ಫುಡ್ ಪಾಯ್ಸನಿಂಗ್ ಬಗ್ಗೆ ನಿಮಗೆಷ್ಟು ಗೊತ್ತು?

Update: 2020-06-07 16:19 GMT

ಫುಡ್ ಪಾಯ್ಸನಿಂಗ್ ಬಗ್ಗೆ ನಾವು ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಆದರೆ ಹೆಚ್ಚಿನ ಜನರಿಗೆ ಫುಡ್ ಪಾಯ್ಸನಿಂಗ್ ಎಂದರೇನು ಎನ್ನುವುದು ನಿಖರವಾಗಿ ಗೊತ್ತಿಲ್ಲ. ಕೆಲವರು ಆಹಾರಕ್ಕೆ ವಿಷ ಸೇರಿಸುವುದು ಫುಡ್ ಪಾಯ್ಸನಿಂಗ್ ಎಂದು ತಿಳಿದುಕೊಂಡಿರುತ್ತಾರೆ. ಫುಡ್ ಪಾಯ್ಸನಿಂಗ್ ಅಂದರೆ ನಾವು ಸೇವಿಸಿದ ಆಹಾರವೇ ವಿಷವಾಗುವುದು ಎಂದು ಸರಳವಾಗಿ ಹೇಳಬಹುದು. ಕಲುಷಿತ ಆಹಾರ ಅಥವಾ ನೀರಿನ ಸೇವನೆ ಈ ಸ್ಥಿತಿಯನ್ನುಂಟು ಮಾಡುತ್ತದೆ ಮತ್ತು ಕೆಲವೇ ಗಂಟೆಗಳಲ್ಲಿ ಫುಡ್ ಪಾಯ್ಸನಿಂಗ್‌ನ ಲಕ್ಷಣಗಳು ಕಂಡುಬರತೊಡಗುತ್ತವೆ.

ಡಯರಿಯಾ ಅಥವಾ ಅತಿಸಾರವನ್ನು ಹಲವು ವಿಧಗಳಲ್ಲಿ ವರ್ಗೀಕರಿಸಬಹುದು ಮತ್ತು ಫುಡ್ ಪಾಯ್ಸನಿಂಗ್ ಅವುಗಳಲ್ಲೊಂದಾಗಿದೆ ಎನ್ನುವುದು ನಿಮಗೆ ಗೊತ್ತೇ? ಫುಡ್ ಪಾಯ್ಸನಿಂಗ್ ವಿಶ್ವಾದ್ಯಂತ ಕೋಟ್ಯಂತರ ಜನರನ್ನು ಬಾಧಿಸುತ್ತಿರುವ ಅನಾರೋಗ್ಯವಾಗಿದೆ. ಮುಖ್ಯವಾಗಿ ಕಲುಷಿತ ಆಹಾರ ಮತ್ತು ನೀರಿನ ಸೇವನೆಯಿಂದ ಫುಡ್ ಪಾಯ್ಸನಿಂಗ್ ಉಂಟಾಗುವುದರಿಂದ ಆಹಾರ ಸುರಕ್ಷತೆಯ ಬಗ್ಗೆ ನಾವು ಮಾತನಾಡುವಾಗ ಆಹಾರ ಮತ್ತು ನೀರಿನಿಂದ ಉಂಟಾಗುವ ರೋಗಗಳಿಂದ ಪಾರಾಗಲು ಸ್ವಚ್ಛತೆಯ ನಿರ್ದಿಷ್ಟ ಮಾನದಂಡಗಳನ್ನು ಕಾಯ್ದುಕೊಳ್ಳುವ ಅಗತ್ಯಕ್ಕೆ ಒತ್ತು ನೀಡಬೇಕಾಗುತ್ತದೆ. ಫುಡ್ ಪಾಯ್ಸನಿಂಗ್ ಪ್ರಚಲಿತವಾಗಿರುವ ಸಾಮಾನ್ಯ ಸಮಸ್ಯೆಯೆಂಬಂತೆ ಕಂಡುಬರಬಹುದು,ಆದರೆ ಇತರ ರೋಗಗಳೊಂದಿಗೆ ಸೇರಿದಾಗ ಅದು ಮಾರಣಾಂತಿಕವೂ ಆಗಬಲ್ಲದು. ಹೀಗಾಗಿ ಪ್ರಾಥಮಿಕ ಎಚ್ಚರಿಕೆ ಅಗತ್ಯವಾಗುತ್ತದೆ.

ಹೊಟ್ಟೆನೋವು, ಅತಿಸಾರ, ಏಕಾಏಕಿ ಹಸಿವು ಕ್ಷೀಣಗೊಳ್ಳುವುದು ಮತ್ತು ಸೌಮ್ಯ ಜ್ವರ, ನಿಶ್ಶಕ್ತಿ ಮತ್ತು ತಲೆನೋವು ಇವು ಫುಡ್ ಪಾಯ್ಸನಿಂಗ್‌ನ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.

ಫುಡ್ ಪಾಯ್ಸನಿಂಗ್‌ಗೆ ಒಳಗಾದ ಹೆಚ್ಚಿನವರಲ್ಲಿ ಆಹಾರ ಸೇವನೆಯ ಬಳಿಕ ಕೆಲವೇ ಗಂಟೆಗಳಲ್ಲಿ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಫುಡ್ ಪಾಯ್ಸನಿಂಗ್‌ಗೆ ಕಾರಣವನ್ನು ಅವಲಂಬಿಸಿ ಲಕ್ಷಣಗಳು ಗೋಚರವಾಗಲು ಹೆಚ್ಚು ಸಮಯ ಬೇಕಾಗಬಹುದು ಅಥವಾ ಕೆಲವೇ ಸಮಯ ಸಾಕಾಗಬಹುದು.

 101.5 ಡಿಗ್ರಿ ಫ್ಯಾರನ್‌ಹೀಟ್‌ಗಿಂತ ಹೆಚ್ಚಿನ ಜ್ವರ, ಮೂರು ದಿನಗಳಿಗೂ ಹೆಚ್ಚು ಅವಧಿಯಿಂದ ಕಾಡುತ್ತಿರುವ ಅತಿಸಾರ,ತೀವ್ರ ನಿರ್ಜಲೀಕರಣ ಮತ್ತು ಬಾಯಿ ಒಣಗುವಿಕೆ,ಮೂತ್ರದಲ್ಲಿ ರಕ್ತ ಹೋಗುವುದು ಇವು ಫುಡ್ ಪಾಯ್ಸನಿಂಗ್‌ನ ಲಕ್ಷಣಗಳಲ್ಲಿ ಸೇರಿವೆ.

 ಶಿಶುಗಳು,ಗರ್ಭಿಣಿಯರು ಮತ್ತು ವಯಸ್ಸಾದವರಲ್ಲಿ ಚಯಾಪಚಯ ವ್ಯವಸ್ಥೆಯಲ್ಲಿ ವಿವಿಧ ಬದಲಾವಣೆಗಳಿಂದಾಗಿ ರೋಗ ನಿರೋಧಕ ಶಕ್ತಿಯು ದುರ್ಬಲವಾಗಿರು ವುದರಿಂದ ಈ ವರ್ಗಕ್ಕೆ ಫುಡ್ ಪಾಯ್ಸೆನಿಂಗ್‌ಗೆ ಗುರಿಯಾಗುವ ಹೆಚ್ಚಿನ ಅಪಾಯವಿರುತ್ತದೆ. ಇದು ಮುಖ್ಯವಾಗಿ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳಿಗೆ ದುರ್ಬಲ ನಿರೋಧಕತೆಯಿಂದ ಉಂಟಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಅತಿಸಾರ ಮತ್ತು ಫುಡ್ ಪಾಯ್ಸನಿಂಗ್‌ನಿಂದಾಗಿ ನಿರ್ಜಲೀಕರಣ ಮಕ್ಕಳಲ್ಲಿ ಹೆಚ್ಚು ಸಾಮಾನ್ಯವಾದ ಅಪಾಯವಾಗಿದೆ. ಫುಡ್ ಪಾಯ್ಸನಿಂಗ್ ರೋಗನಿರ್ಣಯವನ್ನು ವೈದ್ಯಕೀಯವಾಗಿ ನಡೆಸಲಾಗುತ್ತದೆ ಮತ್ತು ಹೆಚ್ಚಿನ ಪ್ರಕರಣಗಳಲ್ಲಿ ಯಾವುದೇ ಪರೀಕ್ಷೆಗಳನ್ನು ಕೈಗೊಳ್ಳಲಾಗುವುದಿಲ್ಲ. ಫುಡ್ ಪಾಯ್ಸನಿಂಗ್‌ನಿಂದಾಗಿ ತೀವ್ರ ಲಕ್ಷಣಗಳು ಅಥವಾ ತೊಂದರೆಗಳು ಕಂಡು ಬರುವವರಲ್ಲಿ ಪರೀಕ್ಷೆಗಳನ್ನು ನಡೆಸಬಹುದು.

ಫುಡ್ ಪಾಯ್ಸನಿಂಗ್‌ಗೆ ಚಿಕಿತ್ಸೆಯು ಅಸ್ವಸ್ಥತೆಯ ಕಾರಣ (ಗೊತ್ತಿದ್ದರೆ) ಮತ್ತು ಲಕ್ಷಣಗಳ ತೀವ್ರತೆಯನ್ನು ಅವಲಂಬಿಸಿರುತ್ತದೆ. ಲಕ್ಷಣಗಳು ಸೌಮ್ಯದಿಂದ ಮಧ್ಯಮ ಸ್ವರೂಪದ್ದಾಗಿದ್ದರೆ ಜ್ವರ ಮತ್ತು ವಾಂತಿಯನ್ನು ಶಮನಿಸಲು ದ್ರವಗಳು ಮತ್ತು ಔಷಧಿಗಳನ್ನು ನೀಡಿ ಮನೆಯಲ್ಲಿಯೇ ಚಿಕಿತ್ಸೆಗೊಳಪಡಿಸಬಹುದು. ಫುಡ್ ಪಾಯ್ಸನಿಂಗ್‌ಗೆ ತುತ್ತಾದ ಹೆಚ್ಚಿನ ಜನರು ಮನೆಯಲ್ಲಿಯೇ ಸ್ವಆರೈಕೆ ಮತ್ತು ಚಿಕಿತ್ಸೆಯಿಂದ ಕೆಲವೇ ದಿನಗಳಲ್ಲಿ ಸುಧಾರಿಸಿಕೊಳ್ಳುತ್ತಾರೆ ಮತ್ತು ವೈದ್ಯರ ಭೇಟಿಯೂ ಅಗತ್ಯವಾಗದಿರಬಹುದು.

ಮನೆಯಲ್ಲಿ ಅಗತ್ಯ ಕಾಳಜಿ ಮತ್ತು ಮುನ್ನೆಚ್ಚರಿಕೆಗಳ ಮೂಲಕ ಫುಡ್ ಪಾಯ್ಸನಿಂಗ್ ಗೆ ಚಿಕಿತ್ಸೆ ನೀಡಬಹುದು. ಹೀಗಾಗಿ ಶರೀರದಲ್ಲಿ ನಷ್ಟವಾಗಿರುವ ದ್ರವಗಳು ಮತ್ತು ವಿದ್ಯುದ್ವಿಚ್ಛೇದ್ಯಗಳ ಮರುಪೂರಣವನ್ನು ರೋಗಿಗಳು ಖಚಿತಪಡಿಸಿಕೊಳ್ಳಬೇಕು. ನಿರ್ಜಲೀಕರಣವನ್ನು ತಡೆಯಲು ಸಾಕಷ್ಟು ನೀರು,ದ್ರವಗಳು ಮತ್ತು ಒಆರ್‌ಎಸ್ ಅನ್ನು ಸೇವಿಸುತ್ತಿರಬೇಕು. ಈ ದ್ರವಗಳು ನಿರ್ಜಲೀಕರಣವನ್ನು ತಡೆಯಲು ಅಗತ್ಯ ಮಾತ್ರವಲ್ಲ, ಶರೀರದಲ್ಲಿ ನಷ್ಟಗೊಂಡಿರುವ ಪೋಷಕಾಂಶಗಳ ಮರುಭರ್ತಿಗೂ ಅಗತ್ಯವಾಗಿವೆ. ಹೀಗಾಗಿ ರೋಗಿಯು ಇನ್ನೂ ವಾಂತಿ ಮತ್ತು ಅತಿಸಾರದಿಂದ ಬಳಲುತ್ತಿದ್ದರೆ ಲಘು ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಬೇಕು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News