ನಾವು ಜ. 4ರಂದೇ ಅಮೆರಿಕಕ್ಕೆ ಕೊರೋನ ಬಗ್ಗೆ ಮಾಹಿತಿ ನೀಡಿದ್ದೆವು: ಚೀನಾ
ಬೀಜಿಂಗ್, ಜೂ. 7: ಕೊರೋನ ವೈರಸ್ ಸಾಂಕ್ರಾಮಿಕದ ಕುರಿತ ಮಾಹಿತಿಯನ್ನು ವಿಶ್ವ ಆರೊಗ್ಯ ಸಂಸ್ಥೆಯೊಂದಿಗೆ ಹಂಚಿಕೊಳ್ಳುವಲ್ಲಿ ಚೀನಾವು ಸ್ವಲ್ಪವೂ ಸಮಯ ವ್ಯರ್ಥ ಮಾಡಿಲ್ಲ ಎಂದು ಅದು ರವಿವಾರ ಹೇಳಿದೆ ಹಾಗೂ ಸಾಂಕ್ರಾಮಿಕವನ್ನು ತಾನು ನಿಭಾಯಿಸಿದ ರೀತಿಯನ್ನು ಅದು ಸಮರ್ಥಿಸಿಕೊಂಡಿದೆ.
ಅದೂ ಅಲ್ಲದೆ, ಚೀನಾದ ರೋಗ ನಿಯಂತ್ರಣ ಕೇಂದ್ರವು ಜನವರಿ 4ರಂದೇ ಅಜ್ಞಾತ ವೈರಸ್‌ನ ಬಗ್ಗೆ ಅಮೆರಿಕದ ರೋಗ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿತ್ತು ಎಂದು ಅದು ಹೇಳಿದೆ.
ಈ ಬಗ್ಗೆ ರವಿವಾರ ಹೊರಡಿಸಲಾದ ವಿಸ್ತತ ಶ್ವೇತಪತ್ರದಲ್ಲಿ ಅದು ಈ ಮಾಹಿತಿಗಳನ್ನು ನೀಡಿದೆ.
ಚೀನಾ ಸರಕಾರವು ರೋಗದ ಬಗ್ಗೆ ಮಾಹಿತಿ ನೀಡುವಲ್ಲಿ ವಿಳಂಬ ಮಾಡಿಲ್ಲ ಅಥವಾ ಏನನ್ನೂ ಮುಚ್ಚಿಟ್ಟಿಲ್ಲ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.
ಚೀನಾವು ಮಾರಕ ಸಾಂಕ್ರಾಮಿಕದ ಬಗ್ಗೆ ಸರಿಯಾದ ಮಾಹಿತಿಯನ್ನು ಸಕಾಲದಲ್ಲಿ ನೀಡದ ಕಾರಣ ರೋಗವು ಈ ಪ್ರಮಾಣದಲ್ಲಿ ಬೆಳೆದಿದೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಆರೋಪಿಸುತ್ತಿದ್ದಾರೆ.