ಟ್ವೆಂಟಿ-20 ವಿಶ್ವಕಪ್ ಆಯೋಜಿಸಲು ಐಸಿಸಿ ಸೂಕ್ತ ಸಮಯಕ್ಕಾಗಿ ಕಾಯಬೇಕು: ವಸೀಂ ಅಕ್ರಂ

Update: 2020-06-05 18:00 GMT

ಕರಾಚಿ, ಜೂ.5: ಕೋವಿಡ್-19 ಸಾಂಕ್ರಾಮಿಕ ರೋಗ ಕಡಿಮೆಯಾದ ಬಳಿಕ ಪ್ರತಿಷ್ಠಿತ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲು ಐಸಿಸಿ ಸೂಕ್ತ ಸಮಯಕ್ಕಾಗಿ ಕಾಯಬೇಕು ಎಂದು ಪಾಕಿಸ್ತಾನದ ವೇಗದ ದಂತಕತೆ ವಸೀಂ ಅಕ್ರಂ ಸಲಹೆ ನೀಡಿದ್ದಾರೆ.

ಕೊರೋನ ವೈರಸ್‌ನಿಂದಾಗಿ ಪ್ರಯಾಣದ ನಿರ್ಬಂಧವಿರುವ ಕಾರಣ ಆಸ್ಟ್ರೇಲಿಯದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಿಗದಿಯಾಗಿರುವ ಟ್ವೆಂಟಿ-20 ವಿಶ್ವಕಪ್ ಮುಂದೂಡಿಕೆಯಾಗಲಿದೆ ಎಂಬ ಊಹಾಪೋಹ ಕೇಳಿಬರುತ್ತಿದೆ.

‘‘ಮುಚ್ಚಿದ ಬಾಗಿಲೊಳಗೆ ವಿಶ್ವಕಪ್‌ನ್ನು ಆಯೋಜಿಸುವುದು ನನ್ನ ಪ್ರಕಾರ ಉತ್ತಮ ಯೋಚನೆಯಲ್ಲ. ಪ್ರೇಕ್ಷಕರೇ ಇಲ್ಲದೆ ಕ್ರಿಕೆಟ್ ವಿಶ್ವಕಪ್‌ನ್ನು ಆಯೋಜಿಸುವುದಾದರೂ ಹೇಗೆ? ವಿಶ್ವಕಪ್‌ನಲ್ಲಿ ಸಹಜವಾಗಿ ದೊಡ್ಡ ಪ್ರಮಾಣದಲ್ಲಿ ಪ್ರೇಕ್ಷಕರು ಸೇರುತ್ತಾರೆ. ತಮ್ಮ ತಂಡಗಳನ್ನು ಬೆಂಬಲಿಸಲು ವಿಶ್ವದ ಎಲ್ಲ ಭಾಗಗಳಿಂದ ಕ್ರಿಕೆಟ್ ಅಭಿಮಾನಿಗಳು ಬರುತ್ತಾರೆ. ಹೀಗಾಗಿ ಮುಚ್ಚಿದ ಬಾಗಿಲಲ್ಲಿ ಟೂರ್ನಿ ಆಯೋಜಿಸಲು ಸಾಧ್ಯವಿಲ್ಲ’’ಎಂದು ವಸೀಂ ಅಭಿಪ್ರಾಯಪಟ್ಟರು.

ಮೇ 28ರಂದು ಸಭೆ ಸೇರಿದ್ದ ಐಸಿಸಿ ಮಂಡಳಿ ಟ್ವೆಂಟಿ-20 ವಿಶ್ವಕಪ್ ಕುರಿತ ತನ್ನ ನಿರ್ಧಾರವನ್ನು ಜೂನ್ 10ರ ತನಕ ಮುಂದೂಡಿದೆ. ಕೊರೋನದಿಂದಾಗಿ ವಿಶ್ವವ್ಯಾಪಿ ಕ್ರೀಡಾಚಟುವಟಿಕೆಗಳು ಸಂಪೂರ್ಣ ಹಳಿ ತಪ್ಪಿವೆ.

‘‘ಐಸಿಸಿ ಸೂಕ್ತ ಸಮಯಕ್ಕಾಗಿ ಕಾಯಬೇಕೆನ್ನುವುದು ನನ್ನ ಅನಿಸಿಕೆ. ಸಾಂಕ್ರಾಮಿಕ ರೋಗ ಕಡಿಮೆಯಾದ ಬಳಿಕ ಹಾಗೂ ನಿರ್ಬಂಧಗಳು ಸಡಿಲಿಕೆಯಾದ ಮೇಲೆ ನಾವು ಸರಿಯಾಗಿ ವಿಶ್ವಕಪ್‌ನ್ನು ಆಯೋಜಿಸಬಹುದು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News