬೇಕಾಗುತ್ತದೆ. ಎಷ್ಟೋ ಶಾಲೆಗಳಲ್ಲಿ ಸರಿಯಾದ ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆಗಳೇ ಇಲ್ಲ.

ಗ್ರಾಮೀಣ ಪ್ರದೇಶಗಳಲ್ಲಿರುವ ಸರಕಾರಿ ಶಾಲೆಗಳ ಸ್ಥಿತಿಯಂತೂ ಚಿಂತಾಜನಕವಾಗಿದೆ. ಇಂತಹ ಶಾಲೆಗಳು ಮಕ್ಕಳಿಗೆ ಸೂಕ್ತ ಮುಖಗವಚ, ಕೈ ಶುಚಿಗೊಳಿಸಲು ಸ್ಯಾನಿಟೈಸರ್ ಇತ್ಯಾದಿಗಳನ್ನು ಒದಗಿಸುವ ಬಗ್ಗೆ ಕಲ್ಪಿಸುವುದೂ ಅಸಾಧ್ಯ. ಹಾಗೆಂದು ಸರಕಾರಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸದೇ ಇದ್ದರೆ ಮಕ್ಕಳು ಶಿಕ್ಷಣ ವಂಚಿತರಾಗಬೇಕಾಗುತ್ತದೆ. ಜುಲೈ ತಿಂಗಳು ಮಳೆ ಸುರಿಯುವ ಸಮಯ. ಈ ಸಂದರ್ಭದಲ್ಲಿ ಮಲೇರಿಯಾ, ಡೆಂಗಿ ಮೊದಲಾದ ಕಾಯಿಲೆಗಳು ವ್ಯಾಪಕವಾಗಿ ಹರಡುತ್ತಿರುತ್ತವೆ. ಇವುಗಳ ನಡುವೆ ಕೊರೋನವೂ ಸೇರಿಕೊಂಡ ಕಾರಣ ಮಕ್ಕಳಲ್ಲಿ ಸಣ್ಣ ಕಾಯಿಲೆಗಳು ಕಾಣಿಸಿಕೊಂಡರೂ ಅದು ಆತಂಕಕ್ಕೆ ಕಾರಣವಾಗಬಹುದು. ಒಂದು ವೇಳೆ ಯಾವುದಾದರೂ ಮಗುವಿನಲ್ಲಿ ಕೊರೋನ ಸೋಂಕು ಕಂಡು ಬಂದರೆ ಆ ಶಾಲೆಯ ಗತಿಯೇನು? ಕನಿಷ್ಠ ಆ ಮಗು ಇರುವ ಒಂದು ತರಗತಿಯನ್ನು ಪೂರ್ಣವಾಗಿ ಪರೀಕ್ಷಿಸಿ ಕ್ವಾರಂಟೈನ್ ಮಾಡಬೇಕಾಗುತ್ತದೆ. ಆ ಮಕ್ಕಳ ಶಿಕ್ಷಣದ ಗತಿಯೇನು? ಇಷ್ಟಕ್ಕೂ ಶಾಲೆಯೆಂದರೆ ಬರೇ ಪುಸ್ತಕದ ಬದನೆಕಾಯಿ ಮಾತ್ರವಲ್ಲ. ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮ, ಇನ್ನಿತರ ಕ್ರಿಯಾಶೀಲ ಚಟುವಟಿಕೆಗಳು ಅದರಲ್ಲಿ ಸೇರಿಕೊಳ್ಳುತ್ತವೆ.

ಈ ಸಂದರ್ಭದಲ್ಲಿ ಮಕ್ಕಳ ನಡುವೆ ಅಂತರವನ್ನು ಕಾಯುವುದಕ್ಕೆ ಸಾಧ್ಯವೇ ಇಲ್ಲ. ಮಾಲ್‌ಗಳಲ್ಲಿ, ಬಸ್‌ಗಳಲ್ಲಿ, ಸೂಪರ್ ಬಝಾರ್‌ಗಳಲ್ಲಿ ಕಠಿಣ ನಿಬಂಧನೆಗಳನ್ನು ಸರಕಾರ ವಿಧಿಸಿರುವಾಗ, ಆ ನಿಬಂಧನೆಗಳು ಶಾಲೆಗಳಿಗೆ ಅನ್ವಯವಾಗುವುದಿಲ್ಲ ಯಾಕೆ ಎನ್ನುವ ಪ್ರಶ್ನೆಗೆ ಸರಕಾರ ಮೊದಲು ಉತ್ತರಿಸಬೇಕು. ಒಂದು ವೇಳೆ ಶಾಲೆಗಳಿಗೂ ಅನ್ವಯವಾಗುತ್ತವೆ ಎಂದರೆ ಆಗ ಉದ್ಭವಿಸುವ ಮೇಲಿನೆಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಸರಕಾರ ಸೂಚಿಸಬೇಕಾಗುತ್ತದೆ. ಶಿಕ್ಷಣವನ್ನು ದಂಧೆ ಮಾಡಿಕೊಂಡವರ ಒತ್ತಡಕ್ಕೆ ಸರಕಾರ ಮಣಿದು ಶಾಲೆಗಳನ್ನು ಆತುರಾತುರವಾಗಿ ತೆರೆಯಲು ಹೊರಟಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಈ ಆರೋಪಗಳಲ್ಲಿ ಹುರುಳಿಲ್ಲದೇ ಇಲ್ಲ. ಇಡೀ ದೇಶವೇ ಎರಡು ತಿಂಗಳು ಬಾಗಿಲು ಮುಚ್ಚಿ ಕೂರಲು ಸಾಧ್ಯವಾಗುತ್ತದೆ ಎಂದರೆ, ಶಾಲೆಯನ್ನು ಕನಿಷ್ಠ ಎರಡು ಅಥವಾ ಮೂರು ತಿಂಗಳು ತಡವಾಗಿ ತೆರೆದರೆ ಆಗುವ ಅನಾಹುತವಾದರೂ ಏನು? ಕನಿಷ್ಠ ಎರಡು ತಿಂಗಳ ಮಟ್ಟಿಗಾದರೂ ಶಾಲೆಗಳನ್ನು ಮುಚ್ಚುವುದು ಸದ್ಯದ ಸಂದರ್ಭದಲ್ಲಿ ಅನಿವಾರ್ಯವಾಗಿದೆ. ಜೊತೆಗೇ, ಎಲ್ಲ ಶಾಲೆಗಳೂ ಕೊರೋನ ಸಂಬಂಧಿತವಾಗಿ ಪೂರ್ಣ ಮುಂಜಾಗರೂಕತೆಯನ್ನು ತೆಗೆದುಕೊಂಡಿವೆ ಎನ್ನುವುದು ಖಚಿತ ಪಡಿಸಿಕೊಂಡೇ ಶಾಲೆಗಳನ್ನು ತೆರೆಯಲು ಆದೇಶವನ್ನು ನೀಡಬೇಕು. ಮುಂಜಾಗರೂಕತೆಯನ್ನು ನಿರ್ಲಕ್ಷಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸರಕಾರ ಹಿಂಜರಿಯಬಾರದು. ಆದುದರಿಂದ, ಜುಲೈ ಒಂದರಿಂದ ಶಾಲೆಗಳನ್ನು ಆರಂಭಿಸುವ ತನ್ನ ನಿರ್ಧಾರದಿಂದ ಸರಕಾರ ತಕ್ಷಣ ಹಿಂದಕ್ಕೆ ಸರಿಯಬೇಕಾಗಿದೆ. ವಿವಿಧ ಕ್ಷೇತ್ರಗಳ ನುರಿತ ತಜ್ಞರೊಂದಿಗೆ ವಿಚಾರವಿನಿಮಯ ನಡೆಸಿ, ಆ ಬಳಿಕ ಮುಂದಕ್ಕೆ ಹೆಜ್ಜೆಯಿಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News