ನ್ಯೂಝಿಲ್ಯಾಂಡ್: ವಸಾಹತುಶಾಹಿ ಸೇನಾಧಿಕಾರಿಯ ಪ್ರತಿಮೆ ತೆರವು

Update: 2020-06-12 16:57 GMT

ಹ್ಯಾಮಿಲ್ಟನ್ (ನ್ಯೂಝಿಲ್ಯಾಂಡ್), ಜೂ. 12: ನ್ಯೂಝಿಲ್ಯಾಂಡ್‌ನ ಹ್ಯಾಮಿಲ್ಟನ್ ನಗರವು ಶುಕ್ರವಾರ ವಸಾಹತುಶಾಹಿ ಸೇನಾಧಿಕಾರಿಯೊಬ್ಬನ ವಿಗ್ರಹವನ್ನು ತೆರವುಗೊಳಿಸಿದೆ. ಇದೇ ಸೇನಾಧಿಕಾರಿಯ ಹೆಸರನ್ನು ಆ ನಗರಕ್ಕೂ ಇಡಲಾಗಿದೆ.

ನಗರದ ಚೌಕದಲ್ಲಿದ್ದ ಕ್ಯಾಪ್ಟನ್ ಜಾನ್ ಫೇನ್ ಚಾರ್ಲ್ಸ್ ಹ್ಯಾಮಿಲ್ಟನ್‌ನ ಕಂಚಿನ ಪ್ರತಿಮೆಯನ್ನು ಶುಕ್ರವಾರ ಬೆಳಗ್ಗೆ ಕ್ರೇನ್ ಮೂಲಕ ತೆರವುಗೊಳಿಸಲಾಯಿತು. ಈ ಪ್ರತಿಮೆಯನ್ನು ತೆರವುಗೊಳಿಸಬೇಕೆಂದು ಸ್ಥಳೀಯ ಮಾವೋರಿ ಜನಾಂಗೀಯರು ಮನವಿ ಮಾಡಿದ್ದರು ಹಾಗೂ ವಿಗ್ರಹವನ್ನು ಕೆಡಹುವುದಾಗಿ ಜನಾಂಗೀಯ ತಾರತಮ್ಯ ನೀತಿಯನ್ನು ವಿರೋಧಿಸುವ ಪ್ರತಿಭಟನಕಾರರು ಬೆದರಿಕೆ ಹಾಕಿದ್ದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿ ಸೇರಿದ್ದ ಸಣ್ಣ ಗುಂಪೊಂದು ಹರ್ಷ ವ್ಯಕ್ತಪಡಿಸಿತು.

ಸಹಿಷ್ಣುತೆ ಬೆಳೆಸಲು ಪ್ರತಿಮೆ ಸಹಾಯ ಮಾಡುವುದಿಲ್ಲ: ಮೇಯರ್

‘ಈ ಪ್ರತಿಮೆಯು ವೈಯಕ್ತಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಹೆಚ್ಚಿನವರ ಮನಸ್ಸನ್ನು ನೋಯಿಸಿದೆ ಎನ್ನುವುದು ನನಗೆ ಗೊತ್ತಿದೆ. ಜಗತ್ತಿನಾದ್ಯಂತ ನಡೆಯುತ್ತಿರುವುದನ್ನು ನಾವು ನಿರ್ಲಕ್ಷಿಸಲಾಗದು. ಸಹಿಷ್ಣುತೆ ಮತ್ತು ಹೊಂದಾಣಿಕೆಯನ್ನು ನಿರ್ಮಿಸಲು ನಾವು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ಆ ಅಂತರಗಳನ್ನು ಸರಿಪಡಿಸಲು ಈ ಪ್ರತಿಮೆ ಸಹಾಯ ಮಾಡುವುದಿಲ್ಲ’’ ಎಂದು ಹ್ಯಾಮಿಲ್ಟನ್ ಮೇಯರ್ ಪೌಲಾ ಸೌತ್‌ಗೇಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News