ದಿಲ್ಲಿ ಹಿಂಸಾಚಾರ ಕುರಿತ ಪೊಲೀಸರ ದೋಷಾರೋಪಪಟ್ಟಿ, ಪಕ್ಷಪಾತಿ ಮತ್ತು ಸತ್ಯದ ಅಣಕ: ಎಸ್‌ಡಿಪಿಐ

Update: 2020-06-05 10:36 GMT

ಹೊಸದಿಲ್ಲಿ, ಜೂ.5: ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಸಲ್ಲಿಸಿದ ದೋಷಾರೋಪಪಟ್ಟಿ, ಪಕ್ಷಪಾತ ಮತ್ತು ಸತ್ಯವನ್ನು ಅಣಕಿಸುವಂತಹದ್ದಾಗಿದ್ದು, ಇದು ಅತ್ಯಂತ ಖಂಡನೀಯವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಫಿ ಟೀಕಿಸಿದ್ದಾರೆ.

ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರ ಪ್ರಚೋದನಕಾರಿ ಕೋಮುದ್ವೇಷದ ಭಾಷಣದ ನಂತರ ಹಿಂಸಾಚಾರ ಭುಗಿಲೆದ್ದಿದೆ. ಕೋಮು ಅಶಾಂತಿ ಮತ್ತು ಮುಸ್ಲಿಂ ಸಮುದಾಯದ ಮುಗ್ಧ ಜೀವಗಳ ಸಾವು ಮತ್ತು ಆಸ್ತಿಪಾಸ್ತಿಗಳ ನಷ್ಟಕ್ಕೆ ಕಪಿಲ್ ಮಿಶ್ರಾ ವಿರುದ್ಧ ಪ್ರಕರಣ ದಾಖಲಿಸುವ ಬದಲು, ಸಿಎಇ ವಿರೋಧಿ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದ ಕಾರ್ಯಕರ್ತರನ್ನು ಪೊಲೀಸರು ಬೆನ್ನಟ್ಟುತ್ತಿದ್ದಾರೆ.

ಸಿಎಎ, ಎನ್‌ಪಿಆರ್ ಮತ್ತು ಎನ್‌ಆರ್‌ಸಿ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದ ಮುಸ್ಲಿಮರಿಗೆ ಪಾಠ ಕಲಿಸಲು ಸರ್ಕಾರ ಬೆಂಬಲಿತ ಹಿಂದುತ್ವ ಪಡೆಗಳು ಈ ಹಿಂಸಾಚಾರವನ್ನು ಸ್ವಯಂ ರೂಪಿಸಿದ್ದವು.

ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಮುಸ್ಲಿಮರು ಮತ್ತು ಕಾರ್ಯಕರ್ತರ ಮೇಲೆ ತಪ್ಪು ಹೊರಿಸುವ ಪ್ರಯತ್ನದ ಭಾಗವಾಗಿ ಮತ್ತು ಸಂಘ ಪರಿವಾರವನ್ನು ಮೆಚ್ಚಿಸಲು ಹಿಂಸಾಚಾರದ ನಿಜವಾದ ಅಪರಾಧಿಗಳನ್ನು ರಕ್ಷಿಸುವ ಪ್ರಯತ್ನದಲ್ಲಿ, ಪೊಲೀಸರು ದೋಷಾರೋಪ ಪಟ್ಟಿಯನ್ನು ತಯಾರಿಸುವಾಗ ಸಿಸಿಟಿವಿ ದೃಶ್ಯಾವಳಿಗಳು, ವಿಡಿಯೋ ತುಣುಕುಗಳು, ಫೋನ್ ಕರೆ ಮುಂತಾದ ಸಾಕ್ಷ್ಯಗಳನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದ್ದಾರೆ.

ಹಿಂದುತ್ವ ದುಷ್ಕರ್ಮಿಗಳು ಬೆಂಕಿ ಹಚ್ಚುತ್ತಿದ್ದಾಗ, ಲೂಟಿ ಮಾಡುತ್ತಿದ್ದಾಗ ಮತ್ತು ಮುಗ್ಧ ಮುಸ್ಲಿಮರನ್ನು ಕೊಲ್ಲುತ್ತಿದ್ದಾಗ ದಿಲ್ಲಿ ಪೊಲೀಸರು ಕುರುಡರಂತೆ ವರ್ತಿಸಿದ್ದರು. ದಿಲ್ಲಿ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ವಿಚಾರಣಾ ಆಯೋಗವನ್ನು ರಚಿಸಬೇಕು ಎಂದು ಶಾಫಿ ಒತ್ತಾಯಿಸಿದ್ದು, ಇದರಿಂದ ಮಾತ್ರ ನ್ಯಾಯಯುತ ವಿಚಾರಣೆ ನಡೆಯಬಹುದು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸಾಧ್ಯವಾಗಬಹುದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News