ಯುವರಾಜ್ ವಿರುದ್ಧ ಪೊಲೀಸ್ ದೂರು ದಾಖಲು

Update: 2020-06-05 04:16 GMT

ಹೊಸದಿಲ್ಲಿ, ಜೂ.4: ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಚಾಟ್ ವೇಳೆ ಜಾತಿಯನ್ನು ಉಲ್ಲೇಖಿಸಿ ಸಮಸ್ಯೆಗೆ ಸಿಲುಕಿದ್ದ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

ರೋಹಿತ್ ಶರ್ಮಾ ಅವರೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಂಭಾಷಣೆ ನಡೆಸುತ್ತಿದ್ದಾಗ ಯುವರಾಜ್ ಸಿಂಗ್ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್‌ರ ಟಿಕ್‌ಟಾಕ್ ಹವ್ಯಾಸದ ಬಗ್ಗೆ ಮಾತನಾಡುವಾಗ ‘ಗೀಳು’ ಪದ ಬಳಕೆಯ ವೇಳೆ ಜಾತಿಯನ್ನು ಉಲ್ಲೇಖಿಸಿ ವಿವಾದಕ್ಕೆ ಸಿಲುಕಿದ್ದರು.

‘‘ಯೂಜಿ ಅವರಂತಹರಿಗೆ ಮಾಡಲು ಬೇರೆ ಕೆಲಸವಿಲ್ಲ. ಅವರು ಯಾವ ರೀತಿಯ ವೀಡಿಯೊ ಹಂಚಿಕೊಂಡಿದ್ದಾರೆಂದು ನೀವು ನೋಡಿದ್ದೀರಾ’’ಎಂದು ಹೇಳುತ್ತಿರುವ ಯುವರಾಜ್ ಮಾತಿನ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣ ವೈರಲ್ ಆಗಿತ್ತು.

ನಿಮ್ಮ ತಂದೆಯಿಂದ ಡ್ಯಾನ್ಸ್ ಮಾಡಿಸುತ್ತಿದ್ದಿಯಲ್ಲ ನಿನಗೇನು ಹುಚ್ಚಾ? ಎಂದು ನಾನು ಚಹಾಲ್‌ಗೆ ಕೇಳಿದ್ದೆ ಎಂದು ಸಂಭಾಷಣೆಯಲ್ಲಿ ರೋಹಿತ್ ಪ್ರತಿಕ್ರಿಯಿಸಿದ್ದರು.

 ದಲಿತ ಹಕ್ಕು ಕಾರ್ಯಕರ್ತ ಹಾಗೂ ವಕೀಲ ರಜತ್ ಕಲ್ಸಾನ್ ಅವರು ಯುವರಾಜ್ ವಿರುದ್ಧ ಹಿಸಾರ್‌ನ ಹನ್ಸಿ ಎಂಬಲ್ಲಿ ಪೊಲೀಸ್ ದೂರು ಸಲ್ಲಿಸಿದ್ದಾರೆ. ಯುವರಾಜ್‌ರನ್ನು ಬಂಧಿಸಬೇಕೆಂದು ರಜತ್ ದೂರಿನಲ್ಲಿ ಆಗ್ರಹಿಸಿದ್ದಾರೆ.

ಯುವರಾಜ್ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ಆಲ್‌ರೌಂಡರ್ ತನ್ನ ಹೇಳಿಕೆಗೆ ಕ್ಷಮೆ ಕೋರಬೇಕೆಂದು ಆಗ್ರಹಿಸಲಾಗಿತ್ತು. ‘ಯುವರಾಜ್ ಮಾಫಿ ಮಾಂಗೊ’ ಎನ್ನುವ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಕೆಲವು ದಿನಗಳ ಹಿಂದೆ ಟ್ರೆಂಡ್ ಆಗಿ ಪರಿವರ್ತಿತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News