ಆನೆಗಳ ಅರಣ್ಯರೋದನಕ್ಕೆ ಕೊನೆ ಎಂದು?

Update: 2020-06-05 04:45 GMT

ಇತ್ತೀಚೆಗೆ ಕೇರಳದಲ್ಲಿ ಒಂದು ದುರ್ಘಟನೆ ನಡೆಯಿತು. ಕಾಡು ಹಂದಿಯನ್ನು ಹಿಡಿಯಲೆಂದು ಸಿಡಿಮದನ್ನೊಳಗೊಂಡ ಅನಾನಸೊಂದನ್ನು ತಿಂದ ಆನೆ ತೀವ್ರವಾಗಿ ಗಾಯಗೊಂಡು, ಹೃದಯವಿದ್ರಾವಕವಾಗಿ ಸತ್ತಿತು. ಮರಣೋತ್ತರ ಪರೀಕ್ಷೆಯಲ್ಲಿ ಆನೆ ಗರ್ಭ ಧರಿಸಿರುವುದೂ ಬೆಳಕಿಗೆ ಬಂತು. ಆನೆ ಮರಣವನ್ನಪ್ಪಿದ ರೀತಿ ಕರುಳು ಕಿವುಚುವಂತಹದು. ಆ ಘಟನೆಗಾಗಿ ಮನುಷ್ಯತ್ವಕ್ಕಾಗಿ ಹಂಬಲಿಸುವ ಲಕ್ಷಾಂತರ ಮನಸ್ಸುಗಳು ಕಂಬನಿ ಮಿಡಿದವು. ಇದೇ ಸಂದರ್ಭದಲ್ಲಿ, ಕೆಲವು ದುಷ್ಟ ಮನಸ್ಸುಗಳಿಗೆ ಆನೆಗಿಂತ, ಆನೆಯ ಸಾವು ಸಂಭವಿಸಿದ ರಾಜ್ಯ ‘ಕೇರಳ’ ಎನ್ನುವುದೇ ಮುಖ್ಯವಾಯಿತು. ಮನುಷ್ಯನ ಬೇಜವಾಬ್ದಾರಿ ಮತ್ತು ಸ್ವಾರ್ಥವನ್ನು ಖಂಡಿಸುವ ಬದಲು ಅವರು ಕೇರಳ ರಾಜ್ಯವನ್ನು ನಿಂದಿಸಲು ಶುರುಹಚ್ಚಿದರು. ‘ಕೇರಳ ವಿರುದ್ಧದ ದ್ವೇಷ’ ಎಂದರೆ ಅಭಿವೃದ್ಧಿ, ವೈಚಾರಿಕತೆ, ಸಮಾನತೆಯ ಕುರಿತಂತೆ ಕೆಲ ಜನರಿಗಿರುವ ಅಸಹನೆ ಎನ್ನುವುದನ್ನು ದೇಶ ಈಗಾಗಲೇ ಮನಗಂಡಿದೆ. ಕೊರೋನ ದಿನಗಳಲ್ಲಿ ಸಂಘಪರಿವಾರ ತನ್ನ ವಿರುದ್ಧ ಹಮ್ಮಿಕೊಂಡ ದ್ವೇಷದ ಅಭಿಯಾನವನ್ನು ಮೆಟ್ಟಿನಿಂತು ಕೇರಳ ವಿಶ್ವಮಟ್ಟದಲ್ಲಿ ಕೊರೋನ ವಿರುದ್ಧದ ಜಾಗೃತಿಗಾಗಿ ಗುರುತಿಸಿಕೊಂಡಿರುವುದು ಇತಿಹಾಸ. ಇದೀಗ, ಯಾವನೋ ಕೃಷಿಕನೊಬ್ಬ ಎಸಗಿದ ದುರುಳತನದ ಪ್ರಕರಣವೊಂದನ್ನು ಮುಂದಿಟ್ಟುಕೊಂಡು ಸಂಘಪರಿವಾರ ಹೊಸದಾಗಿ ಮತ್ತೆ ತನ್ನ ಕಾರ್ಯವನ್ನು ಶುರು ಹಚ್ಚಿಕೊಂಡಿದೆ. ವಿಪರ್ಯಾಸವೆಂದರೆ, ಇದರಲ್ಲೂ ಮುಸ್ಲಿಮರ ಪಾತ್ರವಿದೆಯೋ ಎಂದು ಕೇಂದ್ರದ ಸಚಿವರಾದಿಯಾಗಿ ಕೆಲವರು ತಿಣುಕಾಟ ನಡೆಸುತ್ತಿದ್ದಾರೆ.

ಕೇಂದ್ರದ ಆರೋಗ್ಯ ಸಚಿವರು ಆನೆಯ ಸಾವಿಗಾಗಿ ಆಘಾತ ವ್ಯಕ್ತಪಡಿಸಿರುವುದು ಮಾತ್ರವಲ್ಲ, ಈ ಬಗ್ಗೆ ಗಂಭೀರ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ. ‘ಪ್ರಾಣಿ ಪ್ರೇಮ ಮತ್ತು ಮನುಷ್ಯ ದ್ವೇಷ’ಕ್ಕಾಗಿ ಕುಖ್ಯಾತವಾಗಿರುವ ಬಿಜೆಪಿಯ ನಾಯಕಿಯೊಬ್ಬರು ಈ ಘಟನೆ ನಡೆದಿರುವುದು ‘ಮಲಪ್ಪುರ’ದಲ್ಲಿ ಎಂದು ತಪ್ಪು ಮಾಹಿತಿ ನೀಡಿ ಪ್ರಕರಣವನ್ನು ತಿರುಚಲು ನೋಡಿದರು. ಘಟನೆ ನಡೆದಿರುವುದು ಪಾಲಕ್ಕಾಡ್‌ನಲ್ಲಿ ಎನ್ನುವುದನ್ನು ಜನರೇ ಅವರಿಗೆ ತಿಳಿಸಿಕೊಡಬೇಕಾಯಿತು. ಕೇರಳವೆಂದಲ್ಲ, ಮಲೆನಾಡಿನಲ್ಲಿ ಕಾಡು ಹಂದಿಯನ್ನು ಹಿಡಿಯಲು ಜನರು ವಿವಿಧ ತಂತ್ರಗಳನ್ನು, ಕುತಂತ್ರಗಳನ್ನು ಬಳಸುವುದಿದೆ. ಕೆಲವೊಮ್ಮೆ ಈ ಕುತಂತ್ರಕ್ಕೆ ಕಾಡು ಹಂದಿ ಸಿಕ್ಕಿಕೊಳ್ಳುವ ಬದಲು ಮನುಷ್ಯರೇ ಬಲಿಯಾಗುವುದಿದೆ. ಕೇರಳದ ಪ್ರಕರಣವೊಂದರಲ್ಲಿ ಹಂದಿಯ ಬದಲಿಗೆ ಆನೆ ಸತ್ತು ಹೋಗಿದೆ. ಇಂತಹ ಘಟನೆಯನ್ನು ಖಂಡಿಸಿ ದುರುಳರಿಗೆ ಶಿಕ್ಷೆಯಾಗುವಂತೆ ಒತ್ತಾಯಿಸುವುದು ಮನುಷ್ಯರೆಂದು ಕರೆಸಿಕೊಳ್ಳುವವರ ಕರ್ತವ್ಯವಾಗಿದೆ. ಆದರೆ ಕೆಲವರು ಆನೆಯನ್ನು ಪಕ್ಕಕ್ಕಿಟ್ಟು ಕೇರಳದ ಜನರನ್ನು ದೂಷಿಸಲು, ದ್ವೇಷಿಸಲು ಬಳಸಿಕೊಳ್ಳುತ್ತಿದ್ದಾರೆ.

ಉದ್ದೇಶಪೂರ್ವಕವಾಗಿ ಆನೆಯನ್ನು ಕೊಂದು ಹಾಕಲಾಗಿದೆ ಎಂಬಂತೆ ಬಿಂಬಿಸುತ್ತಿದ್ದಾರೆ. ಹಾಗೆ ನೋಡಿದರೆ ಆನೆಯನ್ನು ಬಲಿತೆಗೆದುಕೊಳ್ಳುವುದರಲ್ಲಿ ಕರ್ನಾಟಕವೇನೂ ಹಿಂದೆ ಬಿದ್ದಿಲ್ಲ. ಕೊಡಗು ಸೇರಿದಂತೆ ಮಲೆನಾಡಿನಲ್ಲಿ ಕೃಷಿಕರು ಆನೆಯ ಹಾವಳಿಯನ್ನು ತಪ್ಪಿಸಲು ವಿದ್ಯುತ್ ಬೇಲಿಯನ್ನು ಬಳಸುವುದಿದೆ. ಈ ಬೇಲಿಗೆ ಸಿಲುಕಿ ಮನುಷ್ಯರೇ ಮೃತಪಟ್ಟ ಉದಾಹರಣೆಗಳು ಹಲವು. 2017ರಲ್ಲಿ ಆನೆ ಸಂಕುಲವೇ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ಕೊಡಗಿನಲ್ಲಿ ನಡೆಯಿತು. ಅರಣ್ಯ ಇಲಾಖೆಯ ವಿದ್ಯುತ್ ಬೇಲಿಗೆ ಸಿಲುಕಿ ನಾಲ್ಕು ಆನೆಗಳು ಒಟ್ಟಿಗೇ ಪ್ರಾಣ ಬಿಟ್ಟವು. ಆ ಒಂದೇ ತಿಂಗಳಲ್ಲಿ ಒಟ್ಟು ಆರು ಆನೆಗಳು ವಿದ್ಯುತ್ ಆಘಾತಕ್ಕೆ ಸಿಲುಕಿ ಬಲಿಯಾಗಿದ್ದವು. ಕೇರಳದ ಆನೆಗಳಿಗಾಗಿ ಮರುಗುವವರಿಗೆ ಇಂತಹ ಪ್ರಕರಣಗಳಿಗೆ ಪ್ರತಿಕ್ರಿಯಿಸಬೇಕು ಎಂದು ಯಾಕೆ ಅನ್ನಿಸುವುದಿಲ್ಲ?

ರೈತರು ಮತ್ತು ಆನೆಗಳ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಯಾವಾಗ ಕೃಷಿ ಪ್ರದೇಶಗಳಿಗಾಗಿ ಕಾಡುಗಳ ಮೇಲೆ ಹಸ್ತಕ್ಷೇಪ ಶುರುವಾಯಿತೋ, ಆನೆಗಳೂ ಕೃಷಿ ಪ್ರದೇಶಗಳಿಗೆ ಅಕ್ರಮವಾಗಿ ಪ್ರವೇಶಿಸಲು ಆರಂಭಿಸಿದವು. ಅಲ್ಲಿಂದ, ಆನೆಗಳು ಮತ್ತು ರೈತರ ನಡುವೆ ಸಂಘರ್ಷಗಳು ಆರಂಭವಾಗಿವೆ. ಈ ಸಂಘರ್ಷಗಳಲ್ಲಿ ನೂರಾರು ಆನೆಗಳೂ, ಮನುಷ್ಯರೂ ಬಲಿಯಾಗುತ್ತಲೇ ಇದ್ದಾರೆ. ಕೃಷಿ ಪ್ರದೇಶಗಳಿಗೆ ಆನೆಗಳ ದಾಳಿಯನ್ನು ತಡೆಯಲು ಅರಣ್ಯ ಇಲಾಖೆಗಳು ವಿಫಲವಾದಾಗ ರೈತರೇ ಅದನ್ನು ಓಡಿಸಲು ಬೇರೆ ಬೇರೆ ತಂತ್ರಗಳನ್ನು ಅನುಸರಿಸುತ್ತಾರೆ. ಅವುಗಳಲ್ಲಿ ‘ವಿದ್ಯುತ್ ಬೇಲಿ’ಯೂ ಒಂದು. 2009ರಿಂದ 2017ರ ಅಂಕಿಸಂಕಿಗಳನ್ನು ತೆರೆದು ನೋಡಿದರೆ, ವಿದ್ಯುತ್ ಆಘಾತಗಳಿಗೆ ಪ್ರಾಣ ತೆತ್ತ ಆನೆಗಳ ಸಂಖ್ಯೆ 461. ಪ್ರತಿ ವರ್ಷ ಭಾರತದಲ್ಲಿ 50ಕ್ಕೂ ಅಧಿಕ ಆನೆಗಳು ವಿದ್ಯುತ್ ಆಘಾತದಿಂದಲೇ ಸಾವಿಗೀಡಾಗುತ್ತವೆ. ಇಡೀ ದೇಶದಲ್ಲೇ, ವಿದ್ಯುತ್ ಆಘಾತಕ್ಕೆ ಬಲಿಯಾಗುವ ಆನೆಗಳ ಸಂಖ್ಯೆ ಕರ್ನಾಟಕದಲ್ಲಿ ಅಧಿಕ ಎಂದು ವರದಿಗಳು ಹೇಳುತ್ತವೆ. 2009-2017ರಲ್ಲಿ ಮೃತಪಟ್ಟ ಆನೆಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡಾಗ, ಅತಿ ಹೆಚ್ಚು ಅಂದರೆ 106 ಆನೆಗಳು ಕರ್ನಾಟಕದಲ್ಲಿ ಮೃತಪಟ್ಟಿದ್ದರೆ, 17 ಆನೆಗಳು ಕೇರಳದಲ್ಲಿ ಸತ್ತಿವೆ. ಆನೆಗಳಿಂದ ರಕ್ಷಣೆ ಪಡೆಯಲು ವಿದ್ಯುತ್ ಬೇಲಿಯನ್ನು ನಿರ್ಮಿಸುವುದರಿಂದ ಇದನ್ನು ‘ಅಪಘಾತ’ ಎಂದು ಕರೆದು ಕೈತೊಳೆದುಕೊಳ್ಳಲಾಗುತ್ತದೆ. ಹೀಗಿರುವಾಗ, ಕೇರಳದಲ್ಲಿ ಹಂದಿಗೆಂದು ಇಟ್ಟ ಸಿಡಿಮದ್ದಿನಿಂದ ಸತ್ತ ಆನೆಗಾಗಿ ಕೇಂದ್ರ ಸರಕಾರ ಸುರಿಸುವ ಕಣ್ಣೀರನ್ನು ‘ಮೊಸಳೆ ಕಣ್ಣೀರು’ ಎಂದಲ್ಲದೆ ಇನ್ನೇನೆಂದು ಕರೆಯೋಣ?

ಹೆಣ್ಣು, ನದಿ ಮತ್ತು ಆನೆಗಳಿಗೆ ಭಾರತ ಅತ್ಯಂತ ಅಪಾಯಕಾರಿಯಾದ ದೇಶವಾಗಿದೆ ಎನ್ನುವುದನ್ನು ಈಗಾಗಲೇ ವರದಿಗಳು ಬಹಿರಂಗಪಡಿಸಿವೆ. ಯಾವುದನ್ನೆಲ್ಲ ವೈದಿಕ ಸಂಸ್ಕೃತಿ ‘ಪವಿತ್ರ’ ಎಂದು ಗುರುತಿಸಿದೆಯೋ ಅವೆಲ್ಲವೂ ಪವಿತ್ರ ಎನ್ನುವ ಕಾರಣಕ್ಕಾಗಿಯೇ ಶೋಷಣೆಗೊಳಗಾಗಿವೆ. ‘ಹೆಣ್ಣನ್ನು ಪೂಜನೀಯಳು’ ಎಂದು ಕರೆಯುತ್ತಾ ಆಕೆಯನ್ನು ಪತಿಯ ಚಿತೆಯಲ್ಲಿ ಜೀವಂತ ದಹಿಸಿದ ಕುಖ್ಯಾತಿ ಭಾರತ ದೇಶದ್ದು. ತಲೆ ಬೋಳಿಸಿ, ವಿಧವೆಯೆಂದು ಘೋಷಿಸಿ ಆಕೆಗಾಗಿ ‘ವೃಂದಾವನ’ದಲ್ಲಿ ಪ್ರತ್ಯೇಕ ಕೇರಿಯೊಂದನ್ನು ನಿರ್ಮಿಸಿದ ಹೆಮ್ಮೆ ನಮ್ಮದು. ಗಂಗಾ ನದಿಯನ್ನು ಪವಿತ್ರ ಎಂದು ಕರೆದು ಆಕೆಯನ್ನು ಯಾವ ಸ್ಥಿತಿಗಿಳಿಸಿದ್ದೇವೆ ಎಂದರೆ, ಸಹಸ್ರಾರು ಕೋಟಿ ರೂಪಾಯಿ ವೆಚ್ಚ ಮಾಡಿದ ಬಳಿಕವೂ ಆಕೆಯನ್ನು ಶುಚಿಗೊಳಿಸಲಾಗದೆ ಅಸಹಾಯಕರಾಗಿದ್ದೇವೆ. ಆನೆಯನ್ನು ಕೂಡ ಈ ದೇಶ ದೈವಿಕ ಭಾವನೆಯಿಂದ ನೋಡುತ್ತ್ತಾ ಬಂದಿದೆ. ಆದರೆ ಅದರ ಹೆಸರಲ್ಲೇ ಆನೆಗಳನ್ನು ಅತ್ಯಂತ ಬರ್ಬರವಾಗಿ ಶೋಷಿಸಿದೆ.

ಭಾರತದಲ್ಲಿ ಧಾರ್ಮಿಕ ಕಾರಣಕ್ಕಾಗಿ ಆನೆಗಳ ಮೇಲೆ ಎಸಗುತ್ತಿರುವ ಬರ್ಬರ ದೌರ್ಜನ್ಯಗಳನ್ನು ಆಧಾರವಾಗಿಟ್ಟುಕೊಂಡು ಕಲಾವಿದೆ ಸಂಗೀತಾ ಅಯ್ಯರ್ 2014ರಲ್ಲಿ ‘ಗಾಡ್ಸ್ ಇನ್ ಶಾಕಲ್ಸ್’ ಎನ್ನುವ ಸಾಕ್ಷ ಚಿತ್ರ ಮಾಡಿದ್ದಾರೆ. ಧಾರ್ಮಿಕ ಆಚರಣೆಗಳಲ್ಲಿ ಆನೆಗಳನ್ನು ಬಳಸುವುದಕ್ಕಾಗಿ ಅವುಗಳನ್ನು ಪಳಗಿಸಲು ನಡೆಸುವ ಬರ್ಬರ ದೌರ್ಜನ್ಯ, ಸರಪಳಿಗಳಲ್ಲಿ ಬಂಧಿಯಾಗಿ ಅದು ಅನುಭವಿಸುವ ನೋವು, ಅವುಗಳ ಮೇಲೆ ಆಗಿರುವ ರಣಗಾಯಗಳು...ಇವೆಲ್ಲವನ್ನೂ ಬೆಚ್ಚಿ ಬೀಳಿಸುವಂತೆ ಆ ಸಾಕ್ಷ ಚಿತ್ರಗಳಲ್ಲಿ ತೆರೆದಿಟ್ಟಿದ್ದಾರೆ. ವನ್ಯ ಜೀವಿಗಳ ರಕ್ಷಣೆಗಾಗಿ ಹಲವು ಕಠಿಣ ಕಾನೂನು ನಮ್ಮ ಮುಂದಿವೆಯಾದರೂ ಇವುಗಳು ಆನೆಗಳ ರಕ್ಷಣೆಗಾಗಿ ಇನ್ನೂ ಬಳಕೆಯಾಗಿಲ್ಲ. ಕೇಂದ್ರ ಸರಕಾರಕ್ಕೆ ನಿಜಕ್ಕೂ ಆನೆಗಳ ಮೇಲೆ ಕಾಳಜಿ ಇದೆ ಎಂದಾದರೆ, ಪ್ರಜ್ಞಾಪೂರ್ವಕವಾಗಿ ಆನೆಗಳ ಮೇಲೆ ಮನುಷ್ಯರು ಎಸಗುವ ದೌರ್ಜನ್ಯಗಳನ್ನು ತಡೆಯಲು ಕಠಿಣ ಕಾನೂನನ್ನು ಜಾರಿಗೊಳಿಸಬೇಕು. ಮನುಷ್ಯ ಸಂಕೋಲೆಗಳಿಂದ ಆನೆಗಳಿಗೆ ಬಿಡುಗಡೆ ನೀಡಬೇಕು. ಆ ಮೂಲಕ, ತಲೆ ತಲಾಂತರಗಳಿಂದ ಆನೆಗಳ ಕುರಿತಂತೆ ಗೌರವ ಭಾವವನ್ನು ಬೆಳೆಸಿಕೊಂಡು ಬಂದ ಭಾರತೀಯ ಪರಂಪರೆಯ ಹಿರಿಮೆಯನ್ನು ಎತ್ತಿ ಹಿಡಿಯಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News