ಶಾಸಕರನ್ನು ಸೆಳೆಯಲು,ರಾಜಸ್ಥಾನ ಸರಕಾರವನ್ನು ಅಸ್ಥಿರಗೊಳಿಸಲು ಯತ್ನ: ಕಾಂಗ್ರೆಸ್ ಆರೋಪ

Update: 2020-06-10 18:26 GMT

ಜೈಪುರ,ಜೂ.10: ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಳ್ಳಲು ಮತ್ತು ರಾಜ್ಯದಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ರಾಜಸ್ಥಾನ ಸರಕಾರದ ಮುಖ್ಯ ಸಚೇತಕ ಮಹೇಶ್ ಜೋಶಿ ಅವರು ಬುಧವಾರ ಆರೋಪಿಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಘಟಕದ ಡಿಜಿಯವರಿಗೆ ದೂರು ಸಲ್ಲಿಸಿರುವ ಜೋಶಿ, ಕರ್ನಾಟಕ ಮತ್ತು ಮಧ್ಯಪ್ರದೇಶಗಳಂತೆ ರಾಜಸ್ಥಾನದಲ್ಲಿಯೂ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಆದರೆ ಈ ಪ್ರಯತ್ನಗಳನ್ನು ಯಾರು ನಡೆಸುತ್ತಿದ್ದಾರೆ ಎನ್ನುವುದನ್ನು ದೂರಿನಲ್ಲಿ ತಿಳಿಸಲಾಗಿಲ್ಲ. ತನ್ಮಧ್ಯೆ ಜೂ.19ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಮುನ್ನ ಚರ್ಚೆಗಾಗಿ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ತನ್ನ ನಿವಾಸಕ್ಕೆ ಬರಮಾಡಿಕೊಂಡಿದ್ದ ಕಾಂಗ್ರೆಸ್ ಶಾಸಕರನ್ನು ಜೈಪುರದಲ್ಲಿಯ ಐಷಾರಾಮಿ ರೆಸಾರ್ಟ್‌ವೊಂದಕ್ಕೆ ಕರೆದೊಯ್ಯಲಾಗಿದೆ. ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭಾ ಚುನಾವಣೆಗಾಗಿ ಕಾಂಗ್ರೆಸ್ ಕೆ.ಸಿ.ವೇಣುಗೋಪಾಲ್ ಮತ್ತು ನೀರಜ ಡಾಂಗಿ ಅವರನ್ನು ಹಾಗೂ ಬಿಜೆಪಿ ರಾಜೇಂದ್ರ ಗೆಹ್ಲೋಟ್ ಮತ್ತು ಓಂಕಾರ ಸಿಂಗ್ ಲಖಾವತ್ ಅವರನ್ನು ಕಣಕ್ಕಿಳಿಸಿವೆ.

200 ಸದಸ್ಯಬಲದ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ 107 ಶಾಸಕರಿದ್ದಾರೆ,ಅಲ್ಲದೆ 13 ಪಕ್ಷೇತರ ಶಾಸಕರ ಪೈಕಿ 12 ಜನರ ಬೆಂಬಲವನ್ನೂ ಅದು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News