ವಿವಿಧತೆಯ ಮಹತ್ವ ಸಾರುವ ಐಸಿಸಿ ವೀಡಿಯೊ ಹಂಚಿಕೊಂಡ ತೆಂಡುಲ್ಕರ್

Update: 2020-06-07 06:19 GMT

ಹೊಸದಿಲ್ಲಿ: ಜಗತ್ತನ್ನು ಬದಲಿಸುವ ಶಕ್ತಿ ಕ್ರೀಡೆಗೆ ಹೇಗೆ ಇದೆ ಎಂಬುದರ ಕುರಿತು ವಿವರಿಸಲು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲ ಅವರ ಉಲ್ಲೇಖವನ್ನು ಲೆಜೆಂಡರಿ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ ಶನಿವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಮೆರಿಕದಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಆಫ್ರಿಕ-ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ರನ್ನು ಕುತ್ತಿಗೆ ಮೇಲೆ ಮೊಣಕಾಲಿಟ್ಟು ಉಸಿರುಗಟ್ಟಿಸಿ ಸಾಯಲು ಕಾರಣವಾದ ಬಳಿಕ ಅಮೆರಿಕಾದ್ಯಂತ ‘ಬ್ಲಾಕ್ ಲೈವ್ಸ್ ಮ್ಯಾಟರ್’ಪ್ರತಿಭಟನೆ ನಡೆಯುತ್ತಿರುವಾಗಲೇ ತೆಂಡುಲ್ಕರ್ ಈ ಪೋಸ್ಟ್ ಹಂಚಿಕೊಂಡಿದ್ದಾರೆ.

 ತೆಂಡುಲ್ಕರ್ ಅವರು ಮಂಡೇಲ ಅವರ ಉಲ್ಲೇಖದ ಜೊತೆಗೆ ಐಸಿಸಿ ಪೋಸ್ಟ್ ಮಾಡಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನೆಲ್ಸನ್ ಮಂಡೇಲ ಒಮ್ಮೆ‘‘ಕ್ರೀಡೆಗೆ ಜಗತ್ತನ್ನೇ ಬದಲಿಸುವ ಹಾಗೂ ಒಗ್ಗೂಡಿಸುವ ಶಕ್ತಿ ಇದೆ ಎಂದಿದ್ದರು. ಇದು ಎಂತಹ ವಿವೇಕದ ನುಡಿ’’ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

2019ರ ಪುರುಷರ ಏಕದಿನ ವಿಶ್ವಕಪ್ ಫೈನಲ್‌ನ ವೀಡಿಯೊ ಇದಾಗಿದೆ. ವಿಶ್ವಕಪ್‌ನ್ನು ಇಂಗ್ಲೆಂಡ್ ಗೆದ್ದುಕೊಂಡಿತ್ತು.

 ‘‘ವಿವಿಧತೆ ಇಲ್ಲದೆ ಕ್ರಿಕೆಟ್ ಏನೂ ಇಲ್ಲ. ವಿವಿಧತೆೆ ಇಲ್ಲದೆ ನಿಮ್ಮ ಸಂಪೂರ್ಣ ಚಿತ್ರ ಸಿಗುವುದಿಲ್ಲ’’ಎಂದು ವೀಡಿಯೊಗೆ ಐಸಿಸಿ ಶೀರ್ಷಿಕೆ ನೀಡಿತ್ತು. ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ ನಡುವೆ ನಡೆದಿದ್ದ 2019ರ ವಿಶ್ವಕಪ್ ಫೈನಲ್ ಆಯ್ದ ಭಾಗವನ್ನು ವೀಡಿಯೊದಲ್ಲಿ ಐಸಿಸಿ ಬಳಸಿತ್ತು. ವೀಡಿಯೊದಲ್ಲಿ ಜೋಫ್ರಾ ಆರ್ಚರ್ ಟೂರ್ನಮೆಂಟ್‌ನ ಕೊನೆಯ ಎಸೆತವನ್ನು ಎಸೆಯುವ ದೃಶ್ಯವಿತ್ತು. ಕಪು ್ಪವರ್ಣದ ವೆಸ್ಟ್‌ಇಂಡೀಸ್ ಮೂಲದ ಆಟಗಾರ ಆರ್ಚರ್ 2019ರ ಮೇ ನಲ್ಲಿ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ಇಂಗ್ಲೆಂಡ್‌ನ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ವಿಶ್ವಕಪ್ ಟೂರ್ನಿ ಹಾಗೂ ಆ್ಯಶಸ್ ಸರಣಿಯಲ್ಲಿ ತನ್ನ ವೇಗದ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News