ಭಾರತದ ಗಡಿ ಉಸ್ತುವಾರಿಗೆ ನೂತನ ಕಮಾಂಡರ್ ನೇಮಿಸಿದ ಚೀನಾ

Update: 2020-06-05 17:38 GMT

ಹೊಸದಿಲ್ಲಿ, ಜೂ. 5: ಗಡಿ ಬಿಕ್ಕಟ್ಟನ್ನು ಅಂತ್ಯಗೊಳಿಸುವ ಉದ್ದೇಶದಿಂದ ಶನಿವಾರ ಉಭಯ ದೇಶಗಳ ಹಿರಿಯ ಸೇನಾಧಿಕಾರಿಗಳ ಮಧ್ಯೆ ಮಹತ್ವದ ಸಭೆ ನಿಗದಿಯಾಗಿರುವ ಮಧ್ಯೆಯೇ, ಭಾರತ-ಚೀನಾ ಗಡಿಯಲ್ಲಿ ಉಸ್ತುವಾರಿ ನಿರ್ವಹಿಸುವ ಉದ್ದೇಶದಿಂದ ಚೀನಾವು ತನ್ನ ವೆಸ್ಟರ್ನ್ ಥಿಯೇಟರ್ ಕಮಾಂಡ್ ಗ್ರೌಂಡ್(ಪಶ್ಚಿಮ ಸೇನಾ ಕಮಾಂಡ್ ವಿಭಾಗ)ಗೆ ನೂತನ ಸೇನಾ ಕಮಾಂಡರ್ ಅನ್ನು ನೇಮಿಸಿದೆ.

ಲೆಫ್ಟಿನೆಂಟ್ ಜನರಲ್ ಕ್ಸುಕ್ವಿಲಿಂಗ್‌ರನ್ನು ವೆಸ್ಟರ್ನ್ ಥಿಯೇಟರ್ ಕಮಾಂಡ್ ಗ್ರೌಂಡ್ ಸೇನಾಪಡೆಯ ಹೊಸ ಕಮಾಂಡರ್ ಆಗಿ ನೇಮಿಸಲಾಗಿದೆ ಎಂದು ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ)ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಘೋಷಿಸಲಾಗಿದೆ. ಇದಕ್ಕೂ ಮುನ್ನ ಕ್ಸುಕ್ವಿಲಿಂಗ್ ಈಸ್ಟರ್ನ್ ಥಿಯೇಟರ್ ಕಮಾಂಡರ್‌ನಲ್ಲಿ ಕಾರ್ಯ ನಿರ್ವಹಿಸಿದ್ದರು.

ಭಾರತದೊಂದಿಗಿನ 3,488 ಕಿ.ಮೀ ವ್ಯಾಪ್ತಿಯ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಪಿಎಲ್‌ಎಯ ವೆಸ್ಟರ್ನ್ ಥಿಯೇಟರ್ ಕಮಾಂಡ್ ಪಹರೆಕಾರ್ಯ ನಿರ್ವಹಿಸುತ್ತಿದೆ. ಇದು ಭೂಸೇನೆ, ವಾಯುಪಡೆ, ರಾಕೆಟ್ ಪಡೆಯನ್ನು ಹೊಂದಿದ್ದು ಜ. ಝಾವೊ ರೊಂಗ್‌ಕ್ವಿ ನೇತೃತ್ವದಡಿ ಕಾರ್ಯ ನಿರ್ವಹಿಸುತ್ತಿದೆ.

ಉಭಯ ಸೇನೆಯ ಲೆಫ್ಟಿನೆಂಟ್ ಜನರಲ್ ಗಳ ನೇತೃತ್ವದಲ್ಲಿ ಶನಿವಾರ ನಡೆಯಲಿರುವ ಸಭೆಯು ಭಾರತ-ಚೀನಾ ಸೇನೆಗಳ ಮಧ್ಯೆ ನಡೆಯುತ್ತಿರುವ ಪ್ರಥಮ ವಿಸ್ತೃತ ಮಾತುಕತೆಯಾಗಿದ್ದು , ಪೂರ್ವ ಲಡಾಖ್ ವಲಯದಲ್ಲಿ ತಿಂಗಳಿನಿಂದ ಮುಂದುವರಿದಿರುವ ಬಿಕ್ಕಟ್ಟಿನ ನಿವಾರಣೆಯ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ.

ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್‌ನ ಭಾಗವಾಗಿದೆ ಎಂಬುದು ಚೀನಾದ ವಾದವಾಗಿದ್ದರೆ, ಭಾರತ ಇದನ್ನು ವಿರೋಧಿಸುತ್ತಿದೆ. ಗಡಿ ವಿವಾದ ಇತ್ಯರ್ಥವಾದರೆ ಮಾತ್ರ ಗಡಿಭಾಗದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂದು ಉಭಯ ದೇಶಗಳೂ ಹೇಳಿವೆ.

ಗಡಿವಿವಾದ ಸೂಕ್ತ ರೀತಿಯಲ್ಲಿ ಇತ್ಯರ್ಥಕ್ಕೆ ಬದ್ಧ: ಚೀನಾ

ಭಾರತದೊಂದಿಗಿರುವ ಪ್ರಸಕ್ತ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ತಾನು ಬದ್ಧನಾಗಿರುವುದಾಗಿ ಚೀನಾ ಹೇಳಿದೆ.

ಬೀಜಿಂಗ್‌ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಚೀನಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಜೆಂಗ್ ಶುವಾಂಗ್, ಸದ್ಯಕ್ಕೆ ಚೀನಾ ಮತ್ತು ಭಾರತದ ನಡುವಿನ ಗಡಿಪ್ರದೇಶದಲ್ಲಿ ಪರಿಸ್ಥಿತಿ ಒಟ್ಟಾರೆಯಾಗಿ ಸ್ಥಿರ ಮತ್ತು ನಿಯಂತ್ರಿಸಬಹುದಾದ ಸ್ಥಿತಿಯಲ್ಲಿದೆ ಎಂದರು.

ನಮ್ಮಲ್ಲಿ ಪೂರ್ಣ ಪ್ರಮಾಣದ ಗಡಿ ಸಂಬಂಧಿತ ಕಾರ್ಯವಿಧಾನಗಳಿವೆ ಮತ್ತು ನಾವು ಮಿಲಿಟರಿ ಮತ್ತು ರಾಜತಾಂತ್ರಿಕ ಸಾಧನಗಳ ಮೂಲಕ ನಿಕಟ ಸಂವಹನ ನಡೆಸುತ್ತೇವೆ. ಗಡಿ ವಿವಾದವನ್ನು ಸೂಕ್ತ ರೀತಿಯಲ್ಲಿ ಇತ್ಯರ್ಥಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News