ವಾಷಿಂಗ್ಟನ್: ಕಪ್ಪು ವರ್ಣದವರಿಗೆ ಆಡಳಿತ ಮಂಡಳಿಯಲ್ಲಿ ಸ್ಥಾನ ನೀಡಲು ಹುದ್ದೆ ತೊರೆದ ರೆಡ್ಡಿಟ್ ಸಹಸಂಸ್ಥಾಪಕ

Update: 2020-06-06 04:03 GMT

ವಾಷಿಂಗ್ಟನ್: ತಂತ್ರಜ್ಞಾನ ಸಂಸ್ಥೆ ರೆಡ್ಡಿಟ್ ಸಹಸಂಸ್ಥಾಪಕ ಅಲೆಕ್ಸಿಸ್ ಒಹನಿಯನ್ ಆಡಳಿತ ಮಂಡಳಿಯ ಸ್ಥಾನಕ್ಕೆ ರಾಜೀನಾಮೆ ನೀಡಿ, ಈ ಹುದ್ದೆಗೆ ಕಪ್ಪುವರ್ಣದವರೊಬ್ಬರನ್ನು ನೇಮಕ ಮಾಡಿಕೊಳ್ಳುವಂತೆ ಕಂಪನಿಗೆ ಸೂಚಿಸಿದ್ದಾರೆ.

ರೆಡ್ಡಿಟ್ ಷೇರುಗಳಿಂದ ಭವಿಷ್ಯದಲ್ಲಿ ಬರುವ ಲಾಭವನ್ನು ಕಪ್ಪುವರ್ಣದವರ ಸೇವೆಗಾಗಿ ಮುಡಿಪಾಗಿಡುವ ಮಹತ್ವದ ನಿರ್ಧಾರವನ್ನೂ ಅವರು ಪ್ರಕಟಿಸಿದ್ದಾರೆ. “ನೀವು ಏನು ಮಾಡಿದ್ದೀರಿ” ಎಂದು ಕಪ್ಪುವರ್ಣದ ಮಗಳು ಕೇಳಿದಾಗ ಜವಾಬ್ದಾರಿಯುತ ತಂದೆಯಾಗಿ ಉತ್ತರಿಸಲು ಸಾಧ್ಯವಾಗುವಂತೆ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಸರಣಿ ಟ್ವೀಟ್‍ನಲ್ಲಿ ಹೇಳಿದ್ದಾರೆ.

ಅಮೆರಿಕದಲ್ಲಿ ಪೊಲೀಸ್ ದೌರ್ಜನ್ಯ ಮತ್ತು ವರ್ಣ ತಾರತಮ್ಯದ ವಿರುದ್ಧ ಅಮೆರಿಕದಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಒಹಾನಿಯನ್ ಈ ನಿರ್ಧಾರ ಪ್ರಕಟಿಸಿದ್ದಾರೆ. 

ಟೆನಿಸ್ ಚಾಂಪಿಯನ್ ಹಾಗೂ ಕೃಷ್ಣಸುಂದರಿ ಸೆರೆನಾ ವಿಲಿಯಮ್ಸ್ ಅವರನ್ನು ವಿವಾಹವಾಗಿದ್ದ ಒಹಾನಿಯನ್, ಕೊಲಿನ್ ಕೇಪರ್‍ನಿಕ್ ಆರಂಭಿಸಿರುವ ಸ್ವಯಂಸೇವಾ ಸಂಸ್ಥೆ “ನೋ ಯುವರ್ ರೈಟ್ಸ್”ಗೆ 10 ಲಕ್ಷ ಡಾಲರ್ ದೇಣಿಗೆ ನೀಡುತ್ತಿರುವುದಾಗಿಯೂ ವಿವರಿಸಿದ್ದಾರೆ. “ನನ್ನ ರಾಜೀನಾಮೆ ಅಧಿಕಾರದಲ್ಲಿರುವವರ ನಾಯಕತ್ವದ ಕ್ರಮ” ಎಂದು ಬಣ್ಣಿಸಿರುವ ಅವರು ಒಡೆದ ದೇಶವನ್ನು ಸರಿಪಡಿಸುವ ಹೋರಾಟದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಕರೆ ನೀಡಿದ್ದಾರೆ.

ಒಹಾನಿಯನ್ 15 ವರ್ಷ ಹಿಂದೆ ಸಹಪಾಠಿ ಅರನ್ ಸ್ವಟ್ಸ್ ಮತ್ತು ಸ್ಟೀವ್ ಹಾಫ್‍ಮನ್ ಜತೆಗೆ ಸಾಮಾಜಿಕ ಜಾಲತಾಣ ರೆಡ್ಡಿಟ್ ಆರಂಭಿಸಿದ್ದರು. 2018ರಲ್ಲಿ ದೈನಂದಿನ ಕರ್ತವ್ಯದಿಂದ ಹೊರಬಂದರೂ ಆಡಳಿತ ಮಂಡಳಿಯಲ್ಲಿ ಇದುವರೆಗೆ ಮುಂದುವರಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News