ನೌಕರರಿಗೆ ವೇತನ ಪಾವತಿಸದ ಮಾಲಕರ ವಿರುದ್ಧ ಕಠಿಣ ಕ್ರಮ ಬೇಡ: ಕೇಂದ್ರಕ್ಕೆ ಸುಪ್ರೀಂ

Update: 2020-06-04 14:57 GMT

ಹೊಸದಿಲ್ಲಿ,ಜೂ.4: ಲಾಕ್‌ಡೌನ್ ಅವಧಿಯಲ್ಲಿ ತಮ್ಮ ನೌಕರರಿಗೆ ಪೂರ್ತಿ ವೇತನ ಪಾವತಿಸದ ಸಂಸ್ಥೆಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಗುರುವಾರ ಆದೇಶ ನೀಡಿದೆ.

 ಲಾಕ್‌ಡೌನ್ ಸಂದರ್ಭ ಉದ್ಯೋಗಿಗಳಿಗೆ ಪೂರ್ತಿ ವೇತನ ಪಾವತಿಸುವಂತೆ ಸೂಚಿಸಿ ಕೇಂದ್ರ ಗೃಹ ಸಚಿವಾಲಯವು ಮಾರ್ಚ್ 29ರಂದು ಸುತ್ತೋಲೆಯನ್ನು ಹೊರಡಿಸಿತ್ತು. ಪೂರ್ಣ ವೇತನ ಪಾವತಿಸದ ಉದ್ಯೋಗದಾತರ ವಿರುದ್ಧ ಕಠಿಣಕ್ರಮ ಕೈಗೊಳ್ಳುವುದಾಗಿ ಅದು ಸೂಚಿಸಿದ್ದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಆದೇಶ ಹೊರಡಿಸಿದೆ.

ಲಾಕ್‌ಡೌನ್ ಅವಧಿಯಲ್ಲಿ ನೌಕರರ ವೇತನಗಳನ್ನು ಕಡಿತಗೊಳಿಸುವುದಾಗಲಿ ಅಥವಾ ಅವರನ್ನು ಕೆಲಸದಿಂದ ವಜಾಗೊಳಿಸದಂತೆಯೂ ಉದ್ಯೋಗದಾತರಿಗೆ ಸಲಹೆ ನೀಡುವಂತೆ ಸೂಚಿಸಿ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ ಕಾರ್ಯದರ್ಶಿಯವರು, ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು

ಶೇಕಡ 100ರಷ್ಟು ವೇತನ ಪಾವತಿಸುವಲ್ಲಿ ವಿಫಲರಾದ ಉದ್ಯೋಗದಾತರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕೆಂಬ ಕೇಂದ್ರ ಗೃಹ ಸಚಿವಾಲಯದ ಸುತ್ತೋಲೆಯ ಬಗ್ಗೆ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್.ಕೆ.ಕೌಲ್ ಹಾಗೂ ಎಂ.ಆರ್.ಶಾ ಅವರನ್ನೊಳಗೊಂಡ ನ್ಯಾಯಪೀಠ ಆತಂಕ ವ್ಯಕ್ತಪಡಿಸಿತು.

 ಕೇಂದ್ರ ಗೃಹ ಸಚಿವಾಲಯದ ಸುತ್ತೋಲೆಯ ಬಗ್ಗೆ ತನಗೆ ಭಿನ್ನ ಅಭಿಪ್ರಾಯವಿರುವುದಾಗಿ ಹೇಳಿದ ನ್ಯಾಯಪೀಠವು ಲಾಕ್‌ಡೌನ್ ಅವಧಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಯಬೇಕಾದ ಅಗತ್ಯವಿದೆಯೆಂದು ಹೇಳಿತು. ಲಾಕ್‌ಡೌನ್ ಅವಧಿಯಲ್ಲಿ ನೌಕರರಿಗೆ ವೇತನ ಪಾವತಿ ಹಾಗೂ ಕೈಗಾರಿಕೆಗಳ ರಕ್ಷಣೆ ಇವೆರಡರ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗಿದೆ ಎಂದರು.

ಉದ್ಯೋಗಿಗಳನ್ನು ವೇತನದಿಂದ ವಂಚಿತರನ್ನಾಗಿ ಮಾಡಬಾರದೆಂಬ ಕಾಳಜಿಯು ನ್ಯಾಯಾಲಯಕ್ಕಿದೆ. ಆದರೆ ಲಾಕ್ ‌ಡೌನ್‌ನಿಂದಾಗಿ ಉದ್ಯೋಗದಾತರಿಗೆ ತಮ್ಮ ನೌಕರರಿಗೆ ವೇತನವನ್ನು ಪಾವತಿಸಲು ಬೇಕಾದಷ್ಟು ಹಣವೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಕೂಡಾ ತನ್ನ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಒಂದು ಸಂತುಲಿತವಾದ ಕ್ರಮದ ಅಗತ್ಯವಿದೆ ಎಂದು ನ್ಯಾಯಾಲಯವು ಈ ಬಗ್ಗೆ ಸಲ್ಲಿಸಲಾದ ಅರ್ಜಿಗಳ ಕುರಿತಾಗಿ ತನ್ನ ತೀರ್ಪನ್ನು ಕಾದಿರಿಸುತ್ತಾ ತಿಳಿಸಿತು.

ನೌಕರರಿಗೆ ವೇತನವನ್ನು ಪಾವತಿಸದ ಉದ್ಯೋಗದಾತರರನ್ನು ಶಿಕ್ಷಿಸುವ ಅಧಿಕಾರ ಕೇಂದ್ರ ಸರಕಾರಕ್ಕೆ ಇದೆಯೇ ಎಬುದಾಗಿಯೂ ಅದು ಪ್ರಶ್ನಿಸಿತು.

 ಲಾಕ್‌ಡೌನ್ ಅವಧಿಯಲ್ಲಿ ಉದ್ಯೋಗಿಗಳು ತಾವು ಕೆಲಸ ಮಾಡುವ ಊರಲ್ಲೇ ಉಳಿಯುವಂತೆ ಮಾಡಲು ನೆರವಾಗಬೇಕೆಂಬ ಉದ್ದೇಶದಿಂದ ಈ ಸುತ್ತೋಲೆಯನ್ನು ಕೇಂದ್ರ ಸರಕಾರ ಹೊರಡಿಸಿತ್ತು ಎಂದು ಅಟಾರ್ನಿ ಜನರಲಂ ಕೆ.ಕೆ. ವೇಣುಗೋಪಾಲನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News