ಏನಿದು ವಾಕಿಂಗ್ ನ್ಯುಮೋನಿಯಾ?

Update: 2020-06-14 18:29 GMT

ವಾಕಿಂಗ್ ನ್ಯುಮೋನಿಯಾ ಸೌಮ್ಯ ಲಕ್ಷಣಗಳೊಂದಿಗಿನ ಉಸಿರಾಟ ವ್ಯವಸ್ಥೆಯ ಸೋಂಕು ಆಗಿದ್ದು,ಹೆಚ್ಚು ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುತ್ತದೆ.

ನ್ಯುಮೋನಿಯಾದ ಚಿಕಿತ್ಸೆಗೆ ಬಳಸುವ ಔಷಧಿಗೆ ವಾಕಿಂಗ್ ನ್ಯುಮೋನಿಯಾ ಪ್ರತಿರೋಧಕತೆಯನ್ನು ಹೊಂದಿರುವುದರಿಂದ ಇದನ್ನು ಅಟಿಪಿಕಲ್ ನ್ಯುಮೋನಿಯಾ ಎಂದೂ ಕರೆಯಲಾಗುತ್ತದೆ. ಈ ನ್ಯುಮೋನಿಯಾ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಉಸಿರಾಟ ಸೋಂಕು ಆಗಿದ್ದು,ಶ್ವಾಸನಾಳದ ಮೇಲ್ಭಾಗ ಮತ್ತು ಕೆಳಭಾಗವನ್ನು ಕಾಡುತ್ತದೆ ಮತ್ತು ಇದೇ ಕಾರಣದಿಂದ ಹೆಚ್ಚಿನ ಜನರು ಇದನ್ನು ಬ್ರಾಂಕೈಟಿಸ್ ಎಂದು ತಪ್ಪಾಗಿ ಗ್ರಹಿಸುತ್ತಾರೆ. ವಾಕಿಂಗ್ ನ್ಯುಮೋನಿಯಾದ ಲಕ್ಷಣಗಳು ಎಷ್ಟು ಸೌಮ್ಯವಾಗಿರುತ್ತವೆ ಎಂದರೆ ಕೆಲವೊಮ್ಮೆ ಈ ಸಮಸ್ಯೆ ಗಮನಕ್ಕೇ ಬರುವುದಿಲ್ಲ. ಲಕ್ಷಣಗಳನ್ನು ಗುರುತಿಸಲಾಗುವ ಗಂಭೀರ ಪ್ರಕರಣಗಳಲ್ಲಿ ಮಾತ್ರ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗುತ್ತದೆ. ವಯಸ್ಕರಿಗಿಂತ ಮಕ್ಕಳು ಹೆಚ್ಚಾಗಿ ಈ ಸೋಂಕಿಗೆ ಗುರಿಯಾಗುತ್ತಾರೆ. ವಾಕಿಂಗ್ ನ್ಯುಮೋನಿಯಾ ಒಂದು ವಾರದಿಂದ ಒಂದು ತಿಂಗಳವರೆಗೂ ಇರಬಹುದು.

ಲಕ್ಷಣಗಳು

 ವಾಕಿಂಗ್ ನ್ಯುಮೋನಿಯಾದ ಲಕ್ಷಣಗಳು ಸೌಮ್ಯವಾಗಿದ್ದು, ಸಾಮಾನ್ಯ ಶೀತದ ಲಕ್ಷಣಗಳನ್ನೇ ಹೋಲುತ್ತವೆ. ಆರಂಭದಲ್ಲಿ ಬಾಧಿತ ವ್ಯಕ್ತಿಯು ಒಂದು ವಾರದವರೆಗೆ ಯಾವುದೇ ವಿಭಿನ್ನ ಲಕ್ಷಣಗಳನ್ನು ತೋರಿಸುವುದಿಲ್ಲ,ಹೀಗಾಗಿ ಸಮಸ್ಯೆಯನ್ನು ಗುರುತಿಸುವುದು ಕಷ್ಟವಾಗುತ್ತದೆ. ಒಂದು ವಾರ ಅಥವಾ ಅದಕ್ಕೂ ಹೆಚ್ಚಿನ ಅವಧಿಯ ನಂತರವಷ್ಟೇ ಲಕ್ಷಣಗಳು ತೀವ್ರವಾದಾಗ ಸಮಸ್ಯೆಯು ಗುರುತಿಸಲ್ಪಡುತ್ತದೆ. ಸಾಮಾನ್ಯ ಶೀತ, ನಿರಂತರವಾಗಿ ಒಣಕೆಮ್ಮು, ಗಂಟಲು ಕೆರೆತ, ತಲೆನೋವು, ಗಂಟಲಿನಲ್ಲಿ ಉರಿಯೂತ, ಚಳಿ, ಉಸಿರಾಟಕ್ಕೆ ಕಷ್ಟ, ತ್ವರಿತ ಉಸಿರಾಟ, ಉಬ್ಬಸ, ಎದೆನೋವು,ವಾಂತಿ,ಹೊಟ್ಟೆನೋವು,ಹಸಿವು ಕ್ಷೆಣ ಇವು ವಾಕಿಂಗ್ ನ್ಯುಮೋನಿಯಾ ರೋಗಿಯಲ್ಲಿ ಕಂಡುಬರುವ ಲಕ್ಷಣಗಳಾಗಿವೆ.

ವಿಧಗಳು

ವಾಕಿಂಗ್ ನ್ಯುಮೋನಿಯಾವನ್ನುಂಟು ಮಾಡುವ ಬ್ಯಾಕ್ಟೀರಿಯಾವನ್ನು ಆಧರಿಸಿ ಈ ರೋಗವನ್ನು ಮೂರು ವಿಧಗಳಲ್ಲಿ ವಿಂಗಡಿಸಲಾಗಿದೆ.

ಮೈಕೋಪ್ಲಾಸ್ಮಾ ನ್ಯುಮೋನಿಯಾ: ಮೈಕೋಪ್ಲಾಸ್ಮಾ ನ್ಯುಮೋನಿಯೇ ಬ್ಯಾಕ್ಟೆರಿಯಾ ದಿಂದ ಉಂಟಾಗುವ ಇದು ಇತರ ಎರಡು ವಿಧಗಳಿಗೆ ಹೋಲಿಸಿದರೆ ಸೌಮ್ಯವಾಗಿದೆ. ಇದು ಮಕ್ಕಳಲ್ಲಿ ಅತ್ಯಂತ ಸಾಮಾನ್ಯವಾಗಿದೆ.

ಕ್ಲಾಮಿಡಿಯಲ್ ನ್ಯುಮೋನಿಯಾ: ಇದು ಕ್ಲಾಮಿಡಿಯಾ ನ್ಯುಮೋನಿಯೇ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕು ಆಗಿದೆ.

  ಲೆಜನೆಲ್ಲಾ ನ್ಯುಮೋನಿಯಾ: ಲೆಜನೇರಿಸ್ ಡಿಸೀಸ್ ಎಂದೂ ಕರೆಯಲಾಗುವ ಇದು ಗಂಭೀರ ವಿಧದ ವಾಕಿಂಗ್ ನ್ಯುಮೋನಿಯಾ ಆಗಿದ್ದು,ತೀವ್ರ ಸ್ಥಿತಿಯಲ್ಲಿ ಉಸಿರಾಟ ವೈಫಲ್ಯ ಮತ್ತು ಸಾವಿಗೂ ಕಾರಣವಾಗಬಲ್ಲದು. ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿರುವ ವಯಸ್ಸಾದ ವ್ಯಕ್ತಿಗಳು ಈ ನ್ಯುಮೋನಿಯಾಕ್ಕೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.

ಅಪಾಯ ಹೊಂದಿರುವ ವರ್ಗಗಳು

ವಾಕಿಂಗ್ ನ್ಯುಮೋನಿಯಾ ಯಾರಿಗೆ ಬೇಕಾದರೂ ಬರಬಹುದು,ಆದರೆ ಈ ಕೆಳಗಿನ ವರ್ಗಗಳಲ್ಲಿ ಈ ರೋಗಕ್ಕೆ ಗುರಿಯಾಗುವ ಅಪಾಯ ಹೆಚ್ಚಾಗಿರುತ್ತದೆ.

ಎರಡು ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳು

65 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾದವರು

ದುರ್ಬಲ ನಿರೋಧಕ ಶಕ್ತಿ ಹೊಂದಿರುವವರು

ದೀರ್ಘಕಾಲಿಕ ಅನಾರೋಗ್ಯಗಳಿಂದ ಬಳಲುತ್ತಿರುವವರು

ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವ ರೋಗಿಗಳು

ತಂಬಾಕು ಸೇವಿಸುವವರು

ರೋಗನಿರೋಧಕ ಔಷಧಿಗಳನ್ನು ಸೇವಿಸುವವರು

ಚಿಕಿತ್ಸೆ

 ಹೆಚ್ಚಿನ ಪ್ರಕರಣಗಳಲ್ಲಿ ವಾಕಿಂಗ್ ನ್ಯುಮೋನಿಯಾವನ್ನು ಮನೆಯಲ್ಲಿಯೇ ಸುಲಭವಾಗಿ ನಿಯಂತ್ರಿಸಬಹುದು. ಹೆಚ್ಚಿನವರಲ್ಲಿ ಲಕ್ಷಣಗಳು ಒಂದು ವಾರದಲ್ಲಿಯೇ ಶಮನಗೊಳ್ಳುತ್ತವೆ. ಲಕ್ಷಣಗಳು ಮುಂದುವರಿದರೆ ಮಾತ್ರ ಸೂಕ್ತ ವೈದ್ಯಕೀಯ ನೆರವು ಅಗತ್ಯವಾಗಬಹುದು. ವಾಕಿಂಗ್ ನ್ಯುಮೋನಿಯಾ ಸಾಂಕ್ರಾಮಿಕವಾಗಿದ್ದು,ತುಂತುರು ಹನಿಗಳ ಮೂಲಕ ಇನ್ನೊಬ್ಬರಿಗೆ ಹರಡುತ್ತದೆ. ಆದರೆ ಲಕ್ಷಣಗಳು ತೀವ್ರವಾಗಿದ್ದಾಗ ಮಾತ್ರ ಈ ರೋಗವು ಸಾಂಕ್ರಾಮಿಕಗೊಳ್ಳುತ್ತದೆ.

ಸಾಮಾನ್ಯವಾಗಿ ಈ ಬ್ಯಾಕ್ಟೀರಿಯಾ ಸೋಂಕನ್ನು ಆ್ಯಂಟಿಬಯಾಟಿಕ್‌ಗಳ ಮೂಲಕ ಸುಲಭವಾಗಿ ನಿಯಂತ್ರಿಸಬಹುದು. ಗಂಭೀರ ಪ್ರಕರಣಗಳಲ್ಲಿ ಮಾತ್ರ ರೋಗಿಯು ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News