ಜಾರ್ಜ್ ಫ್ಲಾಯ್ಡ್ ಕೊರೋನ ಸೋಂಕಿತರಾಗಿದ್ದರು: ಮರಣೋತ್ತರ ಪರೀಕ್ಷೆ ವರದಿ

Update: 2020-06-04 16:37 GMT

ನ್ಯೂಯಾರ್ಕ್, ಜೂ. 4: ಕಳೆದ ವಾರ ಅಮೆರಿಕದ ಮಿನಸೋಟ ರಾಜ್ಯದ ಮಿನಪೊಲಿಸ್ ನಗರದಲ್ಲಿ ಪೊಲೀಸರ ಕಸ್ಟಡಿಯಲ್ಲಿ ಸಾವಿಗೀಡಾಗಿರುವ ಜಾರ್ಜ್ ಫ್ಲಾಯ್ಡ್ ಎಪ್ರಿಲ್‌ನಲ್ಲಿ ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದರು ಎಂದು ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

46 ವರ್ಷದ ಫ್ಲಾಯ್ಡ್ ಗೆ ಕೊರೋನ ವೈರಸ್ ಸೋಂಕು ಇರುವುದು ಎಪ್ರಿಲ್ 3ರಂದು ನಡೆಸಲಾದ ಪರೀಕ್ಷೆಯಲ್ಲಿ ದೃಢಪಟ್ಟಿತ್ತು ಎಂದು ಹೆನ್‌ಪಿನ್ ಕೌಂಟಿಯ ವೈದ್ಯಕೀಯ ತಪಾಸಕರು ಬಿಡುಗಡೆ ಮಾಡಿರುವ ಪೂರ್ಣ ಶವಪರೀಕ್ಷೆಯ ವರದಿಯನ್ನು ಉಲ್ಲೇಖಿಸಿ ಪತ್ರಿಕೆ ತಿಳಿಸಿದೆ.

ಶವ ಪರೀಕ್ಷೆಯ ವೇಳೆ ವೈದ್ಯಕೀಯ ತಪಾಸಕರು ಫ್ಲಾಯ್ಡ್ ರ ಮೂಗಿನ ದ್ರವವನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ ಹಾಗೂ ಆಗ ಅವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ಪತ್ರಿಕೆ ಹೇಳಿದೆ.

ಅವರಲ್ಲಿ ಈ ಹಿಂದೆ ಸೋಂಕು ಕಾಣಿಸಿಕೊಂಡಿದ್ದರ ಪರಿಣಾಮವಾಗಿ ಈ ಬಾರಿಯೂ ಅವರಿಗೆ ಸೋಂಕು ಇದೆ ಎನ್ನುವುದನ್ನು ಪರೀಕ್ಷೆ ತೋರಿಸಿತ್ತು ಎಂದು ವರದಿ ತಿಳಿಸಿದೆ.

ಆದರೆ, ಅವರ ಸಾವಿಗೆ ವೈರಸ್ ಕಾರಣವಾಗಿರಬಹುದು ಎಂದು ಹೇಳಲು ಪುರಾವೆಯಿಲ್ಲ ಎಂಬುದಾಗಿಯೂ ವರದಿ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News