ನಿಮಗೆ ನಿಮ್ಮ ಹೃದಯದ ಬಗ್ಗೆ ಕಾಳಜಿಯಿದೆಯೇ? ಹಾಗಿದ್ದರೆ ಈ ಬೀಜಗಳನ್ನು ತಿನ್ನಿ

Update: 2020-06-11 18:32 GMT

ಸೂರ್ಯಕಾಂತಿ ಹೂವು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು,ಆದರೆ ಅದರ ಬೀಜಗಳಲ್ಲಿರುವ ಪೋಷಕಾಂಶಗಳ ಕುರಿತು ಹೆಚ್ಚಿನ ಜನರಿಗೆ ತಿಳಿದಿಲ್ಲ. ಈ ಬೀಜಗಳು ಆರೋಗ್ಯಕ್ಕೆ ತುಂಬ ಲಾಭದಾಯಕ ಎನ್ನುವುದು ಗೊತ್ತಾದರೆ ನೀವು ಖಂಡಿತ ಅಚ್ಚರಿ ಪಡುತ್ತೀರಿ. ಈ ಬೀಜಗಳು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದರಿಂದ ವಿಶೇಷವಾಗಿ,ಹೃದಯದ ಆರೋಗ್ಯದ ಬಗ್ಗೆ ಕಾಳಜಿಯಿರುವವರು ಇವುಗಳನ್ನು ಖಂಡಿತ ಸೇವಿಸಬೇಕು. ಸೂರ್ಯಕಾಂತಿ ಬೀಜಗಳು ಅಗತ್ಯ ಫ್ಯಾಟಿ ಆ್ಯಸಿಡ್‌ಗಳು, ವಿಟಾಮಿನ್‌ಗಳು ಮತ್ತು ಖನಿಜಗಳನ್ನು ಒಳಗೊಂಡಿದ್ದು ಇವೆಲ್ಲ ನಮ್ಮ ಶರೀರದ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಹೀಗಾಗಿ ನಾವು ಈ ಬೀಜಗಳನ್ನು ಒಂದಿಲ್ಲೊಂದು ರೂಪದಲ್ಲಿ ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಸೂರ್ಯಕಾಂತಿ ಬೀಜಗಳ ಆರೋಗ್ಯಲಾಭಗಳ ಕುರಿತು ಮಾಹಿತಿಗಳಿಲ್ಲಿವೆ......

* ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ

ಸೂರ್ಯಕಾಂತಿ ಬೀಜಗಳು ಫೈಟೊಸ್ಟೆರಾಲ್‌ಗಳನ್ನು ಸೂಕ್ತ ಪ್ರಮಾಣದಲ್ಲಿ ಒಳಗೊಂಡಿದ್ದು,ಇವು ಶರೀರದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್‌ನ ಮಟ್ಟವನ್ನು ಹೆಚ್ಚಿಸುತ್ತವೆ. ಶರೀರದಲ್ಲಿ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿದ್ದರೆ ವ್ಯಕ್ತಿಯು ಹೃದ್ರೋಗಗಳಿಗೆ ಗುರಿಯಾಗುವ ಅಪಾಯವು ಗಣನೀಯವಾಗಿ ಕಡಿಮೆಯಾಗುತ್ತದೆ.

* ಮ್ಯಾಗ್ನೀಷಿಯಂ

    ಶರೀರದಲ್ಲಿಯ ಸ್ನಾಯುಗಳು ಮತ್ತು ಮೂಳೆಗಳ ವ್ಯವಸ್ಥೆಗೆ ಮ್ಯಾಗ್ನೀಷಿಯಂ ಅಗತ್ಯವಾಗಿದೆ ಮತ್ತು ಇದರ ಕೊರತೆಯು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲದು. ಹೋಮಿಯೊಪತಿಯಲ್ಲಿ ಹೃದಯವನ್ನು ರೋಗಗಳಿಂದ ರಕ್ಷಿಸಲು ಮತ್ತು ಹಲವಾರು ಇತರ ಉಸಿರಾಟ ಸಮಸ್ಯೆಗಳನ್ನು ಶಮನಿಸಲು ಮ್ಯಾಗ್ನೀಷಿಯಂ ಅನ್ನು ಬಳಸಲಾಗುತ್ತದೆ. ಸೂರ್ಯಕಾಂತಿ ಬೀಜಗಳಲ್ಲಿ ಮ್ಯಾಗ್ನೀಷಿಯಂ ಸಮೃದ್ಧವಾಗಿರುತ್ತದೆ ಮತ್ತು ಇದು ಮಿದುಳು,ಹೃದಯ ಮತ್ತು ಸ್ನಾಯುಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ.

* ಮೂಡ್ ಅನ್ನು ಹೆಚ್ಚಿಸುತ್ತದೆ

ಸೂರ್ಯಕಾಂತಿ ಬೀಜಗಳಲ್ಲಿರುವ ಮ್ಯಾಗ್ನೀಷಿಯಂ ಮನಸ್ಸನ್ನು ಉಲ್ಲಾಸಗೊಳಿಸಿ ಮೂಡ್ ಅನ್ನು ಹೆಚ್ಚಿಸಲು ನೆರವಾಗುತ್ತದೆ. ಕೆಲವು ವರ್ಷಗಳ ಹಿಂದೆ ಖಿನ್ನತೆಗೆ ಚಿಕಿತ್ಸೆ ನೀಡಲು ಮ್ಯಾಗ್ನೀಷಿಯಂ ಸಲ್ಫೇಟ್ ಬಳಕೆಯಾಗುತ್ತಿತ್ತು. ಈಗ ಹೋಮಿಯೊಪತಿಯಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸೆಗಾಗಿ ಮ್ಯಾಗ್ನೀಷಿಯಂ ಅನ್ನು ಬಳಸಲಾಗುತ್ತಿದೆ. ಅದು ನಮ್ಮನ್ನು ಒತ್ತಡ ಮತ್ತು ಖಿನ್ನತೆಗಳಿಂದ ದೂರವಿರಿಸುತ್ತದೆ.

* ಉರಿಯೂತಕ್ಕೆ ಪರಿಣಾಮಕಾರಿ

ಸೂರ್ಯಕಾಂತಿ ಬೀಜಗಳು ಅಗತ್ಯ ಪೋಷಕಾಂಶವಾಗಿರುವ ಸೆಲೆನಿಯಂ ಅನ್ನು ಒಳಗೊಂಡಿವೆ. ಸೆಲೆನಿಯಂ ಉರಿಯೂತವನ್ನು ಮತ್ತು ಶರೀರದಲ್ಲಿಯ ಕೆಂಪು ಕಲೆಗಳನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಅದು ಥೈರಾಯ್ಡ ಹಾರ್ಮೋನ್‌ಗಳ ಚಯಾಪಚಯದೊಂದಿಗೆ ಗಾಢವಾದ ನಂಟನ್ನು ಹೊಂದಿದೆ ಎನ್ನುವುದು ಇತ್ತೀಚಿನ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಸೆಲೆನಿಯಮ್‌ನಲ್ಲಿರುವ ಡಿಎನ್‌ಎ ಜೀವಕೋಶಗಳು ನಾಶಗೊಳ್ಳುವುದನ್ನು ತಡೆಯುತ್ತದೆ.

* ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಸೂರ್ಯಕಾಂತಿ ಬೀಜಗಳು ಮತ್ತು ಅದರ ಮೊಳಕೆಗಳು ನಮ್ಮ ಶರೀರದ ಉತ್ಕರ್ಷಣ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅವುಗಳಲ್ಲಿ ಅಧಿಕ ಪ್ರಮಾಣದಲ್ಲಿರುವ ವಿಟಾಮಿನ್ ಇ ಸೆಲೆನಿಯಂ ಮತ್ತು ವಿಟಾಮಿನ್ ಸಿ ಜೊತೆ ಕಾರ್ಯಾಚರಿಸಿ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಹುರಿದ ಅಥವಾ ಉಪ್ಪು ಬೆರೆಸಿದ ಸೂರ್ಯಕಾಂತಿ ಬೀಜಗಳನ್ನು ಆರೋಗ್ಯಕರ ತಿನಿಸು ಎಂದು ಪರಿಗಣಿಸಲಾಗಿದೆ. ಪೌಷ್ಟಿಕತೆಯನ್ನು ಹೆಚ್ಚಿಸಲು ಇವುಗಳನ್ನು ಬ್ರೇಕ್‌ಫಾಸ್ಟ್‌ನಲ್ಲಿ ಸೇರಿಸಕೊಳ್ಳಬಹುದು.

ಚಿಕನ್ ಕರಿ,ಮಿಕ್ಸಡ್ ವೆಜಿಟೇಬಲ್ ಇತ್ಯಾದಿ ಮುಖ್ಯ ಆಹಾರಗಳಿಗೆ ಸೂರ್ಯಕಾಂತಿ ಬೀಜಗಳನ್ನು ಸೇರಿಸಬಹುದಾಗಿದೆ. ಸಲಾಡ್,ಪಾಸ್ತಾದಲ್ಲಿ ಸೇರಿಸಿದರೆ ಈ ಬೀಜಗಳು ಅವುಗಳ ರುಚಿಯನ್ನು ಮತ್ತು ಪೌಷ್ಟಿಕತೆಯನ್ನು ಹೆಚ್ಚಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News