ದ.ಕೊರಿಯದ ವಿರುದ್ಧ ಮಿಲಿಟರಿ ಕಾರ್ಯಾಚರಣೆ: ಕಿಮ್ ಜಾಂಗ್ ಉನ್ ಸೋದರಿ ಬೆದರಿಕೆ

Update: 2020-06-14 17:27 GMT

ಸೋಲ್,ಜೂ.14: ಉತ್ತರ ಕೊರಿಯದ ಜೊತೆ ದ್ವಿಪಕ್ಷೀಯ ಬಾಂಧವ್ಯಗಳನ್ನು ಬೆಸೆಯಲು ದಕ್ಷಿಣ ಕೊರಿಯ ನಿರಾಕರಿಸುತ್ತಿದೆಯೆಂದು ಉತ್ತರ ಕೊರಿಯದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್‌ನ ಪ್ರಭಾವಿ ಸೋದರಿ ಕಿಮ್ ಯಿ ಯೊಂಗ್ ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಕೊರಿಯ ಆಡಳಿತದ ವಿರುದ್ಧ ಗಡಿಯಾಚೆಗೆ ಕರಪತ್ರಗಳನ್ನು ವಿತರಣೆಯಂತಹ ವಿಚ್ಛಿದ್ರಕಾರಿ ಚಟುವಟಿಕೆಗಳನ್ನು ನಿಲ್ಲಿಸಲು ದಕ್ಷಿಣ ಕೊರಿಯ ಪ್ರಯತ್ನಿಸುತ್ತಿಲ್ಲವೆಂದು ಅವರು ಕಿಡಿಕಾರಿದ್ದಾರೆ.

  ಈ ಬಗ್ಗೆ ಕಿಮ್ ಯಿ ಯೊಂಗ್ ನೀಡಿರುವ ಪತ್ರಿಕಾ ಹೇಳಿಕೆಯೊಂದರಲ್ಲಿ ಅವರು ದಕ್ಷಿಣ ಕೊರಿಯವನ್ನು, ತನ್ನ ದೇಶದ ಶತ್ರುವೆಂದು ಬಣ್ಣಿಸಿದ್ದಾರೆ. ಉತ್ತರ ಕೊರಿಯದ ಗಡಿಪಟ್ಟಣವಾದ ಕಾಯೆಸೊಂಗ್‌ನಲ್ಲಿ ಉಭಯದೇಶಗಳ ಬಾಂಧವ್ಯ ವೃದ್ಧಿಗಾಗಿ ಸ್ಥಾಪಿಸಲಾಗಿರುವ ಅಂತರ್ ಕೊರಿಯ ಸಂಪರ್ಕ ಕಚೇರಿಯು ನಿಷ್ಪ್ಪ್ರಯೋಜಕವಾಗಿದ್ದು, ಸದ್ಯದಲ್ಲೇ ಅದು ಪತನಗೊಳ್ಳಲಿದೆಯೆಂದು ಆಕೆ ಹೇಳಿದ್ದಾರೆ.

ದಕ್ಷಿಣ ಕೊರಿಯದ ವಿರುದ್ಧ ಪ್ರತೀಕಾರ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಇಡುವ ನಿರ್ಧಾರವನ್ನು ಉತ್ತರ ಕೊರಿಯದ ಸೇನಾ ನಾಯಕರಿಗೆ ಬಿಟ್ಟುಕೊಡುವುದಾಗಿ ಆಕೆ ತಿಳಿಸಿದರು.

 ಕಿಮ್ ಯಿ ಯೊಂಗ್ ಅವರು ಉತ್ತರ ಕೊರಿಯದ ಆಡಳಿತಾರೂಢ ಕಾರ್ಮಿಕರ ಪಕ್ಷದ ಕೇಂದ್ರೀಯ ಸಮಿತಿಯ ಉಪನಿರ್ದೇಶಕಿಯಾಗಿದ್ದಾರೆ.

ದಕ್ಷಿಣ ಕೊರಿಯ ವಿರುದ್ಧ ಕಿಮ್ ಅವರ ಕಠೋರವಾದ ವಾಗ್ದಾಳಿಯು, ಉತ್ತರ ಕೊರಿಯದ ನಾಯಕತ್ವದಲ್ಲಿ ಆಕೆಯ ಉನ್ನತ ಸ್ಥಾನಮಾನ ದೊರೆತಿರುವುದನ್ನು ಸೂಚಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ. ಈಗಾಗಲೇ ಉತ್ತರ ಕೊರಿಯದ ಅತ್ಯಂತ ಪ್ರಭಾವಿ ಮಹಿಳೆಯಾದ ಕಿಮ್ ಯಿ ಯೊಂಗ್ ಅವರು ದಕ್ಷಿಣ ಕೊರಿಯದ ಜೊತೆಗಿನ ಬಾಂಧವ್ಯಗಳ ಉಸ್ತುವಾರಿಯನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News