ಲಾಕ್‌ಡೌನ್ ಸಡಿಲಿಕೆ ಬಳಿಕ ಕೊರೋನ ಸೋಂಕು ಹೆಚ್ಚಿರುವ ಏಕೈಕ ದೇಶ ಭಾರತ: ರಾಹುಲ್ ಗಾಂಧಿ ಟೀಕೆ

Update: 2020-06-04 16:33 GMT

ಹೊಸದಿಲ್ಲಿ, ಜೂ.4: ಲಾಕ್‌ಡೌನ್ ಸಡಿಲಿಕೆ ಬಳಿಕ ಕೊರೋನ ವೈರಸ್ ಸೋಂಕು ಹೆಚ್ಚಿರುವ ಏಕೈಕ ದೇಶ ಭಾರತ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಗುರುವಾರ ಉದ್ಯಮಿ ರಾಜೀವ್ ಬಜಾಜ್ ಜೊತೆ ವೀಡಿಯೊ ಕಾನ್ಫರೆನ್ಸಿಂಗ್ ನಡೆಸಿದ ರಾಹುಲ್, ಕೊರೋನ ಸೋಂಕಿನ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರಕಾರ ಈಗ ಕೈಚೆಲ್ಲಿದ್ದು, ಬಿಕ್ಕಟ್ಟನ್ನು ಎದುರಿಸುವ ಹೊಣೆಯನ್ನು ರಾಜ್ಯ ಸರಕಾರಗಳ ಹೆಗಲಿಗೇರಿಸಿದೆ ಎಂದರು.

ವಿಶ್ವದೆಲ್ಲೆಡೆ ಲಾಕ್‌ಡೌನ್‌ನ ಬಳಿಕ ಕೊರೋನ ಸೋಂಕಿನ ಹರಡುವಿಕೆ ಪ್ರಮಾಣ ಕಡಿಮೆಯಾಗಿದೆ. ಆದರೆ ಭಾರತದಲ್ಲಿ ಕೇಂದ್ರ ಸರಕಾರದ ಬೇಕಾಬಿಟ್ಟಿ ನಿಲುವಿನಿಂದ ಸೋಂಕು ಈಗ ವಿಪರೀತವಾಗಿದೆ. ಈ ಹಂತದಲ್ಲಿ ಕೇಂದ್ರ ಸರಕಾರ ರಾಜ್ಯಗಳ ಹೆಗಲಿಗೆ ಹೊಣೆಯನ್ನು ವರ್ಗಾಯಿಸಿದೆ. ಆದರೆ ಇದನ್ನು ಮಾರ್ಚ್ 25ರಂದು, ಮೊದಲ ಬಾರಿ ಲಾಕ್‌ಡೌನ್ ಘೋಷಿಸುವಾಗ ಮಾಡಬೇಕಿತ್ತು. ಆಗ ಯಾರ ಅಭಿಪ್ರಾಯ, ಸಲಹೆಯನ್ನೂ ಪಡೆಯದೆ ಕೇಂದ್ರ ಸರಕಾರ ಲಾಕ್‌ಡೌನ್ ಘೋಷಿಸಿದ್ದು ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ ಎಂದು ರಾಹುಲ್ ಅಭಿಪ್ರಾಯಪಟ್ಟರು.

ಕೇಂದ್ರ ಸರಕಾರ ವಲಸೆ ಕಾರ್ಮಿಕರು, ರೈತರು, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಬೃಹತ್ ಉದ್ಯಮಗಳ ಬಗ್ಗೆ ಸಹಾನುಭೂತಿಯಿಂದ ವರ್ತಿಸಬೇಕು. ಬಡವರು ಮತ್ತು ವಲಸೆ ಕಾರ್ಮಿಕರಿಗೆ ಲಾಕ್‌ಡೌನ್‌ನಿಂದ ಮಾರಕ ಹೊಡೆತ ಬಿದ್ದಿದೆ ಎಂದರು.

ಎರಡನೇ ವಿಶ್ವಯುದ್ಧದ ಸಂದರ್ಭದಲ್ಲೂ ವಿಶ್ವದಲ್ಲಿ ಈ ರೀತಿಯ ಲಾಕ್‌ಡೌನ್ ಬಹುಷಃ ಕಂಡುಬಂದಿರಲಿಲ್ಲ. ಇಂತಹ ಸ್ಥಿತಿ ಬರಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಸಹಜಸ್ಥಿತಿ ಮರಳಿದ ಬಳಿಕವೂ ಇದೊಂದು ಅನನ್ಯ ಮತ್ತು ವಿನಾಶಕಾರಿ ವಿದ್ಯಮಾನವಾಗಿ ನೆನಪಿನಲ್ಲಿ ಉಳಿಯಲಿದೆ ಎಂದು ರಾಹುಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News