ಪ್ರಜಾಪ್ರಭುತ್ವದಿಂದ ವೇಗವಾಗಿ ಕಳಚಿಕೊಳ್ಳುತ್ತಿರುವ ಭಾರತ!

Update: 2020-06-13 19:30 GMT

 ಕೋವಿಡ್-19 ಸಾಂಕ್ರಾಮಿಕದ ಹಾವಳಿಯು ಕಳೆದ 30 ವರ್ಷಗಳ ನಮ್ಮ ದೇಶದ ಅಭಿವೃದ್ಧಿಯ ಸಂಪೂರ್ಣ, ಕೂಲಂಕಶ ಮತ್ತು ನಿರ್ದಯವಾದ ‘ಭೌತಿಕ ಪರೀಕ್ಷೆ’ಯನ್ನು ನಡೆಸಿದೆಯೆಂದು ಮ್ಯಾಗ್ಸೆಸೆ ಪುರಸ್ಕೃತ ಪತ್ರಕರ್ತ ಪಿ. ಸಾಯಿನಾಥ್ ಅಭಿಪ್ರಾಯಿಸಿದ್ದಾರೆ. ಪತ್ರಿಕೋದ್ಯಮ ಕುರಿತ ಡಿಜಿಟಲ್ ಆಡಿಯೊ ಜಾಲತಾಣ (ಪಾಡ್‌ಕಾಸ್ಟ್)ವಾದ ‘ಜೆ-ಪಾಡ್’ ನಲ್ಲಿ ಅವರು ಕೋವಿಡ್-19 ಹಾವಳಿ, ವಲಸೆ ಕಾರ್ಮಿಕರು ಹಾಗೂ ಕಾರ್ಮಿಕ ಕಾನೂನುಗಳನ್ನು ಪುನರ್ ರೂಪಿಸುವ ‘ಮೂರ್ಖತನದ’ ನಿರ್ಧಾರಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಸದೀಯ ಪ್ರಜಾಸತ್ತೆಯು ನಮ್ಮ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಕಳಚಿಕೊಳ್ಳುತ್ತಾ ಹೋಗುವುದನ್ನು ನಾವು ಕಾಣುತ್ತಿದ್ದೇವೆ. ಇದಕ್ಕೆ ಹೋಲಿಸಿದರೆ ತುರ್ತುಪರಿಸ್ಥಿತಿಯ ದಿನಗಳು ಏನೇನೂ ಅಲ್ಲ ಎಂದವರು ಹೇಳಿದ್ದಾರೆ. ನಗದು ಅಮಾನ್ಯದ ಬಳಿಕ ನಾವು ಅಭಿವೃದ್ಧಿಯೆಡೆಗೆ ಸಾಗಲೂ ಸಾಧ್ಯವಿತ್ತು. ಆದರೆ ಈಗ ಬೆಂಕಿ ನಮ್ಮ ಮನೆಬಾಗಿಲಿಗೆ ಬಂದುಬಿಟ್ಟಿದೆ ಎಂದಿದ್ದಾರೆ.
‘ದಿ ಟೈಮ್ಸ್’ ಪತ್ರಿಕೆಯ ಪುರವಣಿಗಳಲ್ಲಿ ದೊರೆಯುವಂತಹ ವಿಷಯಗಳನ್ನು ಹೊರತುಪಡಿಸಿದ ಪತ್ರಿಕೋದ್ಯಮವೆಂಬುದೇ ಇಲ್ಲ ಮತ್ತು ನೂತನ ಆರ್ಥಿಕ ಉದಾರೀಕರಣಕ್ಕಿಂತ ಹೊರತಾದ ಇನ್ನೊಂದು ಆರ್ಥಿಕತೆ ಇಲ್ಲ ಎಂದು ನಂಬುತ್ತಲೇ ಯುವಜನರ ತಲೆಮಾರೊಂದು ಬೆಳೆದುಬಿಟ್ಟಿದೆ. ಎಂದು ಸಾಯಿನಾಥ್ ತನ್ನ ಪಾಡ್‌ಕಾಸ್ಟ್ ಭಾಷಣದಲ್ಲಿ ವಿಷಾದಿಸಿದ್ದಾರೆ.
 ಆದಾಗ್ಯೂ ಲಾಕ್‌ಡೌನ್‌ನಿಂದ ತಲೆದೋರಿರುವ ವಲಸಿಗರ ಬಿಕ್ಕಟ್ಟು ಪತ್ರಕರ್ತರಲ್ಲಿ ಅದರಲ್ಲೂ ಯುವಪತ್ರಕರ್ತರಲ್ಲಿ ದೊಡ್ಡದೊಂದು ಪರಿಣಾಮವನ್ನು ಉಂಟು ಮಾಡಿದೆ ಎಂದವರು ಅಭಿಪ್ರಾಯಿಸಿದ್ದಾರೆ.
  ಸಾಯಿನಾಥ್ ಅವರ ಜೆ-ಪಾಡ್ ಭಾಷಣದ ಆಯ್ದ ತುಣುಕುಗಳ ಇತರ ಕೆಲವು ಅಂಶಗಳನ್ನು ಇಲ್ಲಿ ನೀಡಲಾಗಿದೆ.

ಕೋವಿಡ್-19 ಪಿಡುಗಿನ ಬಳಿಕ ವಿಧಾನಸಭೆಗಳು ಕಾರ್ಯನಿರ್ವಹಿಸುತ್ತಿಲ್ಲ. ಮುಖ್ಯಮಂತ್ರಿ ಅವರು ತಮಗೆ ಬರಲು ಬಾಕಿಯಿರುವ ಜಿಎಸ್‌ಟಿ ನಿಧಿಯನ್ನು ಹಿಂಡುತ್ತಿರುವ ಕೇಂದ್ರ ಸರಕಾರದ ಕೃಪೆಯೊಂದಿಗೆ ಕೆಲಸ ಮಾಡಬೇಕಾದ ಪರಿಸ್ಥಿತಿಯಿದೆ. ಅಲ್ಲದೆ ಖಾಸಗಿಯಾಗಿ ನೋಂದಾವಣೆಗೊಂಡಿರುವ ಪಿಎಂ ಕೇರ್ಸ್ ಟ್ರಸ್ಟ್ ರಾಜ್ಯಗಳಿಂದ ಹಣವನ್ನು ಕಿತ್ತುಕೊಳ್ಳುತ್ತಿದೆ ಎಂದವರು ಹೇಳಿದ್ದಾರೆ.

ಬಿಜೆಪಿಯ ಮೂರು ರಾಜ್ಯಗಳು ಹಾಗೂ ಕಾಂಗ್ರೆಸ್ ಆಡಳಿತದ ಎರಡು ರಾಜ್ಯಗಳಲ್ಲಿ ದಿನದ ದುಡಿಮೆಯ ಅವಧಿಯನ್ನು 8 ರಿಂದ 12 ತಾಸುಗಳಿಗೆ ವಿಸ್ತರಿಸುವ ನಿರ್ಧಾರವು, ಇತಿಹಾಸದ ಜ್ಞಾನವಿಲ್ಲದ ಮೂರ್ಖರು ಕೈಗೊಂಡಿರುವ ಕ್ರಮವಾಗಿದೆ. ಅಮೆರಿಕದಲ್ಲಿ ಬಂಡವಾಳಶಾಹಿ ಗುಂಪುಗಳು ದಿನಕ್ಕೆ 8 ತಾಸುಗಳ ದುಡಿಮೆಯನ್ನು ಅಂಗೀಕರಿಸಿದ್ದರು. ಯಾಕೆಂದರೆ 8 ತಾಸುಗಳ ಆನಂತರ ನೌಕರನ ಉತ್ಪಾದನಾಶೀಲತೆಯು ಬತ್ತಿಹೋಗತೊಡಗುತ್ತದೆ. ಅಂದರೆ ನೀವು ಕಡಿಮೆ ದುಡಿಮೆಗಾಗಿ ಹೆಚ್ಚು ವೇತನವನ್ನು ಪಾವತಿಸಿದ ಹಾಗಾಗುತ್ತದೆ ಎಂಬ ನಿಲುವನ್ನು ಅವರು ಹೊಂದಿದ್ದರು.
ಭಾರತವು ಈಗ ಸಾಮಾಜಿಕ-ಧಾರ್ಮಿಕ ಮೂಲಭೂತವಾದಿಗಳು ಹಾಗೂ ಆರ್ಥಿಕತೆ-ಮಾರುಕಟ್ಟೆ ಮೂಲ ಭೂತವಾದಿಗಳ ಮೈತ್ರಿಕೂಟದ ಹಿಡಿತಕ್ಕೆ ಸಿಲುಕಿದೆ. ಕಾರ್ಪೊರೇಟ್ ಮಾಧ್ಯಮಗಳು, ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಅವು ಜೊತೆ ಜೊತೆಯಾಗಿ ವಿಹರಿಸುತ್ತಿವೆ.

‘‘ಕೋವಿಡ್-19 ನಮಗೆ ಭಾರತೀಯ ಸಮಾಜದ ‘ಭೌತಿಕಪರೀಕ್ಷ್ಷೆೆ’ (ಆಟಾಪ್ಸಿ) ಯನ್ನು ನಡೆಸಿಕೊಟ್ಟಿದೆ. ಮಾತ್ರವಲ್ಲದೆ ಉನ್ನತವರ್ಗದಲ್ಲಿ ರುವವರ ವಿಚಾರ ಧಾರೆಯ ಹಾಗೂ ಮಾಧ್ಯಮಗಳ ಚಿಂತನೆಯ ಅವಲೋಕನ ನಡೆಸಲು ಅವಕಾಶ ಮಾಡಿಕೊಟ್ಟಿದೆ’’.

ಪ್ರಮುಖ ಸಂಪಾದಕರೊಬ್ಬರು ತನ್ನದೇ ಆನ್‌ಲೈನ್ ಟಿವಿ ಜಾಲತಾಣವೊಂದರಲ್ಲಿ ‘‘ಒಂದು ಒಳ್ಳೆಯ ಬಿಕ್ಕಟ್ಟು ಹಾಗೆಯೇ ವ್ಯರ್ಥವಾಗಲು ಬಿಡಬಾರದು’’ ಎಂದು ಹೇಳಿಕೊಂಡಿದ್ದಾರೆ. ಅದರಂತೆಯೇ (ಲಾಕ್‌ಡೌನ್ ಸಮಯದಲ್ಲಿ) ಕಾರ್ಮಿಕ ಸುಧಾರಣೆಗಳ ಕಾನೂನನ್ನು ಹೇರಲು ಇದು ‘ಸಕಾಲ’ವಾಗಿದೆ. ಭಾರತದ ಗಣ್ಯ ವರ್ಗವು ಸಮಾಜದ ದುರ್ಬಲ ವರ್ಗಗಳ ಬಗ್ಗೆ ಪ್ರದರ್ಶಿಸುತ್ತಿರುವ ಕ್ರೌರ್ಯ, ಸುಲಿಗೆ ಪ್ರವೃತ್ತಿ ಹಾಗೂ ನಿರ್ದಯತೆಗಳ ಬಗ್ಗೆ ಈ ಕಾನೂನು ಏನನ್ನು ಹೇಳುತ್ತದೆ?

ಪತ್ರಿಕೋದ್ಯಮದ ಬಗ್ಗೆ ಸಾಯಿನಾಥ್ ಹೇಳಿದ್ದಿಷ್ಟು
 1. ಸರಾಸರಿ ಪ್ರತಿಯೊಂದು ರಾಷ್ಟ್ರೀಯ ಸುದ್ದಿಪತ್ರಿಕೆಯು ದೇಶದ ಶೇ.69ರಷ್ಟು ಜನರು ವಾಸಿಸುವ ಗ್ರಾಮೀಣ ಭಾಗದ ಸುದ್ದಿಗಳಿಗೆ ತನ್ನ ಮುಖಪುಟದ 0.27 ಶೇ.ದಷ್ಟನ್ನು ಮಾತ್ರವೇ ನೀಡಿವೆ. ಚುನಾವಣಾ ವರ್ಷವನ್ನು ಹೊರಗಿಟ್ಟಲ್ಲಿ, ಗ್ರಾಮೀಣ ಸುದ್ದಿಗಳ ಕವರೇಜ್ 0.18ರಿಂದ 0.24ಗೆ ಇಳಿಯುತ್ತದೆ.

2. ಚುನಾವಣಾ ಸಮಯವೊಂದನ್ನು ಹೊರತುಪಡಿಸಿದಲ್ಲಿ ಶೇ.75ರಷ್ಟು ಜನರ ಸುದ್ದಿಯನ್ನೇ ಮಾಡುವುದಿಲ್ಲವೆಂದು ಮಾಧ್ಯಮಗಳು ನಿರ್ಧರಿಸಿದಂತಿವೆ.

3. ಮಾರ್ಚ್ 25ರಿಂದೀಚೆಗೆ ಸುಮಾರು 1 ಸಾವಿರ ಪತ್ರಕರ್ತರು ಉದ್ಯೋಗ ಕಳೆದುಕೊಂಡಿದ್ದಾರೆ. ಪತ್ರಕರ್ತರ ಅವಶ್ಯಕತೆ ಅತ್ಯಂತ ಅಗತ್ಯವಾಗಿರುವ ಈ ಸನ್ನಿವೇಶದಲ್ಲಿ, ಶೇರುಪೇಟೆಯಲ್ಲಿನ ಟಾಪ್ 30 ಕಂಪೆನಿಗಳು ಕೂಡಾ ಅಸೂಯೆಪಡುವಷ್ಟು ಲಾಭ ಮಾಡುವ ಮಾಧ್ಯಮಸಂಸ್ಥೆಗಳು ಪತ್ರಕರ್ತರನ್ನು ಹೊರಹಾಕುತ್ತಿವೆ.

4. ನಮ್ಮ ದೇಶದ ಸುದ್ದಿಗಳಿಗಿಂತಲೂ, ನೆರೆಯ ದೇಶದ ಸುದ್ದಿಯನ್ನು ವರದಿ ಮಾಡುವಂತಹ ಟಿವಿ ಚಾನೆಲ್‌ಗಳಿರುವ ಏಕೈಕ ದೇಶ ನಮ್ಮದಾಗಿದೆ.

5. ಸಾಲಿಸಿಟರ್ ಜನರಲ್ ಮಾಧ್ಯಮರಂಗವನ್ನು ತರಾಟೆಗೆ ತೆಗೆದುಕೊಂಡಿದ್ದಾಗ ನನಗೆ ಅಚ್ಚರಿಯಾಗಿತ್ತು. ಅವರು ಯಾವ ಮಾಧ್ಯಮದ ಬಗ್ಗೆ ಮಾತನಾಡುತ್ತಿದ್ದಾರೆ ಎಂದುಕೊಂಡೆ. ಯಾಕೆಂದರೆ, ಶೇ.95ರಷ್ಟು ಮಾಧ್ಯಮಗಳು ಅವರ ಜೊತೆಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News