×
Ad

ಚೀನಾದ ಬೆದರಿಕೆಗೆ ಬಗ್ಗುವುದಿಲ್ಲ: ಆಸ್ಟ್ರೇಲಿಯ ಪ್ರಧಾನಿ

Update: 2020-06-11 21:39 IST

ಸಿಡ್ನಿ (ಆಸ್ಟ್ರೇಲಿಯ), ಜೂ. 11: ನಾನು ಚೀನಾದ ಬೆದರಿಕೆ ಮತ್ತು ಒತ್ತಡಕ್ಕೆ ಬಗ್ಗುವುದಿಲ್ಲ ಎಂದು ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್ ಹೇಳಿದ್ದಾರೆ. ರಫ್ತು ವಿಷಯದಲ್ಲಿ ವ್ಯಾಪಾರಿ ಭಾಗೀದಾರ ದೇಶವಾಗಿರುವ ಚೀನಾದಿಂದ ಆಸ್ಟ್ರೇಲಿಯ ಎದುರಿಸುತ್ತಿರುವ ಅಡೆತಡೆಗಳ ಕುರಿತ ಪ್ರಶ್ನೆಗಳಿಗೆ ಅವರು ಈ ರೀತಿಯಾಗಿ ಉತ್ತರಿಸಿದ್ದಾರೆ.

ಕೊರೋನ ವೈರಸ್‌ನ ಮೂಲ ಮತ್ತು ಹರಡುವಿಕೆ ಬಗ್ಗೆ ಅಂತರ್‌ರಾಷ್ಟ್ರೀಯ ತನಿಖೆಯಾಗಬೇಕೆಂದು ಆಸ್ಟ್ರೇಲಿಯ ಕರೆ ನೀಡಿದ ಬಳಿಕ ಈ ಎರಡು ದೇಶಗಳ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ತಲೆದೋರಿದೆ.

ಆಸ್ಟ್ರೇಲಿಯ ಮತ್ತು ಐರೋಪ್ಯ ಒಕ್ಕೂಟದ ನೇತೃತ್ವದಲ್ಲಿ ಅಭಿಯಾನ ನಡೆದ ಬಳಿಕ, ಕಳೆದ ತಿಂಗಳು ನಡೆದ ವಿಶ್ವ ಆರೋಗ್ಯ ಸಮ್ಮೇಳನವು ಕೊರೋನ ವೈರಸ್ ಸಾಂಕ್ರಾಮಿಕದ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕೆಂಬ ಪರವಾಗಿ ಮತ ಹಾಕಿದೆ.

 ವಿದ್ಯಾರ್ಥಿಗಳು ಕಲಿಯಲು ಆಸ್ಟ್ರೇಲಿಯಕ್ಕೆ ಹೋಗುವುದನ್ನು ಪುನರ್‌ಪರಿಶೀಲಿಸಬೇಕು ಎಂಬುದಾಗಿ ಚೀನಾದ ಶಿಕ್ಷಣ ಸಚಿವಾಲಯ ಮಂಗಳವಾರ ಹೇಳಿದೆ. ಇದು ಆಸ್ಟ್ರೇಲಿಯದ ನಾಲ್ಕನೇ ಅತಿ ದೊಡ್ಡ ರಫ್ತು ಉದ್ದಿಮೆಯಾಗಿರುವ ಅಂತರ್‌ರಾಷ್ಟ್ರೀಯ ಶಿಕ್ಷಣಕ್ಕೆ ಬೆದರಿಕೆಯಾಗಿದೆ. ಆಸ್ಟ್ರೇಲಿಯದ ಅಂತರ್‌ರಾಷ್ಟ್ರೀಯ ಶಿಕ್ಷಣದ ವಾರ್ಷಿಕ ವಹಿವಾಟು 38 ಬಿಲಿಯ ಆಸ್ಟ್ರೇಲಿಯ ಡಾಲರ್ (ಸುಮಾರು 2 ಲಕ್ಷ ಕೋಟಿ ರೂಪಾಯಿ) ಆಗಿದೆ.

‘‘ನಮ್ಮದು ಮುಕ್ತ ವ್ಯಾಪಾರದ ದೇಶ. ಆದರೆ, ದಬ್ಬಾಳಿಕೆ ಎಲ್ಲಿಂದ ಬಂದರೂ ಅದಕ್ಕೆ ಪ್ರತಿಕ್ರಿಯಿಸುವಾಗ ನಮ್ಮ ಮೌಲ್ಯಗಳನ್ನು ನಾನು ಮಾರಾಟ ಮಾಡುವುದಿಲ್ಲ’’ ಎಂದು ಆಕಾಶವಾಣಿ ‘2ಜಿಬಿ’ಯೊಂದಿಗೆ ಗುರುವಾರ ಮಾತನಾಡಿದ ಆಸ್ಟ್ರೇಲಿಯ ಪ್ರಧಾನಿ ಹೇಳಿದರು.

ಇತ್ತೀಚಿನ ವಾರಗಳಲ್ಲಿ ಚೀನಾವು ಆಸ್ಟ್ರೇಲಿಯದಿಂದ ದನದ ಮಾಂಸ ಆಮದು ಮಾಡುವುದನ್ನು ನಿಷೇಧಿಸಿದೆ ಹಾಗೂ ಆಸ್ಟ್ರೇಲಿಯದ ಬಾರ್ಲಿ ಆಮದಿನ ಮೇಲೆ ಹೆಚ್ಚುವರಿ ಸುಂಕ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News