ಜೂನ್ 11ರಂದು ಉಮರ್ ಅಕ್ಮಲ್ ಮೇಲ್ಮನವಿ ವಿಚಾರಣೆ

Update: 2020-06-05 18:16 GMT

ಕರಾಚಿ, ಜೂ.5: ಮೂರು ವರ್ಷಗಳ ನಿಷೇಧ ವಿರುದ್ಧ ಬ್ಯಾಟ್ಸ್ ಮನ್ ಉಮರ್ ಅಕ್ಮಲ್ ಸಲ್ಲಿಸಿರುವ ಮೇಲ್ಮನವಿಯನ್ನು ಜೂನ್ 11ರಂದು ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶ ಜಸ್ಟಿಸ್(ನಿವೃತ್ತ)ಫಕೀರ್ ಮುಹಮ್ಮದ್ ಖೋಖರ್ ಸ್ವತಂತ್ರ ತೀರ್ಪುಗಾರರಾಗಿ ವಿಚಾರಣೆ ನಡೆಸಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಶುಕ್ರವಾರ ಪ್ರಕಟಿಸಿದೆ.

ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್)ಪಂದ್ಯಗಳ ವೇಳೆ ತನ್ನನ್ನು ಬುಕ್ಕಿಗಳು ಸಂಪರ್ಕಿಸಿರುವ ವಿಚಾರವನ್ನು ಪಿಸಿಬಿಗೆ ಮಾಹಿತಿ ನೀಡದ ಕಾರಣಕ್ಕೆ ಎಪ್ರಿಲ್ 27ರಂದು ಪಿಸಿಬಿಯ ಶಿಸ್ತು ಸಮಿತಿಯು ಅಕ್ಮಲ್‌ಗೆ ಮೂರು ವರ್ಷಗಳ ನಿಷೇಧ ಹೇರಿತ್ತು.

‘‘ವಿಚಾರಣೆ ಕುರಿತು ನೋಟಿಸ್‌ಗಳನ್ನು ಉಮರ್ ಅಕ್ಮಲ್ ಹಾಗೂ ಪಿಸಿಬಿಗೆ ಕಳುಹಿಸಿಕೊಡಲಾಗಿದೆ’’ ಎಂದು ಕ್ರಿಕೆಟ್ ಮಂಡಳಿಯು ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಪಿಸಿಬಿ ಭ್ರಷ್ಟಾಚಾರ ನಿಗ್ರಹ ನೀತಿಸಂಹಿತೆಯನ್ನು ಉಲ್ಲಂಘಿಸಿರುವ ಆರೋಪದಲ್ಲಿ ಹೇರಲಾಗಿರುವ ನಿಷೇಧವನ್ನು ಪ್ರಶ್ನಿಸಿ ಅಕ್ಮಲ್ ಮೇಲ್ಮನವಿ ಸಲ್ಲಿಸಿದ್ದರು.

ಲಾಹೋರ್‌ನ ಡಿಫೆನ್ಸ್ ಹೌಸಿಂಗ್ ಸೊಸೈಟಿಯಲ್ಲಿ ನಡೆದಿದ್ದ ಪ್ರತ್ಯೇಕ ಪಾರ್ಟಿಗಳಲ್ಲಿ ಅಕ್ಮಲ್‌ಗೆ ಸ್ಪಾಟ್ ಫಿಕ್ಸಿಂಗ್ ಆಫರ್‌ಗಳನ್ನು ನೀಡಲಾಗಿತ್ತು. ವಿವಾದಿತ ಆಟಗಾರ ಅಕ್ಮಲ್ 2019ರ ಅಕ್ಟೋಬರ್‌ನಲ್ಲಿ ಸ್ವದೇಶದಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಬಾರಿ ಟ್ವೆಂಟಿ-20 ಸರಣಿಯನ್ನು ಆಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News