ಪ್ರತಿ 5ರಲ್ಲಿ ಓರ್ವನಿಗೆ ಗಂಭೀರ ಕೊರೋನ ವೈರಸ್ ಸೋಂಕು: ಅಧ್ಯಯನ ಎಚ್ಚರಿಕೆ

Update: 2020-06-16 17:05 GMT

ಪ್ಯಾರಿಸ್ (ಫ್ರಾನ್ಸ್), ಜೂ. 16: ಬೊಜ್ಜು ಮತ್ತು ಹೃದಯದ ಕಾಯಿಲೆಗಳಿಂದಾಗಿ ಜಗತ್ತಿನ ಸುಮಾರು 170 ಕೋಟಿ ಜನರು ಕೋವಿಡ್-19ರ ಗಂಭೀರ ಪರಿಣಾಮಕ್ಕೆ ಗುರಿಯಾಗಲಿದ್ದಾರೆ ಎಂದು ಮಂಗಳವಾರ ಅಧ್ಯಯನವೊಂದು ಎಚ್ಚರಿಸಿದೆ. ಈ ಸಂಖ್ಯೆಯು ಜಾಗತಿಕ ಜನಸಂಖ್ಯೆಯ 20 ಶೇಕಡಕ್ಕೂ ಅಧಿಕವಾಗಿದೆ.

ಈಗಾಗಲೇ ಜಗತ್ತಿನಾದ್ಯಂತ 4.20 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿರುವ ಸಾಂಕ್ರಾಮಿಕವು, ಇತರ ಕಾಯಿಲೆಗಳನ್ನು ಹೊಂದಿರುವ ಜನರನ್ನು ಗಂಭೀರವಾಗಿ ಕಾಡುತ್ತದೆ.

ಲಂಡನ್ ಸ್ಕೂಲ್ ಆಫ್ ಹೈಜೀನ್ ಆ್ಯಂಡ್ ಟ್ರಾಪಿಕಲ್ ಮೆಡಿಸಿನ್‌ನ ಪರಿಣತರ ತಂಡವೊಂದು ಮಧುಮೇಹ, ಶ್ವಾಸಕೋಶದ ಕಾಯಿಲೆ ಮತ್ತು ಎಚ್‌ಐವಿ ಸೇರಿದಂತೆ ಹಲವು ಕಾಯಿಲೆಗಳ ಜಾಗತಿಕ ಅಂಕಿಸಂಖ್ಯೆಗಳನ್ನು ವಿಶ್ಲೇಷಿಸಿದೆ ಹಾಗೂ ಕೋವಿಡ್-19 ಸೋಂಕಿನ ಗಂಭೀರ ಅಪಾಯಕ್ಕೆ ಎಷ್ಟು ಮಂದಿ ಗುರಿಯಾಗಲಿದ್ದಾರೆ ಎಂಬುದನ್ನು ಲೆಕ್ಕಹಾಕಿದೆ.

ಜಾಗತಿಕ ಜನಸಂಖ್ಯೆಯ ಪ್ರತಿ 5ರಲ್ಲಿ ಓರ್ವ ವ್ಯಕ್ತಿ ಕನಿಷ್ಠ ಒಂದಾದರೂ ಇತರ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದಾರೆ ಹಾಗೂ ಅಂಥವರು ಕೊರೋನ ವೈರಸ್ ಸೋಂಕಿನ ಹೆಚ್ಚಿನ ಅಪಾಯಕ್ಕೆ ಗುರಿಯಾಗುತ್ತಾರೆ ಎಂಬುದನ್ನು ಅವರು ಕಂಡುಕೊಂಡಿದ್ದಾರೆ.

ಜಾಗತಿಕ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಈಗಾಗಲೇ 80 ಲಕ್ಷವನ್ನು ದಾಟಿದೆ ಹಾಗೂ ಚೀನಾದಲ್ಲಿ ಸೋಂಕುಗಳ ಎರಡನೇ ಅಲೆಯ ಭೀತಿ ಕಾಣಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News