ಲಡಾಖ್‌ನ ವಾಸ್ತವವನ್ನು ತಿಳಿಸುವುದು ಪ್ರಧಾನಿಯ ಹೊಣೆಗಾರಿಕೆಯಲ್ಲವೇ?

Update: 2020-06-12 05:28 GMT

ಲಡಾಖ್‌ನಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಏನು ನಡೆಯುತ್ತಿದೆ ಎಂದು ಕೇಳುವುದು ದೇಶದ್ರೋಹವೇ? ಗಡಿಯ ವಾಸ್ತವವನ್ನು ಬಹಿರಂಗ ಪಡಿಸಿ ಎಂಬ ರಾಹುಲ್‌ಗಾಂಧಿಯ ಪ್ರಶ್ನೆಯನ್ನು ದೇಶದ್ರೋಹ ಎಂಬ ಅರ್ಥದಲ್ಲಿ ಕೇಂದ್ರ ಸರಕಾರ ವ್ಯಾಖ್ಯಾನಿಸುತ್ತಿದೆ ಮತ್ತು ಉತ್ತರ ನೀಡುವುದರಿಂದ ನುಣುಚಿಕೊಳ್ಳುತ್ತಿದೆ. ಈ ಹಿಂದೆ ಪಾಕಿಸ್ತಾನದ ಗಡಿಗೆ ಸಂಬಂಧಪಟ್ಟ ಬೆಳವಣಿಗೆಗಳಲ್ಲಿ ಸರಕಾರ ಇಂತಹ ನಿಲುವನ್ನು ಹೊಂದಿರಲಿಲ್ಲ. ಬದಲಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆ ತರುವಂತೆ, ಸರ್ಜಿಕಲ್ ದಾಳಿಯ ಬಗ್ಗೆ ಬಹಿರಂಗವಾಗಿ ಸರಕಾರ ಪತ್ರಿಕಾಗೋಷ್ಠಿಯನ್ನು ನಡೆಸಿತ್ತು. ಸರ್ಜಿಕಲ್ ಸ್ಟ್ರೈಕ್‌ನಿಂದಾದ ಪರಿಣಾಮಗಳೇನು? ನಿಜಕ್ಕೂ ಎಷ್ಟು ಉಗ್ರರು ಸತ್ತರು? ಇತ್ಯಾದಿಗಳ ಬಗ್ಗೆ ಮಾಹಿತಿಗಳನ್ನು ನೀಡಲು ವಿಫಲವಾಗಿದ್ದರೂ, ಸರಕಾರದೊಳಗಿರುವ ಎಲ್ಲ ಸಚಿವರೂ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ನೀಡಿ ದೇಶದ ರಕ್ಷಣಾ ವಿಷಯವನ್ನು ಮೂರಾಬಟ್ಟೆಯಾಗಿಸಿದ್ದರು. ಆದರೆ ಸದ್ಯಕ್ಕೆ ಚೀನಾದ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತಂತೆ ಪ್ರಧಾನಿ ಮೋದಿ ಈವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಅಷ್ಟೇ ಅಲ್ಲ, ವಿರೋಧ ಪಕ್ಷಗಳು ಈ ಬಗ್ಗೆ ಸ್ಪಷ್ಟೀಕರಣವನ್ನೇ ಕೇಳಬಾರದು ಎಂಬಂತೆ ಅವರ ಮೇಲೆ ಪ್ರತಿದಾಳಿ ನಡೆಸುತ್ತಿದೆ.

ಲಡಾಖ್‌ನಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಭಾರತ-ಚೀನಾ ಸೇನೆಯ ನಡುವೆ ಉದ್ವಿಗ್ನ ಪರಿಸ್ಥಿತಿಯ ಶಮನಕ್ಕಾಗಿ ಜೂನ್ 6ರಂದು ಉಭಯದೇಶಗಳ ಮಿಲಿಟರಿ ಜನರಲ್‌ಗಳ ನಡುವೆ ನಡೆದಿರುವ ಮಾತುಗಳು ನಿರಾಶಾದಾಯಕ ಹಾಗೂ ಅಸಂಪೂರ್ಣವೆಂದು ಭಾರತದ ವಿದೇಶಾಂಗ ಸಚಿವಾಲಯ ಈಗ ಸುಳಿವು ನೀಡಿದೆ.ಸರಕಾರದ ಸುದ್ದಿಗಳನ್ನು ಎಲ್ಲರಿಗಿಂತಲೂ ಮೊದಲು ಬಿತ್ತರಿಸುವ ಎಎನ್‌ಐ ಸುದ್ದಿಸಂಸ್ಥೆಯು, ಜೂನ್ 9ರಂದು ಉನ್ನತ ಸರಕಾರಿ ಮೂಲಗಳನ್ನು ಆಧರಿಸಿ ಮಾಡಿದ ಟ್ವೀಟ್‌ನಲ್ಲಿ ಭಾರತ ಹಾಗೂ ಚೀನಾ ಸೇನಾಪಡೆಗಳು ಪೂರ್ವ ಲಡಾಖ್‌ನ ವಿವಿಧ ಪಾಯಿಂಟ್‌ಗಳಿಂದ ಹಿಂದೆ ಸರಿಯತೊಡಗಿವೆ ಎಂದು ಟ್ವೀಟಿಸಿತ್ತು.ಗಲ್ವಾನ್, ಪಟ್ರೋಲಿಂಗ್ ಪಾಯಿಂಟ್ 15 ಹಾಗೂ ಹಾಟ್‌ಸ್ಪ್ರಿಂಗ್ಸ್ ಪ್ರದೇಶಗಳಿಂದ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯು ತನ್ನ ಪಡೆಗಳು ಹಾಗೂ ಸೇನಾವಾಹನಗಳೊಂದಿಗೆ 2.5 ಕಿ.ಮೀ.ನಷ್ಟು ಹಿಂದೆ ಸರಿದಿದೆಯೆಂದು ಅದು ಹೇಳಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಜೂನ್ 7ರಂದು ವಿದೇಶಾಂಗ ಇಲಾಖೆ ಹೇಳಿಕೆಯೊಂದನ್ನು ನೀಡಿ, ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದ ಮಾತುಕತೆಯು ದೀರ್ಘವಾದ ಪ್ರಕ್ರಿಯೆಯಾಗಿದೆ ಹಾಗೂ ಈ ಪರಿಸ್ಥಿತಿಯನ್ನು ಬಗೆಹರಿಸಲು ಸಣ್ಣ ಸಣ್ಣ ಹೆಜ್ಜೆಗಳನ್ನು ಇಡುತ್ತಲೇ ಮುಂದೆ ಸಾಗಬೇಕಾಗುತ್ತದೆ ಎಂದು ಹೇಳಿತ್ತು.

ಎಲ್‌ಎಸಿಯಿಂದ ಚೀನಿ ಪಡೆಗಳ ಹಿಂದೆ ಸರಿಯುವಿಕೆಯು ನರೇಂದ್ರ ಮೋದಿ ಸರಕಾರದ ಮಿಲಿಟರಿ ಹಾಗೂ ರಾಜತಾಂತ್ರಿಕ ನೀತಿಯ ಗೆಲುವೆಂದು ಖಂಡಿತವಾಗಿಯೂ ಹೇಳಬಹುದಾಗಿದೆ. ಇದರಿಂದಾಗಿ ಗಡಿಯಲ್ಲಿ 2020ರ ಎಪ್ರಿಲ್‌ವರೆಗಿದ್ದ ಯಥಾಸ್ಥಿತಿಯನ್ನು ಮರುಸ್ಥಾಪಿಸಿದಂತಾಗಿದೆ. ಆದಾಗ್ಯೂ ಕೇಂದ್ರ ಸರಕಾರ ಹಾಗೂ ಮಿಲಿಟರಿಯು ಭಾರತದ ಭದ್ರತಾ ಬಿಕ್ಕಟ್ಟನ್ನು ನಿಭಾಯಿಸಿದ ರೀತಿಯ ಬಗ್ಗೆ ಆತಂಕಕಾರಿ ಪ್ರಶ್ನೆಗಳನ್ನು ಹುಟ್ಟಿಸಿಹಾಕಿದೆ. ಲಡಾಖ್ ಗಡಿ ಉದ್ವಿಗ್ನತೆಗೆ ಸಂಬಂಧಿಸಿ ಮೋದಿ ಸರಕಾರ ಕಳೆದ 6-8 ವಾರಗಳಿಂದ ವಹಿಸಿರುವ ವೌನ ಹಲವು ಸಂದೇಹಗಳಿಗೆ ಕಾರಣವಾಗಿದೆ. ಗಡಿಯಿಂದ ಉಭಯದೇಶಗಳ ಹಿಂದೆ ಸರಿಯುವಿಕೆಗೆ ಭಾರತವು ಬೆಲೆತೆರಬೇಕಾಗಿ ಬಂದಿದೆಯೇ?. ಚೀನಾ ಮಿಲಿಟರಿ ಅಧಿಕಾರಿಗಳ ಜೊತೆ ನಡೆದ ಮಾತುಕತೆಯಲ್ಲಿ ಏನೆಲ್ಲಾ ಒಡಂಬಡಿಕೆಗಳಾಗಿವೆ. ಪ್ರಾಂತ, ಪಡೆಗಳ ನಿಯೋಜನೆ ಹಾಗೂ ಗಡಿ ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿ ಚೀನಾ ಸೇನೆಗೆ ಯಾವೆಲ್ಲಾ ರಿಯಾಯಿತಿಗಳನ್ನು ನೀಡಲಾಗಿದೆ? ಈ ಎಲ್ಲಾ ವಿಚಾರಗಳ ಬಗ್ಗೆ ದೇಶದ ಜನತೆಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

ಪೂರ್ವ ಲಡಾಖ್ ಸಮೀಪದ ಎಲ್‌ಎಸಿಯಲ್ಲಿ ಚೀನಿ ಪಡೆಗಳ ಒಳನುಸುಳುವಿಕೆಯ ವಿವರಗಳನ್ನು ಬಹಿರಂಗಪಡಿಸಲು ಆರಂಭದಲ್ಲಿ ಕೇಂದ್ರ ಸರಕಾರವು ನಿರಾಕರಿಸುತ್ತಲೇ ಬಂದಿತ್ತು. ರಾಜಕೀಯವಾಗಿ ಹಿನ್ನಡೆಯಾಗಬಹುದೆಂಬ ಭೀತಿಯಿಂದ ಸರಕಾರವು ಇಂತಹ ವಿಷಯಗಳನ್ನು ಬೇಕೆಂದೇ ಮುಚ್ಚಿಡಲು ಪ್ರಯತ್ನಿಸುತ್ತಿದೆ. ಎರಡೂ ದೇಶಗಳ ನಡುವೆ ಹಲವಾರು ಗಡಿನಿರ್ವಹಣಾ ಒಪ್ಪಂದಗಳು ಹಾಗೂ ನಿರಂತರವಾದ ರಾಜತಾಂತ್ರಿಕ ಮಾತುಕತೆಗಳು ನಡೆದಿರುವ ಹೊರತಾಗಿಯೂ ಚೀನಾವು ಒಂದಲ್ಲ ಒಂದು ಕುಂಟು ನೆಪ ಹೇಳುತ್ತಲೇ ಎಲ್‌ಎಸಿಯ ಗಡಿರೇಖೆಯನ್ನು ಗುರುತಿಸಲು ನಿರಾಕರಿಸುತ್ತಿದೆ.ಗಲ್ವಾನ್ , ಹಾಟ್ ಸ್ಪ್ರಿಂಗ್ಸ್ ಹಾಗೂ ಪಂಗೊಂಗ್ ತ್ಸ ಪ್ರದೇಶಗಳ ಎಲ್‌ಎಸಿಯುದ್ದಕ್ಕೂ ಚೀನಾವು ತನ್ನ ಪಡೆಗಳನ್ನು ನಿಯಮಿತವಾಗಿ ನಿಯೋಜಿಸುತ್ತಲೇ ಇದೆ ಹಾಗೂ ಭಾರತದ ಸೇನಾ ಪಡೆಗಳು, ಎಲ್‌ಎಸಿ ಗಡಿವರೆಗೆ ಗಸ್ತು ತಿರುಗುವುದಕ್ಕೆ ಅಡ್ಡಿಪಡಿಸುತ್ತಲೇ ಇವೆ.

ಇತ್ಯರ್ಥವಾಗದೆ ಉಳಿದಿರುವ ಗಡಿವಿವಾದಗಳ ನೆಪದಲ್ಲಿ ತಗಾದೆ ಎತ್ತಿ ಗಡಿಯೊಳಗೆ ಅತಿಕ್ರಮಣ ನಡೆಸುವ ಮೂಲಕ ಭಾರತದ ಮೇಲೆ ಯಜಮಾನಿಕೆಯನ್ನು ಸಾಧಿಸಲು ಯತ್ನಿಸುವುದೇ ಚೀನಾದ ಪ್ರಮುಖ ರಾಜಕೀಯ ಉದ್ದೇಶವಾಗಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತವು ತನಗೆ ರಾಜಕೀಯ, ಮಿಲಿಟರಿ ಹಾಗೂ ಆರ್ಥಿಕ ಪ್ರತಿಸ್ಪರ್ಧಿಯಾಗಿ ತಲೆಯೆತ್ತದಂತೆ ಮಾಡುವುದೇ ಅದರ ಈ ತಂತ್ರಗಾರಿಕೆಯಾಗಿದೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ), ದಕ್ಷಿಣ ಚೀನಾ ಸಮುದ್ರ ಹಾಗೂ ಇಂಡೊಪೆಸಿಫಿಕ್ ವಿವಾದಗಳಲ್ಲಿ ಭಾರತ ವೌನವಾಗಿರುವಂತೆ ಮಾಡುವುದು ಹಾಗೂ ಭಾರತವು ಗಡಿಪ್ರದೇಶದಲ್ಲಿ ಯಾವುದೇ ಮೂಲ ಸೌಕರ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸುವುದನ್ನು ತಡೆಯುವುದು ಅದರ ಇತರ ಉದ್ದೇಶಗಳಾಗಿವೆ.

ವಾಸ್ತವವಾಗಿ ಪೂರ್ವ ಲಡಾಖ್‌ನ ಬಿಕ್ಕಟ್ಟು ಇನ್ನೂ ಕೂಡಾ ಇತ್ಯರ್ಥಗೊಂಡಿಲ್ಲವೆಂದು ಅನೇಕ ವಿಶ್ಲೇಷಕರ ಅಭಿಪ್ರಾಯವಾಗಿದೆ. ಏನೇ ಇದ್ದರೂ ಪ್ರಸಕ್ತ ಬಿಕ್ಕಟ್ಟಿನಲ್ಲಿ ಮೋದಿ ಸರಕಾರ ಹಾಗೂ ಸೇನೆಯ ಹೇಳಿಕೆಗಳು ವಿಶ್ವಸನೀಯತೆಯನ್ನು ಕಳೆದುಕೊಂಡಿದೆ. ಚೀನಾದ ಜೊತೆಗೆ ಏರ್ಪಟ್ಟಿರುವ ಮಾತುಕತೆಯು ವಸ್ತುಶಃ ಆ ದೇಶದ ನಿಲುವನ್ನು ಸಮರ್ಥಿಸಿದಂತಿದೆ. ಇದು ಅಂತರ್‌ರಾಷ್ಟ್ರೀಯ ಸಮುದಾಯಕ್ಕೆ ತಪ್ಪು ಸಂದೇಶಗಳನ್ನು ರವಾನಿಸಿದೆ.

ಇಂತಹ ಸನ್ನಿವೇಶದಲ್ಲಿ ಮೋದಿ ಸರಕಾರವು ಸಂಸತ್ ಹಾಗೂ ದೇಶದ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಕನಿಷ್ಠ ಪಕ್ಷ ವಾರಕ್ಕೊಮ್ಮೆಯಾದರೂ ಪ್ರಧಾನಿಯವರು ಈ ವಿಷಯವಾಗಿ ಸೇನಾ ವಕ್ತಾರರ ಜೊತೆ ಮಾತುಕತೆ ನಡೆಸಬೇಕಾಗಿದೆ ಹಾಗೂ ಗಡಿಯಲ್ಲಿ ನಡೆದಿರುವ ವಿದ್ಯಮಾನಗಳ ಬಗ್ಗೆ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಬೇಕಿದೆ. ದೇಶದ ಜನರಲ್ಲಿ ಸೃಷ್ಟಿಯಾಗಿರುವ ಅನಗತ್ಯ ಸಂಶಯ, ಆತಂಕ ಇತ್ಯಾದಿಗಳನ್ನು ನಿವಾರಿಸುವುದು ಪ್ರಧಾನಿಯವರ ಹೊಣೆಗಾರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News