ಸಂಧಾನಕ್ಕೆ ತೃತೀಯ ಪಕ್ಷದ ಮಧ್ಯಸ್ಥಿಕೆಯ ಅಗತ್ಯವಿಲ್ಲ: ಚೀನಾ

Update: 2020-06-03 17:18 GMT

ಬೀಜಿಂಗ್,ಜೂ.3: ಭಾರತದ ಜೊತೆಗೆ ಪ್ರಸಕ್ತ ತಲೆದೋರಿರುವ ಗಡಿಬಿಕ್ಕಟ್ಟನ್ನು ಬಗೆಹರಿಸಲು ತೃತೀಯ ಪಕ್ಷದ ಮಧ್ಯಸ್ಥಿಕೆಯ ಅಗತ್ಯವಿಲ್ಲವೆಂದು ಚೀನಾ ಬುಧವಾರ ಸ್ಪಷ್ಟಪಡಿಸಿದೆ.

ಎರಡೂ ನೆರೆಹೊರೆಯ ದೇಶಗಳು ಮಾತುಕತೆಯ ಮೂಲಕ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಬಲ್ಲ ಕಾರ್ಯತಂತ್ರಗಳನ್ನು ಹಾಗೂ ಸಂವಹನ ವಾಹಿನಿಗಳನ್ನು ಹೊಂದಿವೆಯೆಂದು ಅದು ತಿಳಿಸಿದೆ.

ಚೀನಾದ ವಿದೇಶಾಂಗ ವಕ್ತಾರ ಝಾವೊ ಲಿಜಿಯಾನ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತದ ಜೊತೆಗಿನ ಗಡಿವಿವಾದಕ್ಕೆ ಸಂಬಂಧಿಸಿ ಚೀನಾದ ನಿಲುವು ಅಚಲ ಹಾಗೂ ಸ್ಪಷ್ಟವಾಗಿದೆ ಎಂದರು. ಉಭಯ ದೇಶಗಳ ನಾಯಕರ ನಡುವೆ ಏರ್ಪಟ್ಟ ನಿರ್ಧಾರಗಳನ್ನು ಎರಡೂ ರಾಷ್ಟ್ರಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಿವೆ ಎಂದವರು ಹೇಳಿದರು.

ಮಾತುಕತೆ ಹಾಗೂ ಸಂಧಾನಗಳ ಮೂಲಕ ಭಾರತ ಹಾಗೂ ಚೀನಾದ ನಡುವಿನ ಪ್ರಸಕ್ತ ಗಡಿಬಿಕ್ಕಟ್ಟನ್ನು ಬಗೆಹರಿಸಲು ತಾನು ಸಿದ್ಧನಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಕೊಡುಗೆಗೆ ಝಾವೊ ಈ ಸ್ಪಷ್ಟನೆ ನೀಡಿದ್ದಾರೆ.

  ಪ್ರಸಕ್ತ ಭಾರತ-ಚೀನಾ ಗಡಿ ಪರಿಸ್ಥಿತಿಯು ಒಟ್ಟಾರೆಯಾಗಿ ಸ್ಥಿರವಾಗಿದೆ ಹಾಗೂ ನಿಯಂತ್ರಣದಲ್ಲಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News