“ನಮ್ಮ ಕುತ್ತಿಗೆಗಳಿಂದ ನಿಮ್ಮ ಮೊಣಕಾಲು ತೆಗೆಯಿರಿ ಎಂದು ಹೇಳುವ ಸಮಯವಿದು”

Update: 2020-06-05 16:19 GMT

ಮಿನಪೊಲಿಸ್ (ಅಮೆರಿಕ), ಜೂ. 5: ಕಳೆದ ವಾರ ಪೊಲೀಸರ ಬಂಧನದ ವೇಳೆ ಉಸಿರುಗಟ್ಟಿ ಅಸು ನೀಗಿದ ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡಾಗೆ ಗುರುವಾರ ಮಿನಪೊಲಿಸ್ ನಗರದಲ್ಲಿ ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸೇರಿದ ನೂರಾರು ಮಂದಿ ಮೃತ ವ್ಯಕ್ತಿಗೆ ಶಾಂತಿ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಫ್ಲಾಯ್ಡ್ ಕುಟುಂಬದ ವಕೀಲ ಬೆಂಜಮಿನ್ ಕ್ರಂಪ್, ಜಾರ್ಜ್ ಫ್ಲಾಯ್ಡ್ ರನ್ನು ಕೊಂದದ್ದು ಕೊರೋನ ವೈರಸ್ ಅಲ್ಲ. ಅದು ಬೇರೆ ರೀತಿಯ ವೈರಸ್. ಜನಾಂಗೀಯ ವಾದ ಮತ್ತು ತಾರತಮ್ಯದ ವೈರಸ್ ಎಂದು ಹೇಳಿದರು.

ಜಾಗತಿಕ ಪ್ರತಿಭಟನೆಗಳಿಗೆ ಕಾರಣವಾದ ವ್ಯಕ್ತಿಗೆ ಪ್ರತಿಷ್ಠಿತ ವ್ಯಕ್ತಿಗಳು, ಸಂಗೀತಗಾರರು, ರಾಜಕೀಯ ನಾಯಕರು ಹಾಗೂ ಇತರರು ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜನರು 8 ನಿಮಿಷ 46 ಸೆಕೆಂಡ್‌ಗಳ ಕಾಲ ಮೌನವಾಗಿ ನಿಂತರು. ಇಷ್ಟೇ ಹೊತ್ತು ಪೊಲೀಸ್ ಅಧಿಕಾರಿ ಡೆರೆಕ್ ಶಾವಿನ್, ಫ್ಲಾಯ್ಡ್ ರ ಕುತ್ತಿಗೆಯ ಮೇಲೆ ಮೊಣಕಾಲೂರಿ ಕೂತಿದ್ದರು. ಈ ದೃಶ್ಯವು ಸ್ಥಳದಲ್ಲಿದ್ದವರೊಬ್ಬರು ತೆಗೆದ ವೀಡಿಯೊದಲ್ಲಿ ಬಹಿರಂಗವಾಗಿದೆ.

“ಜಾರ್ಜ್‌ರ ಹೆಸರಲ್ಲಿ ಎದ್ದು ನಿಂತು, ನಮ್ಮ ಕುತ್ತಿಗೆಗಳಿಂದ ನಿಮ್ಮ ಮೊಣಕಾಲನ್ನು ತೆಗೆಯಿರಿ ಎಂದು ನಾವು ಹೇಳುವ ಸಮಯವಿದು” ಎಂದು ನಾಗರಿಕ ಹಕ್ಕುಗಳ ಹೋರಾಟಗಾರ ಆ್ಯಲ್ ಶಾರ್ಪ್‌ಟನ್ ಈ ಸಂದರ್ಭದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

“ನೀವು ಜಗತ್ತನ್ನು ಬದಲಾಯಿಸಿದಿರಿ, ಜಾರ್ಜ್. ನಾವು ಹೋರಾಟವನ್ನು ಮುಂದುವರಿಸುತ್ತೇವೆ. ಇಡೀ ನ್ಯಾಯ ವ್ಯವಸ್ಥೆಯನ್ನು ಬದಲಾಯಿಸಲು ನಮಗೆ ಸಾಧ್ಯವಾಗುವವರೆಗೆ ನಾವು ಹೋರಾಟವನ್ನು ಮುಂದುವರಿಸುತ್ತೇವೆ” ಎಂದರು.

ಸತತ 10ನೇ ರಾತ್ರಿಯೂ ಕರಾವಳಿಯಿಂದ ಕರಾವಳಿವರೆಗೆ ಪ್ರತಿಭಟನೆ

ಪೊಲೀಸ್ ಕಸ್ಟಡಿಯಲ್ಲಿ ಆಫ್ರಿಕನ್ ಅಮೆರಿಕನ್ ಜಾರ್ಜ್ ಫ್ಲಾಯ್ಡಾ ಮೃತಪಟ್ಟಿರುವುದನ್ನು ಪ್ರತಿಭಟಿಸಿ ಗುರುವಾರ ಸತತ 10ನೇ ರಾತ್ರಿಯೂ ಅಮೆರಿಕದ ಒಂದು ಕರಾವಳಿಯಿಂದ ಇನ್ನೊಂದು ಕರಾವಳಿವರೆಗೆ ಬೃಹತ್ ಪ್ರತಿಭಟನೆಗಳು ನಡೆದವು. ಪ್ರತಿಭಟನೆಗಳು ಬಹುತೇಕ ಶಾಂತಿಯುತವಾಗಿದ್ದವು.

ನ್ಯೂಯಾರ್ಕ್‌ನಲ್ಲಿ ಸಾವಿರಾರು ಮಂದಿ ಬ್ರೂಕ್ಲಿನ್ ಸೇತುವೆಯಲ್ಲಿ ಮೆರವಣಿಗೆಯಲ್ಲಿ ಸಾಗಿದರು. ವಾಶಿಂಗ್ಟನ್ ಡಿಸಿ, ಸಿಯಾಟಲ್ ಮತ್ತು ಲಾಸ್ ಏಂಜಲಿಸ್‌ನಲ್ಲು ಜನರು ಭಾರೀ ಸಂಖ್ಯೆಯಲ್ಲಿ ಬೀದಿಗಿಳಿದರು.

ಈ ನಗರಗಳಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ತೆರವುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News