ಪಾನ್ ಮಸಾಲದಿಂದ‌ 225 ಕೋಟಿ ರೂ. ವಂಚನೆ !

Update: 2020-06-13 16:32 GMT

ಭೋಪಾಲ, ಜೂ.13: ಅಕ್ರಮವಾಗಿ ಪಾನ್‌ಮಸಾಲಾ ತಯಾರಿಸಿ ಮಾರಾಟ ಮಾಡುವ ಜಾಲದ ಮೂಲಕ 225 ಕೋಟಿ ರೂ. ತೆರಿಗೆ ವಂಚಿಸಿದ ಪ್ರಕರಣ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಇಂದೋರ್ ಮತ್ತು ಉಜ್ಜೈಯನಿಯಲ್ಲಿರುವ 16 ಗೋದಾಮು ಹಾಗೂ ವಸತಿಗೃಹಗಳ ಮೇಲೆ ಡಿಜಿಜಿಐ(ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್‌ಟಿ ಇಂಟಲಿಜೆನ್ಸಿ ) ಮತ್ತು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ)ನ ಅಧಿಕಾರಿಗಳು ದಾಳಿ ನಡೆಸಿ ಈ ಅಕ್ರಮ ಪಾನ್‌ಮಸಾಲಾ ಜಾಲವನ್ನು ಪತ್ತೆಹಚ್ಚಿದ್ದಾರೆ ಎಂದು ಶನಿವಾರ ಅಧಿಕಾರಿಗಳು ಹೇಳಿದ್ದಾರೆ.

2019ರ ಜುಲೈಯಿಂದ 2020ರ ಮಾರ್ಚ್‌ವರೆಗೆ ಪಾನ್‌ಮಸಾಲವನ್ನು ಅಕ್ರಮವಾಗಿ ಉತ್ಪಾದಿಸಿ ಮಾರುವ ಮೂಲಕ ಸುಮಾರು 225 ಕೋಟಿ ರೂ. ತೆರಿಗೆ ವಂಚಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸುಮಾರು 400 ಕೋಟಿ ರೂ.ಯಷ್ಟು ತೆರಿಗೆ ವಂಚಿಸಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಜಾಲದ ರೂವಾರಿಗಳು, ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ ಸಂದರ್ಭ 30ರಷ್ಟು ಜನರನ್ನು ಒಟ್ಟುಸೇರಿಸಿ ಅಧಿಕಾರಿಗಳ ಕಾರ್ಯಾಚರಣೆಗೆ ಅಡ್ಡಿ ತರಲು ಪ್ರಯತ್ನಿಸಿದರು. ಆದರೆ ಮಧ್ಯಪ್ರದೇಶ ಪೊಲೀಸರ ಸಕಾಲಿಕ ಕ್ರಮದಿಂದ ಈ ಅಡ್ಡಿಯನ್ನು ನಿವಾರಿಸಲಾಯಿತು. ವಂಚನೆ ಪ್ರಕರಣಕ್ಕೆ ಸಂಬಂಧಿಸಿ 3 ಆರೋಪಿಗಳನ್ನು ಬಂಧಿಸಲಾಗಿದೆ ಎಂದವರು ಹೇಳಿದ್ದಾರೆ.

ವಂಚನೆ ಪ್ರಕರಣದ ಪ್ರಧಾನ ರೂವಾರಿಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆ ಮುಂದುವರಿದಿದೆ. ಅಕ್ರಮ ವ್ಯವಹಾರದಿಂದ ಸಂಗ್ರಹಿಸಿದ ಹಣದಿಂದ ರಿಯಲ್ ಎಸ್ಟೇಟ್, ಮಾಧ್ಯಮ ಕ್ಷೇತ್ರದಲ್ಲಿ 8 ಕಂಪೆನಿಗಳನ್ನು ಆರಂಭಿಸಿ ಹಣ ಸಕ್ರಮಗೊಳಿಸುವ ಸಂಚು ಹೂಡಿದ್ದರು. ಲಾಕ್‌ಡೌನ್ ಸಂದರ್ಭದಲ್ಲೂ ಯಾವುದೇ ಅಡೆತಡೆಯಿಲ್ಲದೆ ಪಾನ್‌ಮಸಾಲಾ ಅಕ್ರಮ ಉತ್ಪಾದನೆ ಮುಂದುವರಿದಿರುವ ಸಂಭವವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News