ಮಲ್ಲೋರ್ಕಾವನ್ನು ಮಣಿಸಿದ ಬಾರ್ಸಿಲೋನಾ

Update: 2020-06-15 04:31 GMT

 ಬಾರ್ಸಿಲೋನಾ, ಜೂ.14: ಆರ್ಟುರೊ ವಿಡಾಲ್, ಮಾರ್ಟಿನ್‌ಬ್ರೈಥ್‌ವೈಟ್, ಜೋರ್ಡಿ ಆಲ್ಬಾ ಮತ್ತು ಲಿಯೋನೆಲ್ ಮೆಸ್ಸಿ ದಾಖಲಿಸಿದ ಗೋಲುಗಳ ನೆರವಿನಲ್ಲಿ ಎಫ್‌ಸಿ ಬಾರ್ಸಿಲೋನಾ ತಂಡ ಶನಿವಾರ ಲಾ ಲಿಗಾ ಪಂದ್ಯದಲ್ಲಿ ಆರ್‌ಸಿಡಿ ಮಲ್ಲೋರ್ಕಾ ವಿರುದ್ಧ 4-0 ಅಂತರದಲ್ಲಿ ಗೆಲುವು ಸಾಧಿಸಿದೆ.

  ಬಾರ್ಸಿಲೋನಾ ನಾಯಕ ಮೆಸ್ಸಿ ಎರಡು ಗೋಲು ಗಳಿಸಲು ನೆರವಾದರು. ಇದರೊಂದಿಗೆ ಕೋವಿಡ್-19 ಕಾರಣದಿಂದಾಗಿ ಮೂರು ತಿಂಗಳಿನಿಂದ ಸ್ಥಗಿತಗೊಂಡಿದ್ದ ಫುಟ್ಬಾಲ್ ಮತ್ತೆ ಆರಂಭಗೊಂಡಿದೆ.

 ಎರಡನೇ ನಿಮಿಷದಲ್ಲಿ ಚಿಲಿಯ ಮಿಡ್‌ಫೀಲ್ಡರ್ ಆರ್ಟುರೊ ವಿಡಾಲ್ ಡೈವಿಂಗ್ ಹೆಡರ್‌ನೊಂದಿಗೆ ಗೋಲು ಗಳಿಸಿ ಚಾಂಪಿಯನ್ ಬಾರ್ಸಿಲೋನಾ ತಂಡದ ಗೋಲು ಖಾತೆ ತೆರೆದರು. ಡ್ಯಾನಿಶ್ ಅಂತರ್‌ರಾಷ್ಟ್ರೀಯ ಮಾರ್ಟಿನ್ ಬ್ರೈಥ್ ಮೊದಲಾರ್ಧದಲ್ಲಿ ಬಾರ್ಸಿಲೋನಾ ಪರ ತನ್ನ ಮೊದಲ ಗೋಲನ್ನು ಗಳಿಸಿದರು.

  ಜೋರ್ಡಿ ಆಲ್ಬಾ 79ನೇ ನಿಮಿಷದಲ್ಲಿ ಬಾರ್ಸಿಲೋನಾ ಖಾತೆಗೆ ಗೋಲು ಜಮೆ ಮಾಡಿದರು. ಬಳಿಕ ಮೆಸ್ಸಿ ಅವರು ಬ್ರೈಥ್‌ವೈಟ್ ಅವರಿಗೆ ಹೆಡರ್ ಮೂಲಕ ಗೋಲು ಕಬಳಿಸಲು ನೆರವಾದರು. ಕೊನೆಯಲ್ಲಿ ನಾಯಕ ಮೆಸ್ಸಿ ಗೋಲು ಗಳಿಸಿ ಸತತ 12 ನೇ ಋತುವಿನಲ್ಲಿ ಗಳಿಸಿದ ಲೀಗ್ ಗೋಲುಗಳ ಸಂಖ್ಯೆಯನ್ನು 20ಕ್ಕೆ ಏರಿಸಿದರು. ಈ ಗೆಲುವು ಬಾರ್ಸಿಲೋನಾದ ಪಾಯಿಂಟ್ಸ್‌ನ್ನು61ಕ್ಕೆ ಏರಿಸಿದೆ. ಈ ಋತುವಿನಲ್ಲಿ ಬಾರ್ಸಿಲೋನಾ 28 ಪಂದ್ಯಗಳನ್ನು ಆಡಿದೆ. ‘‘ನಾವು ಆಟದಲ್ಲಿ ನಿಯಂತ್ರಣ ಹೊಂದಿದ್ದೇವೆ. ಮೂರು ತಿಂಗಳ ವಿಶ್ರಾಂತಿ ಬಳಿಕ ಇದು ಉತ್ತಮ ಪ್ರದರ್ಶನವಾಗಿದೆ ’’ ಎಂದು ಗೋಲ್ ಸ್ಕೋರರ್ ಆಲ್ಬಾ ಹೇಳಿದರು. ‘‘ನಮ್ಮ ತಂಡಕ್ಕೆ 10 ಗೆಲ್ಲಲೇಬೇಕಾದ ಪಂದ್ಯಗಳನ್ನು ಹೊಂದಿದ್ದೇವೆ ಮತ್ತು ನಾವು ಪಂದ್ಯಗಳನ್ನು ಎದುರು ನೋಡುತ್ತಿದ್ದೇವೆ’’ ಎಂದರು.

  ಕೊರೋನ ವೈರಸ್ ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ಈ ಆಟವನ್ನು ಮುಚ್ಚಿದ ಬಾಗಿಲುಗಳ ಹಿಂದೆ ಆಡಲಾಯಿತು. ಆರು ತಿಂಗಳ ಹಿಂದೆ ಮೊಣಕಾಲಿಗೆ ಗಾಯಮಾಡಿಕೊಂಡಿದ್ದ ಲೂಯಿಸ್ ಸುವರೆಝ್ ಮೊದಲ ಬಾರಿಗೆ ಕಾಣಿಸಿಕೊಂಡು, ದ್ವಿತೀಯಾರ್ಧದಲ್ಲಿ ಆಡಿದರು. ಮಲ್ಲೋರ್ಕಾ ಲಾ ಲಿಗಾದಲ್ಲಿ ಸತತ ಸೋಲಿನಿಂದ ಕೂಟದಿಂದ ಹೊರಬೀಳುವ ಹಾದಿಯಲ್ಲಿದೆ. ಮಲ್ಲೋರ್ಕಾ ತಂಡದಲ್ಲಿರುವ 19ರ ಹರೆಯದ ಜಪಾನಿನ ಪ್ಲೇಮೇಕರ್ ಟೇಕ್ಫುಸಾ ಕುಬೊ ಗೋಲು ಗಳಿಸಲು ಯತ್ನಿಸಿದರು. ಕುಬೊ ಮೊದಲಾರ್ಧದಲ್ಲಿ ಬಾರ್ಸಿಲೋನಾ ತಂಡದ ಕೀಪರ್ ಮಾರ್ಕ್-ಆಂಡ್ರೆ ಟೆರ್ ಸ್ಟೆಜೆನ್ ಅವರ ಕಣ್ಣು ತಪ್ಪಿಸಿ ಗೋಲು ಗಳಿಸಲು ನಡೆಸಿದ ಪ್ರಯತ್ನ ಫಲಕಾರಿಯಾಗಲಿಲ್ಲ. ಆಂಟೆ ಬುಡಿಮಿರ್, ಲಾಗೊ ಜೂನಿಯರ್ ಮತ್ತು ಅಬ್ಡಾನ್ ಪ್ರಾಟ್ಸ್ ದ್ವಿತಿಯಾರ್ಧದಲ್ಲಿ ಗುರಿಯತ್ತ ನುಗ್ಗಿದರೂ ಅಗಲವಾದ ಹೊಡೆತಗಳಿಂದಾಗಿ ಅವರ ಪ್ರಯತ್ನ ವಿಫಲಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News