ಕೋಮು ದ್ವೇಷ ಹರಡಿದ ಆರೋಪ: ಅರ್ನಬ್ ಗೋಸ್ವಾಮಿ ವಿರುದ್ಧ ಕೇಬಲ್ ಟಿವಿ ಕಾಯ್ದೆಯಡಿ ದೂರು

Update: 2020-06-06 12:56 GMT

ಪುಣೆ: ಪುಣೆ ಮೂಲದ ಸಾಮಾಜಿಕ ಹೋರಾಟಗಾರ ನೀಲೇಶ್ ನವ್ಲಾಖ ಅವರು ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಕೇಬಲ್ ಟೆಲಿವಿಷನ್ ನೆಟ್ವರ್ಕ್( ನಿಯಂತ್ರಣ) ಕಾಯಿದೆ 1995 ಇದರ ಸೆಕ್ಷನ್ 2 ಅನ್ವಯ ದೂರು ದಾಖಲಿಸಿದ್ದಾರೆ. ಅರ್ನಬ್ ಅವರ ಸುದ್ದಿ ವಾಹಿನಿಯನ್ನು ಕೋಮು ದ್ವೇಷ, ಧಾರ್ಮಿಕ ಧ್ರುವೀಕರಣಕ್ಕಾಗಿ ಬಳಸಲಾಗುತ್ತಿದೆ ಹಾಗೂ ಈ ದೇಶದ ಸಮಗ್ರತೆಗೆ ಅದು ಬೆದರಿಕೆಯೊಡ್ಡುತ್ತಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಈ ದೂರನ್ನು ಕಳೆದ ತಿಂಗಳು ತಮ್ಮ ವಕೀಲರ ಮೂಲಕ ನವ್ಲಾಖ ದಾಖಲಿಸಿದ್ದರು. ದೂರಿನಲ್ಲಿ ಅರ್ನಬ್ ಗೋಸ್ವಾಮಿ ಅವರ ಸುದ್ದಿ ವಾಹಿನಿಯ ಆರು ಪ್ರಮುಖ ಹಾಗೂ ಇತ್ತೀಚಿಗಿನ ಚರ್ಚಾ ಕಾರ್ಯಕ್ರಮಗಳ ವಿವರ ನೀಡಲಾಗಿದ್ದು, “ಈ ಕಾರ್ಯಕ್ರಮಗಳಲ್ಲಿ  ಬಳಸಲಾದ ಪದಗಳು ಮತೀಯವಾಗಿತ್ತಲ್ಲದೆ, ಈ ಪದಗಳನ್ನೇ ಅವರು ಮತ್ತೆ ಮತ್ತೆ ಬಳಸುತ್ತಿದ್ದರು. ಈ ಪದಗಳು ಹಾಗೂ ಅವುಗಳನ್ನು ಬಳಸಿದ ರೀತಿಯಿಂದ ಅವರು ಮತೀಯ ಭಾವನೆಗಳನ್ನು ಕೆರಳಿಸಲು ಬಳಸಿದ್ದಾರೆ ಹಾಗೂ ಸುದ್ದಿಗಳು ಅರ್ಧ ಸತ್ಯವಾಗಿವೆ'' ಎಂದು ದೂರುದಾರರು ಆರೋಪಿಸಿದ್ದಾರೆ.

ಗೋಸ್ವಾಮಿ ಮತ್ತವರ ವಾಹಿನಿಯು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿದೆ ಹಾಗೂ ಅವರ ಸುದ್ದಿ ವಾಹಿನಿಯು  ಸ್ವತಂತ್ರ ಮಾಧ್ಯಮಕ್ಕೆ ದೊಡ್ಡ ಬೆದರಿಕೆಯಾಗಿದೆ. ಅದು ವೀಕ್ಷಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಉಲ್ಲಂಘಿಸಿದೆ. ಸತ್ಯ ಹಾಗೂ ನಿಖರ ಮಾಹಿತಿ ಪಡೆಯುವುದು ವೀಕ್ಷಕರ ಹಕ್ಕಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News