ಅಂತರ್-ಕೊರಿಯ ಸಮನ್ವಯ ಕಚೇರಿಯನ್ನು ಧ್ವಂಸಗೊಳಿಸಿದ ಉತ್ತರ ಕೊರಿಯ

Update: 2020-06-16 17:00 GMT

ಸಿಯೋಲ್ (ದಕ್ಷಿಣ ಕೊರಿಯ), ಜೂ. 16: ಉತ್ತರ ಕೊರಿಯವು ಮಂಗಳವಾರ ಗಡಿಯ ತನ್ನ ಭಾಗದಲ್ಲಿರುವ ಅಂತರ್-ಕೊರಿಯ ಸಮನ್ವಯ ಕಚೇರಿಯನ್ನು ಧ್ವಂಸಗೊಳಿಸಿದೆ ಎಂದು ದಕ್ಷಿಣ ಕೊರಿಯದ ಏಕೀಕರಣ ಸಚಿವಾಲಯ ತಿಳಿಸಿದೆ.

‘‘ಉತ್ತರ ಕೊರಿಯವು ಮಧ್ಯಾಹ್ನ ಸುಮಾರು 2:30ಕ್ಕೆ ಕೇಸಾಂಗ್ ಸಮನ್ವಯ ಕಚೇರಿಯನ್ನು ಉಡಾಯಿಸಿದೆ’’ ಎಂದು ಉಭಯ ಕೊರಿಯಗಳ ನಡುವಿನ ಸಂಬಂಧವನ್ನು ನಿಭಾಯಿಸುವ ಸಚಿವಾಲಯವು ಸುದ್ದಿಗಾರರಿಗೆ ಕಳುಹಿಸಿದ ಒಂದು ಸಾಲಿನ ಹೇಳಿಕೆಯಲ್ಲಿ ತಿಳಿಸಿದೆ.

ಕೇಸಾಂಗ್‌ನಲ್ಲಿರುವ ಬಹುದಿನಗಳಿಂದ ಮುಚ್ಚಿರುವ ಜಂಟಿ ಕೈಗಾರಿಕಾರ ವಲಯದಿಂದ ಸ್ಫೋಟದ ಸದ್ದು ಕೇಳಿಸಿತು ಹಾಗೂ ಹೊಗೆ ಏಳುವುದು ಕಾಣಿಸಿತು. ಅದಾದ ನಿಮಿಷಗಳ ಬಳಿಕ ದಕ್ಷಿಣ ಕೊರಿಯದ ಕೊರಿಯ ಏಕೀಕರಣ ಸಚಿವಾಲಯ ಈ ಹೇಳಿಕೆ ನೀಡಿದೆ.

ಕೇಸಾಂಗ್‌ನಲ್ಲಿ ಸಮನ್ವಯ ಕಚೇರಿಯನ್ನು ಸುಮಾರು ಎರಡು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ಯೊನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘‘ಪ್ರಯೋಜನಕ್ಕೆ ಬಾರದ ಉತ್ತರ-ದಕ್ಷಿಣ ಜಂಟಿ ಸಮನ್ವಯ ಕಚೇರಿಯು ಸಂಪೂರ್ಣವಾಗಿ ಕುಸಿಯುವ ದುರಂತದ ದೃಶ್ಯವೊಂದು ಸ್ವಲ್ಪವೇ ಸಮಯದಲ್ಲಿ ಕಾಣಿಸಿಕೊಳ್ಳಲಿದೆ’’ ಎಂಬುದಾಗಿ ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ರ ಪ್ರಭಾವಿ ಸಹೋದರಿ ಕಿಮ್ ಯೊ ಜಾಂಗ್ ಕಳೆದ ವಾರಾಂತ್ಯದಲ್ಲಿ ಹೇಳಿದ್ದರು.

ಜೂನ್ ಆದಿ ಭಾಗದಿಂದ ಉತ್ತರ ಕೊರಿಯವು ದಕ್ಷಿಣ ಕೊರಿಯದ ಮೇಲೆ ಕಿಡಿ ಕಾರುತ್ತಾ ಬಂದಿದೆ ಹಾಗೂ ಹಲವಾರು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದೆ.

ಅಮೆರಿಕದೊಂದಿಗಿನ ಪರಮಾಣು ಮಾತುಕತೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಹತಾಶವಾಗಿರುವ ಉತ್ತರ ಕೊರಿಯವು ದಕ್ಷಿಣ ಕೊರಿಯದ ಮೇಲೆ ಒತ್ತಡ ಹೇರುವುದಕ್ಕಾಗಿ ಇಂಥ ಕೃತ್ಯಗಳನ್ನು ನಡೆಸುತ್ತಿದೆ ಎಂಬುದಾಗಿ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News