ಎಚ್ಚೆನ್ ಎಂಬ ವೆಚಾರಿಕ ಬೆಳಕು

Update: 2020-06-07 17:27 GMT

ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಬಾರದು ಎಂಬುದು ಎಚ್ಚೆನ್ ಅವರ ಖಚಿತ ನಿಲುವಾಗಿತ್ತು. ಆದರೆ ಇಂದಿನ ಪ್ರಭುತ್ವ ಪ್ರಶ್ನೆ ಮಾಡುವುದನ್ನು ಸಹಿಸುವುದಿಲ್ಲ. ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಮತ್ತು ಪ್ರಧಾನಿ ಮೋದಿಯವರ ನಿಲುವುಗಳನ್ನು ಪ್ರಶ್ನಿಸಿದರೆ, ಈಗ ಜೈಲಿಗೆ ಹೋಗಬೇಕಾಗುತ್ತದೆ.ಈ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿದ ಕವಿ ವರವರರಾವ್, ಚಿಂತಕ ಆನಂದ್‌ತೇಲ್ತುಂಬ್ಡೆ, ನ್ಯಾಯವಾದಿ ಸುಧಾ ಭಾರದ್ವಾಜ್, ಪತ್ರಕರ್ತ ಗೌತಮ್ ನವ್ಲಾಖಾ ಮುಂತಾದವರು ಈಗ ಜೈಲಿನಲ್ಲಿದ್ದಾರೆ. ತೀರಾ ಇತ್ತೀಚೆಗೆ ಬಿಜೆಪಿಯನ್ನು ಟೀಕಿಸಿದ ಪತ್ರಕರ್ತ ವಿನೋದ್ ದುವಾ ಅವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಲಾಲ್ ಸಲಾಮ್, ಲೆನಿನ್ ಎಂದು ಕೂಗಿದ ತಪ್ಪಿಗೆ ಪೊಲೀಸ್ ದೌರ್ಜನ್ಯ ಎದುರಿಸಬೇಕಾಗಿದೆ. ಇಂತಹವರು ನರಸಿಂಹಯ್ಯನವರನ್ನು ಬಿಡುತ್ತಿದ್ದರೇ?.


ಭಾರತದಲ್ಲೀಗ ವಿಚಾರವಾದಿಗಳಿಗೆ, ಪ್ರಗತಿಪರರಿಗೆ ಕೆಟ್ಟ ಕಾಲ. ವೈಜ್ಞಾನಿಕ ದೃಷ್ಟಿಕೋನದಿಂದ ಅಭಿಪ್ರಾಯ ಮಂಡನೆ ಮಾಡುವುದು ಘೋರ ಅಪರಾಧ ಎಂದು ಪರಿಗಣಿಸಲ್ಪಡುವ ಕಾಲವಿದು. ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಜನ ಜಾಗೃತಿ ಮೂಡಿಸುತ್ತಿದ್ದ ಮಹಾರಾಷ್ಟ್ರದ ಅಂಧ ಶ್ರದ್ಧಾ ನಿರ್ಮೂಲನಾ ಸಮಿತಿಯ ಸಂಚಾಲಕ ನರೇಂದ್ರ ದಾಬೋಲ್ಕರ್ ತಮ್ಮ ವಿಚಾರ ಪ್ರತಿಪಾದನೆಗಾಗಿ ಗುಂಡಿಗೆ ಬಲಿಯಾಗಬೇಕಾಯಿತು. ನಂತರ ಗೋವಿಂದ ಪನ್ಸಾರೆ, ಡಾ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಒಬ್ಬೊಬ್ಬರಾಗಿ ಹಂತಕರ ಗುಂಡಿಗೆ ಬಲಿಯಾದರು. ಇಂತಹ ನಾಡಿನಲ್ಲಿ ಡಾ. ಎಚ್.ನರಸಿಂಹಯ್ಯನವರು ಆಗಿ ಹೋದರು. ಬದುಕಿದ್ದರೆ, ಅವರೀಗ ನೂರರ ಗಡಿ ದಾಟಿರುತ್ತಿದ್ದರು. ಆದರೆ, ಬದುಕಿದ್ದರೆ ಅವರೂ ದೇಶದ್ರೋಹಿ, ಧರ್ಮದ್ರೋಹಿ ಎಂಬ ನಿಂದನೆಗೆ ನಿತ್ಯವೂ ಗುರಿಯಾಗುತ್ತಿದ್ದರು. ಈಗ ದೊರೆಸ್ವಾಮಿ ಅವರು ನಿತ್ಯವೂ ಈ ನಿಂದಾ ಸ್ತುತಿಗೆ ಒಳಗಾಗುತ್ತಿದ್ದಾರೆ.

ಬದುಕಿನುದ್ದಕ್ಕೂ ಅಂಧ ಶ್ರದ್ಧೆ, ಸುಳ್ಳು ಜ್ಯೋತಿಷ್ಯ, ಕಂದಾಚಾರಗಳ ವಿರುದ್ಧ ಸಮರವನ್ನೇ ಸಾರಿದ ಎಚ್.ನರಸಿಂಹಯ್ಯ ನಡೆದು ಬಂದದ್ದು ಕಲ್ಲು ಮುಳ್ಳಿನ ದಾರಿ. ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದ ಅವಕಾಶ ವಂಚಿತ ಶೂದ್ರ ಸಮುದಾಯದಲ್ಲಿ ಜನಿಸಿದ ನರಸಿಂಹಯ್ಯನವರಿಗೆ ಬಾಬಾಸಾಹೇಬರಂತೆ ಇಂಗದ ಅಕ್ಷರ ದಾಹ. ತಮ್ಮ ಊರಿನಿಂದ 80 ಕಿ.ಮೀ. ಬರಿಗಾಲಲ್ಲಿ ನಡೆದು ಬೆಂಗಳೂರು ಸೇರಿದ ಎಚ್ಚೆನ್ ಮತ್ತೆ ಹಿಂದಿರುಗಿ ನೋಡಲಿಲ್ಲ. ಶೈಕ್ಷಣಿಕ ರಂಗದಲ್ಲಿ ಮಾತ್ರವಲ್ಲ ನಾಡಿನ ಸಾರ್ವಜನಿಕ ಜೀವನದಲ್ಲಿ ಎತ್ತರೆತ್ತರಕ್ಕೆ ಬೆಳೆದು ನಿಂತರು. ಆದರೂ ವಂಚಿತ ಸಮುದಾಯಗಳ ಜನರ ಕೈಗೆ ಎಟಕುವಷ್ಟು ಬಾಗಿಯೂ ನಿಲ್ಲುತ್ತಿದ್ದರು.

ನಾನು ಎಚ್ಚೆನ್ ಅವರನ್ನು ಮೊದಲು ನೋಡಿದ್ದು ಬಹುಶಃ ಧಾರವಾಡದಲ್ಲಿ. ಇದು 45 ವರ್ಷಗಳ ಹಿಂದಿನ ಸಂಗತಿ. ಆಗ ಎಲ್ಲೆಡೆ ಪುಟಪರ್ತಿ ಸಾಯಿಬಾಬಾರ ಪ್ರಭಾವ ವ್ಯಾಪಕವಾಗಿತ್ತು. ಸಾಯಿಬಾಬಾ ಪವಾಡ ಪುರುಷರೆಂದು ಹೆಸರಾಗಿದ್ದರು. ಬರಿಗೈಯಲ್ಲಿ ಚಿನ್ನದ ಉಂಗುರ, ವಾಚುಗಳನ್ನು ಸೃಷ್ಟಿಸಿ ಭಕ್ತರಿಗೆ ಕೊಡುತ್ತಿದ್ದರು. ಈ ಸಾಯಿಬಾಬಾ ವಿರುದ್ಧ ಶ್ರೀಲಂಕಾದ ಭಾರತೀಯ ಮೂಲದ ವಿಚಾರವಾದಿ ಡಾ. ಅಬ್ರಹಾಂ ಕೋವೂರ್ ವೈಚಾರಿಕ ಸಮರ ಸಾರಿದ್ದರು. ಈ ಕೋವೂರ್ ಅವರೊಂದಿಗೆ ನರಸಿಂಹಯ್ಯನವರು ಧಾರವಾಡಕ್ಕೆ ಬಂದಿದ್ದರು. ಅಲ್ಲಿ ಪವಾಡ ಬಯಲು ಕಾರ್ಯಕ್ರಮ ನಡೆದ ನೆನಪು.

ನಾನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದು ನೆಲೆಸಿದ ನಂತರ ಎಚ್. ನರಸಿಂಹಯ್ಯನವರ ನೇರ ಸಂಪರ್ಕ ಆಯಿತು. ಅವರು ಆಗ ರಾಜ್ಯದ ಪ್ರತಿಷ್ಠಿತ ನ್ಯಾಷನಲ್ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದರು. ಅವರನ್ನು ಕಾಣಲು ಒಮ್ಮೆ ಹೋದಾಗ, ಕಾಲೇಜಿನ ವಿದ್ಯಾರ್ಥಿಗಳ ಹಾಸ್ಟೆಲಿನ ಒಂದು ಕೊಠಡಿಯಲ್ಲಿ ತಂಗಿದ್ದರು. ಅದು ಅವರ ಖಾಯಂ ವಾಸ ಸ್ಥಳವಾಗಿತ್ತು. ಅವರ ಕೊಠಡಿಯಲ್ಲಿ ಒಂದು ಚಾಪೆಯ ಮೇಲೆ ಅವರು ಪವಡಿಸಿದ್ದರು. ಅವರೊಂದಿಗೆ ಹಲವಾರು ವಿಷಯಗಳನ್ನು ಕೆಲ ಬಾರಿ ಚರ್ಚಿಸಿದ್ದೆ. ಮೂಢನಂಬಿಕೆ ಮಾತ್ರವಲ್ಲದೆ ಹೆಚ್ಚುತ್ತಿರುವ ಕೋಮುವಾದದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದ ಎಚ್ಚೆನ್ ಕಟ್ಟಾ ಗಾಂಧಿವಾದಿಯಾಗಿದ್ದರು. ‘ಜಾತ್ಯತೀತತೆ ಅಂದರೆ ಸರ್ವ ಧರ್ಮ ಸಮಭಾವ ಅಲ್ಲ, ದೇವರು ಧರ್ಮಗಳನ್ನು ಸರಕಾರದ ಆಡಳಿತದ ಅಂಗಳದಿಂದ ದೂರವಿಡುವುದು’ ಎನ್ನುತ್ತಿದ್ದರು ಅವರು.

ಎಚ್.ನರಸಿಂಹಯ್ಯನವರು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದಾಗ ಪವಾಡ ಶೋಧನಾ ಸಮಿತಿಯೊಂದನ್ನು ರಚಿಸಿದರು. ಈ ಸಮಿತಿಯೊಂದಿಗೆ ಪವಾಡ ಪರೀಕ್ಷೆಗೆ ಬರುವುದಾಗಿ ಪುಟಪರ್ತಿ ಸಾಯಿಬಾಬಾಗೆ ಹೇಳಿ ಕಳಿಸಿದರು. ಹೇಳಿದ ಸಮಯಕ್ಕೆ ಸಾಯಿಬಾಬಾ ನೆಲೆಸಿದ ಮಂದಿರಕ್ಕೆ ಹೋದರು. ಆದರೆ, ಇವರು ಬರುವ ಸುದ್ದಿ ತಿಳಿದು ಸಾಯಿಬಾಬಾ ನಾಪತ್ತೆಯಾಗಿದ್ದರು. ಆಗ ವಿವಾದ ಉಂಟಾಯಿತು. ರಾಜಿ ಮಾಡಿಕೊಳ್ಳಲು ಒಪ್ಪದ ಎಚ್ಚೆನ್ ಕುಲಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ವಿಜ್ಞಾನ ಮತ್ತು ವೈಜ್ಞಾನಿಕ ತತ್ವಗಳಲ್ಲಿ ನಂಬಿಕೆ ಹೊಂದಿದ್ದ ಎಚ್. ನರಸಿಂಹಯ್ಯ ಅದಕ್ಕಾಗಿ ಪವಾಡ ಪುರುಷರನ್ನು, ದೇವ ಮಾನವರನ್ನು ಎದುರು ಹಾಕಿಕೊಂಡು ಬದುಕಿನುದ್ದಕ್ಕೂ ಸೆಣಸಿದರು. ಸಾಯಿಬಾಬಾ, ಶಿವಬಾಲಯೋಗಿ ಮಾಡುತ್ತಿರುವುದು ಮ್ಯಾಜಿಕ್ ಅಲ್ಲದೆ ಬೇರೇನೂ ಅಲ್ಲ ಎಂದು ಹೇಳುತ್ತಿದ್ದರು. ಒಮ್ಮೆ ಹಿಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿದ್ದ ಕಾರ್ಯಕ್ರಮವೊಂದರಲ್ಲಿ ಪುಟಪರ್ತಿ ಸಾಯಿಬಾಬಾ ಬರಿಗೈಯಲ್ಲಿ ಚಿನ್ನದ ಉಂಗುರವನ್ನು ಸೃಷ್ಟಿಸಿ ಕೃಷ್ಣ ಅವರಿಗೆ ನೀಡಿದರು. ಆಗ ಅದೇ ಸಭೆಯಲ್ಲಿ ಭಾಗವಹಿಸಿದ್ದ ಎಚ್.ನರಸಿಂಹಯ್ಯನವರು, ‘ಕುಂಬಳಕಾಯಿಯನ್ನು ಪವಾಡದಿಂದ ಸೃಷ್ಟಿಸಿ ಕೊಡಿ’ ಎಂದು ಸವಾಲು ಹಾಕಿದರು. ಆಗ ಬಾಬಾ ತೆಪ್ಪಗಾದರು.

ಧರ್ಮವನ್ನು ಲೇವಾದೇವಿ ವ್ಯವಹಾರ ಎಂದು ಕರೆಯುತ್ತಿದ್ದ ನರಸಿಂಹಯ್ಯನವರು ಒಂದು ಕತೆ ತಮಾಷೆಯಾಗಿ ಹೇಳುತ್ತಿದ್ದರು. ‘ಒಬ್ಬ ಧರ್ಮಗುರುವಿನ ಬಳಿ ಭಕ್ತನೊಬ್ಬ ಬಂದು ಪಾದಕ್ಕೆ ನಮಸ್ಕರಿಸಲು ಬಯಸುತ್ತಾನೆ. ಆಗ ತಡೆದು ನಿಲ್ಲಿಸುವ ಮಧ್ಯವರ್ತಿ ಧಾರ್ಮಿಕ ದಲ್ಲಾಳಿ ಸ್ವಾಮಿಗಳ ಪಾದಕ್ಕೆ ಪುಗಸಟ್ಟೆ ನಮಸ್ಕಾರ ಮಾಡುವಂತಿಲ್ಲ. ಎರಡು ಪಾದಗಳನ್ನು ಮುಟ್ಟಲು ಒಂದೂವರೆ ಸಾವಿರ ರೂಪಾಯಿ ಚಾರ್ಜ್ ಆಗುತ್ತದೆ ಎಂದು ಹೇಳುತ್ತಾನೆ. ಅಷ್ಟು ಹಣ ಭಕ್ತನ ಬಳಿ ಇರಲಿಲ್ಲ. ಕಾಡಿ ಬೇಡಿ ಒಂದು ಸಾವಿರ ರೂಪಾಯಿಗೆ ನಿಗದಿ ಮಾಡುತ್ತಾನೆ. ಇದು ಲೇವಾದೇವಿ ವ್ಯವಹಾರ’ ಎಂದು ಎಚ್ಚೆನ್ ಕರೆಯುತ್ತಿದ್ದರು.
ಕಮ್ಯುನಿಸ್ಟ್ ನಾಯಕರಾಗಿದ್ದ ಎಂ.ಎಸ್.ಕೃಷ್ಣನ್, ಬಿ.ವಿ.ಕಕ್ಕಿಲ್ಲಾಯ,ಸೂರ್ಯ ನಾರಾಯಣ ರಾವ್ ಅವರ ಆಪ್ತ ಸ್ನೇಹಿತರಾಗಿದ್ದ ನರಸಿಂಹಯ್ಯನವರು ಆಂಧ್ರಪ್ರದೇಶದ ಕ್ರಾಂತಿಕಾರಿ ಹಾಡುಗಾರ ಗದ್ದರ್ ಅವರ ಹಾಡುಗಳನ್ನು ಬಹಳ ಇಷ್ಟ ಪಡುತ್ತಿದ್ದರು. ಅದರಲ್ಲೂ ಪುಟಪರ್ತಿ ಸಾಯಿಬಾಬಾ ಬಗ್ಗೆ ಲೇವಡಿ ಮಾಡಿ ಗದ್ದರ್ ಹಾಡುತ್ತಿದ್ದ ಹಾಡನ್ನು ಎಚ್ಚೆನ್ ಎಂಜಾಯ್ ಮಾಡುತ್ತಿದ್ದರು.

ಚಂದ್ರಗ್ರಹಣವಿರಲಿ ಅಥವಾ ಸೂರ್ಯಗ್ರಹಣವಿರಲಿ ಜ್ಯೋತಿಷಿಗಳು ಏನೂ ತಿನ್ನಬಾರದು ಎಂದು ಜನರಲ್ಲಿ ಮೌಢ್ಯ ಬಿತ್ತುತ್ತಿದ್ದರೆ, ನರಸಿಂಹಯ್ಯನವರು ನ್ಯಾಷನಲ್ ಕಾಲೇಜಿನಲ್ಲಿ ಗ್ರಹಣದ ಸಮಯದಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿ ಗ್ರಹಣದ ವೈಜ್ಞಾನಿಕ ಪ್ರಕ್ರಿಯೆಯನ್ನು ಮನ ಮುಟ್ಟುವಂತೆ ವಿವರಿಸುತ್ತಿದ್ದರು. ಚುರಮುರಿ (ಕಳ್ಳೆಪುರಿ ಮಂಡಕ್ಕಿ) ಮತ್ತು ಬಾಳೆಹಣ್ಣು ತರಿಸಿ, ‘ತಿನ್ರಿ ಅದೇನಾಗುತ್ತದೋ ನೋಡೋಣ’ ಎಂದು ಹುರಿದುಂಬಿಸುತ್ತಿದ್ದರು.

ವಿಜ್ಞಾನದ ಬಗ್ಗೆ ಅರಿವು ಮೂಡಿಸಲು 1962ರಲ್ಲಿ ಸೈನ್ಸ್ ಫೋರಂ ಆರಂಭಿಸಿದರು. ನ್ಯಾಷನಲ್ ಕಾಲೇಜಿನಲ್ಲಿ ಮೊದಲು ಹುಡುಗರಿಗೆ ಮಾತ್ರ ಶಿಕ್ಷಣ ಸಿಗುತ್ತಿತ್ತು. ಹುಡುಗಿಯರಿಗೆ ಅವಕಾಶ ಇರಲಿಲ್ಲ. ಇದನ್ನು ಸರಿಪಡಿಸಲು ಎಚ್ಚೆನ್ ಪ್ರಿನ್ಸಿಪಾಲರಾದ ನಂತರ ಆಡಳಿತ ಮಂಡಳಿಯನ್ನು ಒಪ್ಪಿಸಲು ಹೆಣಗಾಡಿದರು. ಆದರೆ ಆಡಳಿತ ಮಂಡಳಿ ಸುಲಭಕ್ಕೆ ಒಪ್ಪಲಿಲ್ಲ. ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸುವ ಸಂಬಂಧ ಕೊನೆಗೆ ಮತದಾನ ನಡೆಯಿತು. ನರಸಿಂಹಯ್ಯನವರ ಪರವಾಗಿ 31, ವಿರೋಧವಾಗಿ 30 ಮತಗಳು ಬಿದ್ದವು. ಬಹುಮತದ ತೀರ್ಮಾನದ ಪ್ರಕಾರ ಹೆಣ್ಣು ಮಕ್ಕಳಿಗೂ ಅವಕಾಶ ದೊರೆತು ಹೆಣ್ಣು ಮತ್ತು ಗಂಡುಮಕ್ಕಳಿಗೆ ಸಮಾನ ಶಿಕ್ಷಣ ಸೌಕರ್ಯ ದೊರಕಿತು.

 ದೇವರು ಮತ್ತು ಧರ್ಮದ ವಿಷಯದಲ್ಲಿ ಎಚ್ಚೆನ್ ಎಂದೂ ರಾಜಿ ಮಾಡಿಕೊಳ್ಳಲಿಲ್ಲ. ಈ ಕೊರೋನ ಕಾಲದಲ್ಲಿ ಅವರಿದ್ದಿದ್ದರೆ, ‘ಎಲ್ಲಿದ್ದಾನೆ ನಿಮ್ಮ ದೇವರು’ ಎಂದು ಪ್ರಶ್ನಿಸದೇ ಇರುತ್ತಿರಲಿಲ್ಲ . ಆದರೆ, ಆಗ ಸಮಾಜ ಎಚ್ಚೆನ್ ವಿಚಾರಗಳನ್ನು ಗೌರವಿಸಿತು. ಆದರೆ ಈಗ ದೇಶದಲ್ಲಿ ಮನುವಾದಿ ಫ್ಯಾಶಿಸ್ಟ್ ಶಕ್ತಿಗಳು ಮೇಲುಗೈ ಸಾಧಿಸಿರುವಾಗ ನರಸಿಂಹಯ್ಯನವರಿಗೂ ಅನಂತಮೂರ್ತಿ, ದೊರೆಸ್ವಾಮಿಗಳಿಗೆ ಬಂದಂತೆ ಪ್ರಾಣ ಬೆದರಿಕೆ ಬರುತ್ತಿದ್ದವು. ಅವರು ನಿತ್ಯ ಹಿಂಸೆಯನ್ನು ಅನುಭವಿಸಬೇಕಾಗುತ್ತಿತ್ತು. ಗದ್ದರ್ ಹಾಡಿನ ಕಾರ್ಯಕ್ರಮವನ್ನು ನ್ಯಾಷನಲ್ ಕಾಲೇಜ್ ಸಭಾಂಗಣದಲ್ಲಿ ಏರ್ಪಡಿಸಿದ ಹಳೆಯ ದಾಖಲೆ ಹುಡುಕಿ ಎಚ್ಚೆನ್ ಅವರನ್ನೂ ರಾಜದ್ರೋಹದ ಆರೋಪದ ಮೇಲೆ ಜೈಲಿಗೆ ಅಟ್ಟುತ್ತಿದ್ದರು.

ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಬಾರದು ಎಂಬುದು ಎಚ್ಚೆನ್ ಅವರ ಖಚಿತ ನಿಲುವಾಗಿತ್ತು. ಆದರೆ ಇಂದಿನ ಪ್ರಭುತ್ವ ಪ್ರಶ್ನೆ ಮಾಡುವುದನ್ನು ಸಹಿಸುವುದಿಲ್ಲ. ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಮತ್ತು ಪ್ರಧಾನಿ ಮೋದಿಯವರ ನಿಲುವುಗಳನ್ನು ಪ್ರಶ್ನಿಸಿದರೆ, ಈಗ ಜೈಲಿಗೆ ಹೋಗಬೇಕಾಗುತ್ತದೆ. ಈ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿದ ಕವಿ ವರವರರಾವ್, ಚಿಂತಕ ಆನಂದ್‌ತೇಲ್ತುಂಬ್ಡೆ, ನ್ಯಾಯವಾದಿ ಸುಧಾ ಭಾರದ್ವಾಜ್, ಪತ್ರಕರ್ತ ಗೌತಮ್ ನವ್ಲಾಖಾ ಮುಂತಾದವರು ಈಗ ಜೈಲಿನಲ್ಲಿದ್ದಾರೆ. ತೀರಾ ಇತ್ತೀಚೆಗೆ ಬಿಜೆಪಿಯನ್ನು ಟೀಕಿಸಿದ ಪತ್ರಕರ್ತ ವಿನೋದ್ ದುವಾ ಅವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಲಾಲ್ ಸಲಾಮ್, ಲೆನಿನ್ ಎಂದು ಕೂಗಿದ ತಪ್ಪಿಗೆ ಪೊಲೀಸ್ ದೌರ್ಜನ್ಯ ಎದುರಿಸಬೇಕಾಗಿದೆ. ಇಂತಹವರು ನರಸಿಂಹಯ್ಯನವರನ್ನು ಬಿಡುತ್ತಿದ್ದರೆ?

ಈಗ ದೇಶದಲ್ಲಿ ಘೋರ ಅಂಧಕಾರ ಕವಿದಿದೆ. ಮನಸ್ಸುಗಳ ಮಧ್ಯೆ ದ್ವೇಷದ ದಳ್ಳುರಿ ಎದ್ದಿದೆ. ಅಂಧಶ್ರದ್ಧೆ,ಕಂದಾಚಾರಗಳು ಮಿತಿ ಮೀರಿವೆ. ದೇಶ ಲೂಟಿ ಮಾಡಿ ತಿಜೋರಿಯನ್ನು ತುಂಬಿಕೊಳ್ಳುತ್ತಿರುವ ದಗಾಕೋರರು ಧರ್ಮದ ನೆರಳಿನಲ್ಲಿ ರಕ್ಷಣೆ ಪಡೆಯುತ್ತಿದ್ದಾರೆ. ಆರ್ಥಿಕ ಹೋರಾಟಕ್ಕೆ ಸೀಮಿತವಾದ ಕಾರ್ಮಿಕ ವರ್ಗ ಸಮಾಜವನ್ನು ರಕ್ಷಿಸಿ ಕಟ್ಟುವ ತನ್ನ ಐತಿಹಾಸಿಕ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ.

ಸೌಕರ್ಯಗಳ ಚಳವಳಿಗೆ ಮುನ್ನ ಜನರಲ್ಲಿ ನಿರಂತರ ವೈಚಾರಿಕ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಾಗಿದೆ. ಎಂದೂ ನಿಲ್ಲದ, ದಣಿಯದ, ಸೋಲದ ವೈಚಾರಿಕ ಸಮರಕ್ಕೆ ಹೊಸ ಪೀಳಿಗೆಯನ್ನು ಅಣಿಗೊಳಿಸಬೇಕಾಗಿದೆ. ಅದೇ ನಾವು ಎಚ್. ನರಸಿಂಹಯ್ಯನವರಿಗೆ ಸಲ್ಲಿಸುವ ನಿಜವಾದ ಗೌರವ. 

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News