ಭಾರತದ ಹಲವೆಡೆ ಕೊರೋನ ಸಾಮುದಾಯಿಕವಾಗಿ ಹರಡುತ್ತಿದೆ: ತಜ್ಞರ ಎಚ್ಚರಿಕೆ

Update: 2020-06-13 17:27 GMT

ಹೊಸದಿಲ್ಲಿ, ಜೂ. 13: ದೇಶಾದ್ಯಂತ ಕೊರೋನ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿರುವ ಹೊರತಾಗಿಯೂ, ಕೋವಿಡ್-19 ಸಾಮುದಾಯಿಕವಾಗಿ ಹರಡುತ್ತಿಲ್ಲವೆಂಬ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಸಮೀಕ್ಷಾ ವರದಿಯನ್ನು ವೈದ್ಯಕೀಯ ತಜ್ಞರು ತೀವ್ರವಾಗಿ ಖಂಡಿಸಿದ್ದಾರೆ.

ಐಸಿಎಎಂಆರ್‌ನ ವರದಿಯು ಪ್ರಸಕ್ತ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತಿಲ್ಲ ಹಾಗೂ ಸತ್ಯವನ್ನು ಒಪ್ಪಿಕೊಳ್ಳಲು ಕೇಂದ್ರ ಸರಕಾರವು ಹಠಮಾರಿತನ ಪ್ರದರ್ಶಿಸುತ್ತಿದೆ ಎಂದವರು ಆರೋಪಿಸಿದ್ದಾರೆ.

ಕೊರೋನ ವೈರಸ್ ಸೋಂಕಿನ ಸಾಮುದಾಯಿಕ ಹರಡುವಿಕೆಯು ದೇಶದ ಹಲವಾರು ಭಾಗಗಳಲ್ಲಿ ನಡೆಯುತ್ತಿದ್ದು, ಇದನ್ನು ಕೇಂದ್ರ ಸರಕಾರವು ಒಪ್ಪಿಕೊಳ್ಳಬೇಕೆಂದು ತಜ್ಞರು ಆಗ್ರಹಿಸಿದ್ದಾರೆ.

   ಭಾರತದಲ್ಲಿ ಸಾಮುದಾಯಿಕವಾಗಿ ಕೊರೋನ ವೈರಸ್ ಹರಡುತ್ತಿಲ್ಲವೆಂದು ಐಸಿಎಂಆರ್‌ನ ಮಹಾನಿರ್ದೇಶಕ ಬಲರಾಮ್ ಭಾರ್ಗವ ಅವರು ಸುದ್ದಿ ಗೋಷ್ಠಿಯೊಂದರಲ್ಲಿ ಗುರುವಾರ ತಿಳಿಸಿದ ಬಳಿಕ ವೈರಾಣುಶಾಸ್ತ್ರ,, ಸಾರ್ವಜನಿಕ ಆರೋಗ್ಯ ಹಾಗೂ ಔಷಧಿ ವಲಯದ ತಜ್ಞರಿಂದ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ನ ಮಾಜಿ ನಿರ್ದೇಶಕ ಡಾ. ಎಂ.ಸಿ. ಮಿಶ್ರಾ ಕೂಡಾ ದೇಶದ ವಿವಿಧ ಭಾಗಗಳಲ್ಲಿ ಸಾಮುದಾಯಿಕ ಹರಡುವಿಕೆ ನಡೆಯುತ್ತಿದೆಯೆಂಬುದರಲ್ಲಿ ಸಂದೇಹವಿಲ್ಲವೆಂದು ಹೇಳಿದ್ದಾರೆ.

    ‘ಗ್ರಾಮೀಣ ಭಾಗಗಳಿಗೂ ಹರಡುತ್ತಿದೆ’ ‘‘ನಗರಗಳಿಂದ ಹಳ್ಳಿಗಳಿಗೆ ಮಹಾವಲಸೆ ಹಾಗೂ ಲಾಕ್‌ಡೌನ್ ಸಡಿಲಿಕೆಯಿಂದಾಗಿ ಸೋಂಕು ಕ್ಷಿಪ್ರವಾಗಿ ಹರಡುತ್ತಿದ್ದು, ಈತನಕ ಪ್ರಕರಣಗಳು ವರದಿಯಾಗದ ಪ್ರದೇಶಗಳಿಗೂ ಅದು ತಲುಪಿದೆ. ಹೀಗಾಗಿ ಸರಕಾರವು ತಾನಾಗಿಯೇ ಮುಂದೆ ಬಂದು ಸೋಂಕು ಸಾಮುದಾಯಿಕವಾಗಿ ಹರಡುತ್ತಿರುವುದನ್ನು ಒಪ್ಪಿಕೊಳ್ಳಬೇಕು. ಹಾಗಾದಲ್ಲಿ ಜನರು ಪ್ರಸಕ್ತ ಪರಿಸ್ಥಿತಿಯ ಬಗ್ಗೆ ತೃಪ್ತಿಪಟ್ಟುಕೊಳ್ಳದೆ, ಹೆಚ್ಚು ಜಾಗೃತರಾಗಿರುತ್ತಾರೆಂದು ಮಿಶ್ರಾ ತಿಳಿಸಿದ್ದಾರೆ.

 ಖ್ಯಾತ ವೈರಾಣು ತಜ್ಞ ಶಾಹೀದ್ ಜಮೀಲ್ ಅವರು ಸಹ ಭಾರತದಲ್ಲಿ ಸಮುದಾಯಿಕ ಹರಡುವಿಕೆಯ ಹಂತವನ್ನು ತಲುಪಿದೆಯೆಂದು ತಿಳಿಸಿದ್ದಾರೆ.

  ‘‘ತೀವ್ರವಾದ ಉಸಿರಾಟದ ಅಸ್ವಸ್ಥತೆ (ಎಸ್‌ಎಆರ್‌ಐ)ಕುರಿತಾದ ಐಸಿಎಂಆರ್‌ನ ಅಧ್ಯಯನ ವರದಿಯೇ, ಕೊರೋನ ವೈರಸ್ ಸೋಂಕು ಪ್ರದರ್ಶಿಸಿದ ಶೇ.40 ಮಂದಿಗೆ ಸಾಗರೋತ್ತರ ಪ್ರಯಾಣದ ಇತಿಹಾಸವಿಲ್ಲ ಅಥವಾ ಪರಿಚಿತ ಸೋಂಕಿತನ ಸಂಪರ್ಕಕ್ಕೆ ಬಂದಿರಲಿಲ್ಲವೆಂದು ತಿಳಿಸಿದೆ. ಇದು ಸಾಮುದಾಯಿಕ ಹರಡುವಿಕೆ ಅಲ್ಲವಾದರೆ ಇನ್ನೇನು? ’’ಎಂದವರು ಪ್ರಶ್ನಿಸಿದ್ದಾರೆ.

ದಿಲ್ಲಿ, ಅಹ್ಮದಾಬಾದ್ ಹಾಗೂ ಮುಂಬೈನಂತಹ ಸ್ಥಳಗಳಲ್ಲಿ ಸೋಂಕು ಸಾಮುದಾಯಿಕವಾಗಿ ಹರಡುತ್ತಿದೆಯೆಂಬುದನ್ನು ತಳ್ಳಿಹಾಕಲು ಸಾಧ್ಯವಿಲ್ಲವೆಂದು ಖ್ಯಾತ ಶ್ವಾಸಕೋಶ ತಜ್ಞ ಡಾ. ಅರವಿಂದ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News