×
Ad

ಅಟ್ಲಾಂಟಾ: ಪೊಲೀಸರ ಗುಂಡಿಗೆ ಕಪ್ಪು ಜನಾಂಗೀಯ ಬಲಿ

Update: 2020-06-14 22:07 IST
ಸಾಂದರ್ಭಿಕ ಚಿತ್ರ

ಅಟ್ಲಾಂಟಾ, ಜೂ.14: ಪೊಲೀಸ್ ಅಧಿಕಾರಿಯೊಬ್ಬರು ಕಪ್ಪು ಜನಾಂಗೀಯ ನೊಬ್ಬನನ್ನು ಸೆರೆಹಿಡಿಯುವ ಸಂದರ್ಭ ಆತನಿಗೆ ಗುಂಡಿಕ್ಕಿದ ಘಟನೆಗೆ ಸಂಬಂಧಿಸಿ ಅಮೆರಿಕದ ಅಟ್ಲಾಂಟಾ ನಗರದ ಪೊಲೀಸ್ ವರಿಷ್ಠರೊಬ್ಬರು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಗುಂಡೇಟಿಗೊಳಗಾದ ವ್ಯಕ್ತಿಯನ್ನು 27 ವರ್ಷ ವಯಸ್ಸಿನ ರೇಶಾರ್ಡ್ ಬ್ರೂಕ್ಸ್ ಎಂದು ಗುರುತಿಸಲಾಗಿದೆ. ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ಆತನಿಗೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತಾದರೂ, ಆತ ಕೊನೆಯುಸಿರೆಳೆದನೆಂದು ಮೂಲಗಳು ತಿಳಿಸಿವೆ.

  ಮಿನೆಪೊಲೀಸ್ ನಗರದಲ್ಲಿ ಕರಿಯ ಪ್ರಜೆ ಜಾರ್ಜ್‌ಫ್ಲಾಯ್ಡ್ ಪೊಲೀಸ್‌ ದೌರ್ಜನ್ಯಕ್ಕೆ ಬಲಿಯಾದ ಘಟನೆಯ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವಾಗಲೇ ಅಟ್ಲಾಂಟಾ ನಗರದಲ್ಲಿ ಮತ್ತೋರ್ವ ಕಪ್ಪು ಜನಾಂಗೀಯ ಪೊಲೀಸ್ ಗುಂಡೇಟಿನಿಂದ ಸಾವನ್ನಪ್ಪಿರುವುದು ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ.

ಘಟನೆಗೆ ಸಂಬಂಧಿಸಿ ಅಟ್ಲಾಂಟಾ ನಗರದ ಪೊಲೀಸ್ ವರಿಷ್ಠೆ ಎರಿಕಾ ಷೀಲ್ಡ್ಸ್ ರಾಜೀನಾಮೆ ನೀಡಿದ್ದಾರೆಂದು ಮೇಯರ್ ಕೀಶಾ ಲ್ಯಾನ್ಸ್ ಬಾಟಮ್ಸ್ ತಿಳಿಸಿದ್ದಾರೆ.

        ಕರಿಯ ಜನಾಂಗೀಯ ರೇಶಾರ್ಡ್ ಬ್ರೂಕ್ಸ್ ಶುಕ್ರವಾರ ತಡರಾತ್ರಿ ಅಟ್ಲಾಂಟಾ ನಗರದ ಫಾಸ್ಟ್‌ಫುಡ್ ರೆಸ್ಟಾರೆಂಟ್ ಒಂದರ ಮುಂದೆ ತನ್ನ ಕಾರನ್ನು ನಿಲ್ಲಿಸಿ, ಅದರಲ್ಲಿಯೇ ನಿದ್ರಿಸುತ್ತಿದ್ದ. ಬ್ರೂಕ್ಸ್ ಇತರ ಗ್ರಾಹಕರ ಆಗಮನಕ್ಕೆ ತಡೆಯೊಡ್ಡಿದ್ದಾನೆಂದು ದೂರಿ, ವೆಂಡೀಸ್ ಫಾಸ್ಟ್‌ಫುಡ್ ರೆಸ್ಟಾರೆಂಟ್‌ನ ಉದ್ಯೋಗಿಗಳು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬ್ರೂಕ್ಸ್‌ನನ್ನು ಬಂಧಿಸಲು ಯತ್ನಿಸಿದಾಗ ಆತ ಪ್ರತಿಭಟಿಸಿದ್ದ. ಈ ಸಂದರ್ಭದಲ್ಲಿ ಆತ ಪೊಲೀಸರೊಂದಿಗೆ ಹೊಯ್ ಕೈ ಕೂಡಾ ನಡೆಸಿದ್ದನೆನ್ನಲಾಗಿದೆ. ಆನಂತರ ಆತ ಓರ್ವ ಅಧಿಕಾರಿಯ ಟೇಸರ್ ಪಿಸ್ತೂಲ್ ( ಚರ್ಮಕ್ಕೆ ಸಣ್ಣ ಗಾಯವನ್ನುಂಟು ಮಾಡಬಲ್ಲ ಡಾರ್ಟ್ ಗುಂಡುಗಳನ್ನು ಎಸೆಯುವ ಅಸ್ತ್ರ) ಅನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಆಗ ಪೊಲೀಸ್ ಅಧಿಕಾರಿಗಳು ಆತನನ್ನು ಬೆನ್ನಟ್ಟಿದ್ದಾಗ, ಬ್ರೂಕ್ಸ್ ತನ್ನಲ್ಲಿದ್ದ ಟೇಸರ್ ಪಿಸ್ತೂಲಿನಿಂದ ಅಧಿಕಾರಿಗಳೆಡೆಗೆ ಗುರಿಯಿರಿಸಿದ್ದ. ಆಗ ಪೊಲೀಸರು ಆತನಿಗೆ ಗುಂಡಿಕ್ಕಿದರು ಎಂದು ಮೂಲಗಳು ತಿಳಿಸಿವೆ.

ಬ್ರೂಕ್ಸ್‌ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಯಿತಾದರೂ, ಅದು ಫಲಿಸದೆ ಆತ ಕೊನೆಯುಸಿರೆಳೆದಿದ್ದ.

  ಈ ಮಧ್ಯೆ ಬ್ರೂಕ್ಸ್ ಸಾವಿನ ವಿರುದ್ಧ ಅಟ್ಲಾಂಟಾ ನಗರದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಶನಿವಾರ ರಾತ್ರಿ ಪ್ರತಿಭಟನಕಾರರ ಗುಂಪೊಂದು ವೆಂಡೀಸ್ ರೆಸ್ಟಾರೆಂಟ್‌ಗೆ ಬೆಂಕಿ ಹಚ್ಚಿದೆ ಹಾಗೂ ಸಮೀಪದ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಡೆಹಿಡಿದಿದೆ. ಶನಿವಾರ ಮಧ್ಯರಾತ್ರಿ ನಡೆದ ಪ್ರತಿಭಟನೆಗೆ ಸಂಬಂಧಿಸಿ 36 ಮಂದಿಯನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News