ಜನಾಂಗೀಯ ಸಮಾನತೆಗೆ ಬೆಂಬಲ ಸೂಚಿಸಿ ಮಂಡಿಯೂರಿ ಕುಳಿತ ಕೆನಡ ಪ್ರಧಾನಿ

Update: 2020-06-06 17:05 GMT

ಒಟ್ಟಾವ (ಕೆನಡ), ಜೂ. 6: ಜನಾಂಗೀಯ ತಾರತಮ್ಯ ಮತ್ತು ಪೊಲೀಸ್ ಕ್ರೌರ್ಯದ ವಿರುದ್ಧ ಅಮೆರಿಕದಲ್ಲಿ ಪ್ರತಿಭಟನೆ ನಡೆಸುತ್ತಿರುವವರಿಗೆ ಬೆಂಬಲ ಸೂಚಿಸಿ ಕೆನಡ ರಾಜಧಾನಿ ಒಟ್ಟಾವದಲ್ಲಿರುವ ಸಂಸತ್‌ನ ಎದುರು ಶುಕ್ರವಾರ ಸಾವಿರಾರು ಮಂದಿ ಮಂಡಿಯೂರಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊ ಕೂಡ ಪ್ರತಿಭಟನಕಾರರೊಂದಿಗೆ ಮಂಡಿಯೂರಿ ಕುಳಿತು ಬೆಂಬಲ ಸೂಚಿಸಿದರು.

ಇತ್ತೀಚೆಗೆ ಅಮೆರಿಕದ ಮಿನಪೊಲಿಸ್ ನಗರದಲ್ಲಿ ನಿರಾಯುಧ ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ರನ್ನು ಬಂಧಿಸುವ ವೇಳೆ, ಪೊಲೀಸ್ ಅಧಿಕಾರಿಯೊಬ್ಬರು ಅವರ ಕುತ್ತಿಗೆಯ ಮೇಲೆ ಮಂಡಿಯೂರಿ ಕುಳಿತು ಅವರ ಸಾವಿಗೆ ಕಾರಣರಾಗಿದ್ದರು. ಆಡಳಿತದ ಜನಾಂಗೀಯ ತಾರತಮ್ಯ ಧೋರಣೆಯನ್ನು ವಿರೋಧಿಸಿ ಅಮೆರಿಕದಲ್ಲಿ ಹಾಗೂ ಇತರ ಹಲವಾರು ದೇಶಗಳಲ್ಲೂ ವ್ಯಾಪಕವಾಗೊ ಪ್ರತಿಭಟನೆಗಳು ನಡೆಯುತ್ತಿವೆ.

ಕೆನಡದಲ್ಲೂ ಪೊಲೀಸರನ್ನು ನೋಡಿದಾಗ ಹೆಚ್ಚಿನ ಸಂಖ್ಯೆಯ ಜನರು ಹೆದರುತ್ತಾರೆ ಎಂಬುದಾಗಿ ಇದಕ್ಕೂ ಮುನ್ನ ತನ್ನ ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರೂಡೊ ಹೇಳಿದರು.

ಮುಖ ಕವಚ ಧರಿಸಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಎಂದು ಬರೆದ ಟಿ-ಶರ್ಟನ್ನು ಹಿಡಿದುಕೊಂಡ ಟ್ರೂಡೊ, ಇತರ ಪ್ರತಿಭಟನಕಾರರೊಂದಿಗೆ ಘೋಷಣೆಗಳನ್ನು ಕೂಗಿದರು. ಅಮೆರಿಕ ರಾಯಭಾರ ಕಚೇರಿಯಿಂದ ಅನತಿ ದೂರದಲ್ಲಿ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಟ್ರೂಡೊ ಪ್ರತಿಭಟನಕಾರರೊಂದಿಗೆ 8 ನಿಮಿಷ 46 ಸೆಕೆಂಡ್‌ಗಳ ಕಾಲ ವೌನಾಚರಣೆ ನಡೆಸಿದರು. ಇಷ್ಟು ಸಮಯ ಪೊಲೀಸ್ ಅಧಿಕಾರಿಯು ಜಾರ್ಜ್ ಫ್ಲಾಯ್ಡಾರ ಕುತ್ತಿಗೆಯನ್ನು ಒತ್ತಿ ಹಿಡಿದಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News